Saturday, 28th September 2024

Yuzvendra Chahal: ಯದುವೀರ್ ಭೇಟಿಯಾದ ಕ್ರಿಕೆಟಿಗ ಚಹಲ್

yuzvendra chahal

ಮೈಸೂರು: ಭಾರತ ತಂಡದ ಹಿರಿಯ ಸ್ಪಿನ್ನರ್‌ ಯಜುವೇಂದ್ರ ಚಹಲ್‌(yuzvendra chahal) ಅವರು ಬಿಜೆಪಿ ಸಂಸದ, ಮೈಸೂರಿನ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್(Yaduveer Wadiyar) ಅವರನ್ನು ಭೇಟಿ ಮಾಡಿದ್ದಾರೆ. ಚಹಲ್‌ ಭೇಟಿಯ ಪೋಟೊವನ್ನು ಯದುವೀರ್ ತಮ್ಮ ಅಧಿಕೃತ ಟ್ವಿಟರ್‌ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಚಹಲ್‌ ಮೈಸೂರಿಗೆ ಆಗಮಿಸಿದ್ದ ವೇಳೆ ಕಚೇರಿಗೆ ಬಂದು ನನ್ನನ್ನು ಭೇಟಿಯಾದರು ಎಂದು ಯದುವೀರ್ ಬರೆದುಕೊಂಡಿದ್ದಾರೆ. ಚಹಲ್‌ಗೆ ಮೈಸೂರು ಪೇಟ ತೊಡಿಸಿ ಸನ್ಮಾನಿಸಲಾಯಿತು. ಚಹಲ್‌ ಕೂಡ ಯದುವೀರ್ ಅವರನ್ನು ಭೇಟಿ ಮಾಡಿದ್ದು ಅಪಾರ ಸಂತಸ ತಂದಿದೆ ಎಂದು ಬರೆದುಕೊಂಡಿದ್ದಾರೆ.

32 ವರ್ಷ ವಯಸ್ಸಿನ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್ ಕಳೆದ ಲೋಕಸಭಾ ಚುನಾವಣೆಯಲ್ಲಿ ಮೈಸೂರು–ಕೊಡಗು ಕ್ಷೇತ್ರದಿಂದ ಸ್ಪರ್ಧಿಸಿ ಬರೋಬ್ಬರಿ 1,39262 ಮತಗಳ ಅಂತರದಿಂದ ಭರ್ಜರಿ ಜಯ ಸಾಧಿಸಿದ್ದರು.

ಭಾರತ ತಂಡದಲ್ಲಿ ಅವಕಾಶ ವಂಚಿತ

ಕಳೆದ ವರ್ಷ ನಡೆದಿದ್ದ ಏಷ್ಯಾ ಕಪ್​ ಮತ್ತು ಏಕದಿನ ವಿಶ್ವಕಪ್​ನಲ್ಲಿಯೂ ಯಜುವೇಂದ್ರ ಚಾಹಲ್‌ಗೆ ಅವಕಾಶ ಸಿಕ್ಕಿರಲಿಲ್ಲ. ಇದೇ ವರ್ಷ ನಡೆದಿದ್ದ ಟಿ20 ವಿಶ್ವಕಪ್‌ನಲ್ಲಿ ಸ್ಥಾನ ಪಡೆದರೂ ಕೂಡ ಆಡುವ ಬಳಗದಲ್ಲಿ ಕಾಣಿಸಿಕೊಂಡಿರಲಿಲ್ಲ. ಚಹಲ್​ ಇದುವರೆಗೆ ಭಾರತ ಪರ 72 ಏಕದಿನ ಪಂದ್ಯಗಳಿಂದ 121 ವಿಕೆಟ್​, 80 ಟಿ20 ಆಡಿ 96 ವಿಕೆಟ್​ ಕಡೆವಿದ್ದಾರೆ. ಇದುವರೆಗೂ ಟೆಸ್ಟ್​ ಕ್ರಿಕೆಟ್​ ಆಡಿಲ್ಲ. ಚಹಲ್‌ ಭಾರತ ಪರ ಕೊನೆಯ ಬಾರಿಗೆ ಆಡಿದ್ದು 2023ರಲ್ಲಿ. ಇದಾದ ಬಳಿಕ ಅವರಿಗೆ ಸರಿಯಾದ ಅವಕಾಶ ಸಿಗಲೇ ಇಲ್ಲ. ಇವರ ಸ್ಥಾನದಲ್ಲಿ ಕುಲ್‌ದೀಪ್‌ ಯಾದವ್‌ ಮಿಂಚತೊಡಗಿದರು. ಇನ್ನೊಂದೆಡೆ ಅಕ್ಷರ್‌ ಪಟೇಲ್‌ ಕೂಡ ಬೌಲಿಂಗ್‌ ಜತೆಗೆ ಬ್ಯಾಟಿಂಗ್‌ನಲ್ಲಿಯೂ ನಿರೀಕ್ಷತ ಪ್ರದರ್ಶನ ತೋರುತ್ತಿರುವುದು ಕೂಡ ಚಹಲ್‌ಗೆ ಅವಕಾಶ ಸಿಗದಂತಾಯಿತು.

ಇದನ್ನೂ ಓದಿ ENG vs AUS: ಆಂಗ್ಲರ ಬ್ಯಾಟಿಂಗ್‌ ಆರ್ಭಟ; ಆಸೀಸ್‌ಗೆ ಹೀನಾಯ ಸೋಲು

ಯಜುವೇಂದ್ರ ಚಹಲ್​ ಮತ್ತು ಧನಶ್ರೀ ವರ್ಮಾ ಮಧ್ಯೆ ಎಲ್ಲವೂ ಸರಿಯಿಲ್ಲ. ಶೀಘ್ರದಲ್ಲೇ ಈ ಜೋಡಿ ದೂರವಾಗಲಿದ್ದಾರೆ ಎಂದು ಹಲವು ಬಾರಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿಯಾಗಿತ್ತು. ಆದರೆ ಈ ಜೋಡಿ ಮಾತ್ರ ಈ ಮಾತಿಗೆ ಕ್ಯಾರೆ ಎನ್ನದೆ ನಮ್ಮ ಸಂಸಾರದ ಮಧ್ಯೆ ಯಾವುದೇ ಬಿರುಕು ಮೂಡಿಲ್ಲ ಎಂದು ಹಲವು ಬಾರಿ ತೋರಿಸಿಕೊಟ್ಟಿದ್ದಾರೆ. ಇಬ್ಬರೂ ಕೂಡ ಹಲವು ಬಾರಿ ವಿದೇಶ ಪ್ರವಾಸದಲ್ಲಿ ಜಾಲಿ ಮೂಡ್​ನಲ್ಲಿರುವ ಫೋಟೊಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.