Sunday, 15th December 2024

Yuvraj Singh: ತಂದೆಗೆ ಮಾನಸಿಕ ಸಮಸ್ಯೆಯಿದೆ ಎಂದ ಯುವರಾಜ್​ ಸಿಂಗ್‌

Yuvraj Singh

ಮುಂಬಯಿ: 2 ದಿನಗಳ ಹಿಂದಷ್ಟೇ ಕ್ರಿಕೆಟಿಗ ಯುವರಾಜ್‌ ಸಿಂಗ್‌(Yuvraj Singh) ತಂದೆ ಯೋಗರಾಜ್‌ ಸಿಂಗ್‌(Yograj Singh) ಅವರು  ಮಹೇಂದ್ರ ಸಿಂಗ್‌ ಧೋನಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ನನ್ನ ಮಗನ ಕ್ರಿಕೆಟ್‌ ಕೆರಿಯರ್‌ ಹಾಳು ಮಾಡಿದ್ದೇ ಧೋನಿ(MS Dhoni) ಎಂದು ಗಂಭೀರ ಆರೋಪ ಮಾಡಿದ್ದರು. ಇದೀಗ ಯುವರಾಜ್‌ ಸಿಂಗ್‌ ತನ್ನ ತಂದೆಗೆ ಮಾನಸಿಕ ಸಮಸ್ಯೆ ಇದೆ ಎಂದು ಹೇಳಿರುವ ವಿಡಿಯೊವೊಂದು ವೈರಲ್‌ ಆಗಿದೆ.

9 ತಿಂಗಳ ಹಿಂದೆ ಪಾಡ್​​ಕಾಸ್ಟ್​ವೊಂದರಲ್ಲಿಮಾತನಾಡಿದ್ದ ಯುವರಾಜ್​ ಸಿಂಗ್​​​, ತಮ್ಮ ಕ್ರಿಕೆಟ್‌ ವೃತ್ತಿಜೀವನದ ಬಗ್ಗೆ ಸೇರಿ ಹಲವು ವಿಚಾರವನ್ನು ತಿಳಿಸಿದ್ದರು. ಈ ವೇಳೆ ಸಂದರ್ಶಕ ತಂದೆಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ಯುವರಾಜ್‌ ಸಿಂಗ್‌, ‘ನಮ್ಮ ತಂದೆಗೆ ಮಾನಸಿಕ ಸಮಸ್ಯೆಯಿದೆ ಎಂದು ನಾನು ಭಾವಿಸುತ್ತೇನೆ. ಆದರೆ ಅವರು ಮಾತ್ರ ಇದನ್ನು ಒಪ್ಪಿಕೊಳ್ಳುವುದಿಲ್ಲ. ಹಲವು ಬಾರಿ ಈ ಬಗ್ಗೆ ಅವರಿಗೆ ಎಚ್ಚರಿಕೆ ನೀಡಿದ್ದರೂ ಕೂಡ ಇದು ಪ್ರಯೋಜನಕ್ಕೆ ಬಾರಲಿಲ್ಲ. ಯಾವುದೇ ವಿಚಾರವನ್ನು ಅವರು ಗಂಭೀರವಾಗಿ ಪರಿಗಣಿಸುತ್ತಾರೆ’ ಎಂದು ಹೇಳಿದ್ದರು. ಅಂದು ಯುವಿ ಹೇಳಿದ್ದ ಈ ಮಾತಿನ ವಿಡಿಯೊ ಈಗ ವೈರಲ್‌ ಆಗಿದೆ.

https://x.com/sportswnaveen/status/1830585610362667479

ಯುವಿ ತಂದೆ ಹೇಳಿದ್ದೇನು?

ಜೀ ಸ್ವಿಚ್‌ನ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಯುವಿ ತಂದೆ ಯೋಗರಾಜ್‌, ನನ್ನ ಮಗ ಯುವರಾಜ್‌ ಸಿಂಗ್‌ಗೆ  ವಿದಾಯ ಪಂದ್ಯವನ್ನು ಕೂಡ ಆಡಲು ಸಾಧ್ಯವಾಗಲಿಲ್ಲ. ಇದಕ್ಕೆ ಕಾರಣ ಅಂದು ನಾಯಕನಾಗಿದ್ದ ಧೋನಿ. 2011ರ ವಿಶ್ವಕಪ್‌ ವೇಳೆಯಲ್ಲಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದರೂ ಕೂಡ ಆತ ದೇಶಕ್ಕಾಗಿ ಛಲ ಬಿಡದೆ ಆಡಿದ್ದ. ಫೈನಲ್‌ ಪಂದ್ಯದ ಹಿಂದಿನ ದಿನ ರಕ್ತ ಕಾರಿದ್ದು ನೀವೆಲ್ಲ ನೋಡಿದ್ದೀರಿ. ಅಂತಹ ಆಟಗಾರನ ಕ್ರಿಕೆಟ್‌ ವೃತ್ತಿಜೀವನವನ್ನು ಹಾಳು ಮಾಡಿದ್ದು ಧೋನಿ. ಹೀಗಾಗಿ ನಾನು ಧೋನಿಯನ್ನು ಎಂದಿಗೂ ಕ್ಷಮಿಸುವುದಿಲ್ಲ. ಧೋನಿ ಒಂದು ಬಾರಿ ತನ್ನ ಮುಖವನ್ನು ಕನ್ನಡಿಯಲ್ಲಿ ತಾನೇ ನೋಡಿಕೊಳ್ಳಲಿʼ ಎಂದು  ಗಂಭೀರ ಆರೋಪ ಮಾಡಿದ್ದರು.

ಮಗನಿಗೆ ಅನ್ಯಾಯವಾದಾಗಲೆಲ್ಲ ಯೋಗರಾಜ್‌ ಎಲ್ಲರ ಮೇಲೆರಗಿ ಹೋಗುತ್ತಾರೆ. ಈ ಹಿಂದೆ ಬಹಿರಂಗವಾಗಿಯೇ  ಬಿಸಿಸಿಐ, ಸೇರಿ ಹಲವು ಕ್ರಿಕೆಟಿಗರ ವಿರುದ್ಧ ನೇರ ಆರೋಪ ಮಾಡಿ ಎಲ್ಲರ ವಿರೋಧ ಕಟ್ಟಿಕೊಂಡಿದ್ದರು. ಯೋಗರಾಜ್‌ ಸಿಂಗ್‌ ಕೂಡ ಭಾರತ ತಂಡದ ಮಾಜಿ ಆಟಗಾರನಾಗಿದ್ದಾರೆ. ಭಾರತವನ್ನು ಟೆಸ್ಟ್‌ ಕ್ರಿಕೆಟ್‌ನಲ್ಲಿ ಪ್ರತಿನಿಧಿಸಿದ್ದ ಅವರು ಒಂದು ಕಾಲದಲ್ಲಿ ಕಪಿಲ್‌ದೇವ್‌ ಅವರ ಬೌಲಿಂಗ್‌ ಜತೆಗಾರನಾಗಿದ್ದರು. ಜತೆಗೆ ಉತ್ತಮ ಕ್ಷೇತ್ರರಕ್ಷಕನೂ ಆಗಿದ್ದರು.