Thursday, 12th December 2024

ಅಧಿಕ ಬೆಲೆಗೆ ಮಾರಾಟದ ಮೇಲೆ ಹದ್ದಿನ ಕಣ್ಣು..!

ವಿಶ್ವವಾಣಿ ಸುದ್ದಿಮನೆ

ಬೆಂಗಳೂರು :

ಕರೋನ ಸೋಂಕು ನೆಪವಾಗಿಟ್ಟುಕೊಂಡು ಮಾಸ್ಕ್ ಹಾಗೂ ಸ್ಯಾನಿಟೈಸರ್ ಗಳನ್ನು ಅಧಿಕ ಬೆಲೆಗೆ ಮಾರಾಟ ಮಾಡುವ ಮಳಿಗೆಗಳ ಮೇಲೆ ದಾಳಿ ನಡೆಸಿ, ಕಾನೂನು ಕ್ರಮ ಜರುಗಿಸಲಾಗುವುದು ಎಂದು ಕಾನೂನು ಮಾಪನಶಾಸ್ತ್ರ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಕರೋನ ವೈರಸ್ ಭಯದಿಂದ ರಾಜ್ಯದಲ್ಲಿ ಜನರು ಮಾಸ್ಕ್ ಹಾಗೂ ಸ್ಯಾನಿಟೈಸರ್ ಖರೀದಿಗೆ ಮುಂದಾಗಿದ್ದಾರೆ. ಇಂತಹ ಸಂದರ್ಭವನ್ನು ದುರುಪಯೋಗ ಪಡೆಯದಂತೆ ಔಷಧಿ ಅಂಗಡಿಗಳು ನಡೆದುಕೊಳ್ಳಬೇಕು. ಈಗಾಗಲೇ ಆಹಾರ ಇಲಾಖೆ, ಔಷಾಧಿ ನಿಯಂತ್ರಣ ಇಲಾಖೆ ಹಾಗೂ ಕಾನೂನು ಮಾಪನ ಇಲಾಖೆಗಳು ಜಂಟಿಯಾಗಿ ಜಿಲ್ಲೆ ಯಾದ್ಯಂತ ಕಾರ್ಯನಿರ್ವಹಿಸುತ್ತಿವೆ.

ರಾಜ್ಯದಲ್ಲಿ ಕೆಲವು ಔಷಧಿ ಅಂಗಡಿಗಳು ಜನರ ಭಯವನ್ನು ಬಂಡವಾಳ ಮಾಡಿಕೊಂಡಿರುವ ಮಾಹಿತಿ ದೊರಕಿದೆ. ಕೂಡಲೇ ಜನಸ್ನೇಹಿ ವ್ಯಾಪಾರ-ವಹಿವಾಟಿಗೆ ಮುಂದಾಗುವಂತೆ ಸೂಚಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಮುಂದಾಗಿದ್ದೇವೆ. ಗ್ರಾಹಕರು ಇಂತಹ ಜಾಲ ಕಂಡು ಬಂದಲ್ಲಿ ಮಾಹಿತಿ ನೀಡಬೇಕು ಎಂದು ಕಾನೂನು ಮಾಪನ ಇಲಾಖೆ ಮನವಿ ಮಾಡಿದೆ.