ಬೆಂಗಳೂರು:
ಸಿಎಂ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಸಕ್ರಮೀಕರಣ ಉಪಸಮಿತಿ ಸಭೆ ನಡೆಸಲಾಯಿತು.
ಬಿಡಿಎ ವ್ಯಾಪ್ತಿಯಲ್ಲಿ 2008ರ ಹಿಂದೆ ಅಕ್ರಮವಾಗಿ ನಿರ್ಮಿಸಿರುವ ಮನೆಗಳನ್ನ ಸಕ್ರಮ ಮಾಡುವುದರಿಂದ ಸರ್ಕಾರಕ್ಕೆ 50 ಸಾವಿರ ಕೋಟಿ ಲಾಭ ಬರುತ್ತದೆ. ತಕ್ಷಣವೇ ಇದನ್ನು ಜಾರಿಗೆ ತರುವಂತೆ ಅಧಿಕಾರಿಗಳು ಸಭೆಯಲ್ಲಿ ಸಿಎಂಗೆ ಸಲಹೆ ನೀಡಿದರು. ಈ ಸಂಕಷ್ಟ ಸಮಯದಲ್ಲಿ ಇದನ್ನು ಜಾರಿಗೆ ತಂದರೆ ಲಾಕ್ ಡೌನ್ ಸಂಕಷ್ಟದಿಂದ ಸರ್ಕಾರ ಪಾರಾಗಬಹುದು ಎಂದು ಅಧಿಕಾರಿಗಳು ಹೇಳಿದರು. ಆದರೆ, ಅಧಿಕಾರಿಗಳ ಈ ಸಲಹೆಗೆ ಕೆಲ ಸಚಿವರು ವಿರೋಧ ವ್ಯಕ್ತಪಡಿಸಿದರು.
ಇದರಿಂಧ ಸರ್ಕಾರಕ್ಕೆ ಯಾವುದೇ ಲಾಭಾಂಶ ಇಲ್ಲ ಎಂದು ಕೆಲ ಸಚಿವರು ಅಭಿಪ್ರಾಯಪಟ್ಟರು. ಕೊನೆಗೆ ಈ ಸಂಬಂಧ ಪ್ರಸ್ತಾವನೆ ಸಲ್ಲಿಸುವಂತೆ ಬಿಡಿಎ ಅಧಿಕಾರಿಗಳಿ ಸಿಎಂ ಬಿಎಸ್ವೈ ಸೂಚನೆ ನೀಡಿದರು. ಸಭೆ ಯಾವುದೇ ಅಂತಿಮ ನಿರ್ಧಾರವಿಲ್ಲದೆ ಮುಕ್ತಾಯಗೊಂಡಿತು.
ಸಭೆಯಲ್ಲಿ ಕಂದಾಯ ಸಚಿವ ಆರ್. ಅಶೋಕ್, ವಸತಿ ಸಚಿವ ವಿ.ಸೋಮಣ್ಣ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್, ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಭಾಗಿಯಾಗಿದ್ದರು.