Sunday, 15th December 2024

ಅಬಕಾರಿ ಇಲಾಖೆಯಿಂದ ಸರಕಾರಕ್ಕೆ ನೂರಾರು ಕೋಟಿ ಆದಾಯ ಖೋತಾ!

 -ಅಬಕಾರಿ ಇಲಾಖೆ ಅಧಿಕಾರಿಗಳಿಂದಲೇ ನಷ್ಟ
 -119 ಸಿಎಲ್2 ವೈನ್‌ ಶಾಪ್ ಬಂದ್ ಹಿನ್ನೆಲೆ
ವಿಶ್ವವಾಣಿ‌ ವಿಶೇಷ
ಬೆಂಗಳೂರು:
ರಾಜಸ್ವಕ್ಕೆ ಹೆಚ್ಚು ಆದಾಯ ತಂದುಕೊಡುವ ಪ್ರಮುಖ ಇಲಾಖೆಗಳಲ್ಲಿ ಒಂದಾದ ಅಬಕಾರಿ ಇಲಾಖೆಯ ಅಧಿಕಾರಿಗಳಿಂದಲೇ ಸರಕಾರಕ್ಕೆ ಸಾವಿರಾರು ಕೋಟಿ ರು. ಆದಾಯ ಖೋತಾ ಆಗುತ್ತಿರುವುದು ತಡವಾಗಿ ಬೆಳಕಿಗೆ ಬಂದಿದೆ.
ರಾಜ್ಯಾದ್ಯಂತ ಒಟ್ಟು 4,206 ವೈನ್‌ಶಾಪ್(ಸಿಎಲ್2) ಅಂಗಡಿಗಳಿವೆ. ಈ ಪೈಕಿ ಜಂಟಿ ಮಾಲೀಕತ್ವ, ವಿವಾದ, ಮಾಲೀಕರ ನಿಧನ ಮತ್ತಿತರರ ಕಾರಣಗಳಿಂದ 119 ಅಂಗಡಿಗಳ ಪರವಾನಗಿ ಈವರೆಗೂ ನವೀಕರಣಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಚಾಲ್ತಿಯಲ್ಲಿದ್ದ ಅಂಗಡಿಗಳನ್ನು ಮುಚ್ಚಿದ್ದರಿಂದ ಪ್ರತಿ ವರ್ಷಕ್ಕೆ  422 ಕೋಟಿ ರು. ಆದಾಯ ಖೋತಾ ಆಗುತ್ತಿದೆ.
ಎರಡು ಬಾರಿ ಅವಕಾಶ ನೀಡಿದ್ದರೂ 125 ಅಂಗಡಿಗಳ ಪೈಕಿ 6 ಅಂಗಡಿಗಳ ಮಾಲೀಕರು  ಶುಲ್ಕ ಕಟ್ಟಿ ನವೀಕರಣ ಮಾಡಿಸಿಕೊಂಡಿದ್ದಾರೆ. ಆದರೆ,ಉಳಿದವರು ನವೀಕರಣ ಮಾಡಿಸಿಕೊಂಡಿಲ್ಲ. ಒಂದು ವೇಳೆ  ನವೀಕರಣವಾಗದ ಅಂಗಡಿಗಳನ್ನು ಇಲಾಖೆ ಅಧಿಕಾರಿಗಳು ಬೇರೆಯವರಿಗೆ ಅಂಗಡಿ ನಡೆಸಲು ಅವಕಾಶ ನೀಡಿದ್ದರೆ ಒಂದು  ವರ್ಷಕ್ಕೆ ಪ್ರತಿ ಅಂಗಡಿಯಲ್ಲಿ ನಡೆಯುವ ಮದ್ಯ ವಹಿವಾಟುಗಳಿಂದ 3.5 ಕೋಟಿ ರು.ನಂತೆ ಲೆಕ್ಕ ಹಾಕಿದರೆ 119 ಅಂಡಿಗಳಿಗೆ 416 ಕೋಟಿ ರೂ ಹಾಗೂ ಪ್ರತಿ ವರ್ಷ ಲೈಸೆನ್ಸ್ ನವೀಕರಣದಿಂದ 6 ಕೋಟಿ ರು. ಸೇರಿ ಒಟ್ಟು 422 ಕೋಟಿ ರು. ಆದಾಯ ಬರುತ್ತಿತ್ತು. ಆದರೆ, ಇಲಾಖೆಯ ಅಧಿಕಾರಿಗಳ ಕರ್ತವ್ಯಲೋಪದಿಂದ ಸಾವಿರಾರು ಕೋಟಿ ರು.ಆದಾಯ ಖೋತಾ ಆಗುತ್ತಿರುವುದು ವಿಪರ‌್ಯಾಸ.
ಅಲ್ಲದೆ, ಮೂಲ ಮಾಲೀಕರು ತಮ್ಮ ಅಂಗಡಿಗಳ ಪರವಾನಗಿ ನವೀಕರಣ ಮಾಡಿಕೊಳ್ಳದಿದ್ದರೆ ಬೇರೆಯವರಿಗೆ ಶುಲ್ಕ ಕಟ್ಟಿ ಅಂಗಡಿ ನಡೆಸಲು ಅವಕಾಶ ನೀಡಿದ್ದರೆ  ಮದ್ಯ ವಹಿವಾಟು ಹಾಗೂ ಲೈಸೆನ್ಸ್ ನವೀಕರಣದಿಂದ ಪ್ರತಿ ವರ್ಷಕ್ಕೆ ನೂರಾರು ಕೋಟಿ ರೂ. ಆದಾಯ ಬರುತ್ತಿತ್ತು ಎಂದು ಪ್ರಧಾನ ಲೆಕ್ಕಪರಿಶೋಧಕರ ವರದಿಯಲ್ಲಿ ಬಹಿರಂಗವಾಗಿದೆ.
ಮುಚ್ಚಿರುವ ಜಿಲ್ಲಾವಾರು ಅಂಗಡಿಗಳು
ಬೆಂಗಳೂರು, ಬೆಂ.ಗ್ರಾಮಾಂತರ ಚಿಕ್ಕಬಳ್ಳಾಪುರಕೋಲಾರ , ತುಮಕೂರು, ಬಾಗಲಕೋಟೆ, ಬೆಳಗಾವಿ, ವಿಜಯಪುರ, ಧಾರವಾಡ, ಹಾವೇರಿ, ಕಲಬುರಗಿ, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಗದಗ, ದಕ್ಷಿಣ ಕನ್ನಡ , ಕೊಡಗು, ಶಿವಮೊಗ್ಗ,ಉಡುಪಿ , ಉತ್ತರ ಕನ್ನಡ, ಚಾಮರಾಜನಗರ, ಚಿಕ್ಕಮಗಳೂರು, ಮಂಡ್ಯ, ಮೈಸೂರು ಮತ್ತಿತರರ ಜಿಲ್ಲೆಗಳಲ್ಲಿ ವೈನ್ ಶಾಪ್ ಗಳನ್ನು ಮುಚ್ಚಲಾಗಿದೆ.
ಖೋಟಾ ನಿಗದಿ 
ಅಬಕಾರಿ ನಿಯಮದಂತೆ ಸಿಎಲ್2 ಖೋಟಾದಡಿ ನಗರ ಪ್ರದೇಶಕ್ಕೆ 2,158 ಹಾಗೂ ಗ್ರಾಮೀಣ ಪ್ರದೇಶಕ್ಕೆ 2,048 ಸೇರಿ ಒಟ್ಟು  4,206 ಅಂಗಡಿಗಳನ್ನು  ನಿಗದಿಪಡಿಸಲಾಗಿದೆ. ಆದರೆ, ಇದೀಗ ನಗರದ ಪ್ರದೇಶದಲ್ಲಿ 2,510 ಹಾಗೂ ಗ್ರಾಮೀಣ ಪ್ರದೇಶಕ್ಕೆ 1,438 ಸೇರಿ ಒಟ್ಟು 3,948 ಅಂಗಡಿಗಳು ಕಾರ್ಯನಿರ್ವಹಿಸುತ್ತಿವೆ. ಆದರೆ, ಕೆಲ ಜಿಲ್ಲೆಗಳಲ್ಲಿ ನಿಗದಿ ಪಡಿಸಿದ ಖೋಟಾಕ್ಕಿಂತ ಹೆಚ್ಚು ಅಂಗಡಿಗಳು ಕಾರ್ಯನಿರ್ವಹಿಸುತ್ತಿವೆ. ಇನ್ನೂ ಕೆಲ ಜಿಲ್ಲೆಗಳಲ್ಲಿ ನಿಗದಿ ಪಡಿಸಿದ ಖೋಟಾಕ್ಕಿಂತ ಕಡಿಮೆ ಅಂಗಡಿಗಳಿವೆ. ಹೀಗಾಗಿ ಆಯಾ ಜಿಲ್ಲೆಗಳಲ್ಲಿ ನವೀಕಣರಣವಾಗದ ಹಿನ್ನೆಲೆಯಲ್ಲಿ ಮುಚ್ಚಲಾಗಿರುವ ಅಂಗಡಿಗಳನ್ನು ಖೋಟಾದಡಿ ಭರ್ತಿ ಮಾಡಲು ಕ್ರಮಕೈಗೊಂಡರೆ ಸರ್ಕಾರಕ್ಕೆ ಮತ್ತಷ್ಟಕ್ಕೆ ಆದಾಯ ಬರಲಿದೆ. ಅಲ್ಲದೆ, ಸಿಎಲ್ 2 ಖೋಟಾವನ್ನು ಭರ್ತಿ ಮಾಡಿದರೆ ಸರ್ಕಾರಕ್ಕೆ ಮತ್ತಷ್ಟು ಆದಾಯ ಬರಲಿದೆ.
ರಾಜಕೀಯ ವ್ಯಕ್ತಿಗಳ ಕಣ್ಣು
ನವೀಕರಣಗೊಳ್ಳದೆ ಮುಚ್ಚಿರುವ ಅಂಗಡಿಗಳನ್ನು ಶುಲ್ಕ ಕಟ್ಟಿ ಪಡೆಯಲು ಈಗಾಗಲೇ ರಾಜಕೀಯ ನಾಯಕರು ಹಾಗೂ ಅವರ ಆಪ್ತರು ಇಲಾಖೆಯಲ್ಲಿ ಲಾಬಿ ನಡೆಸುತ್ತಿದ್ದಾರೆ. ಕೆಲವರಂತೂ ನಮಗೆ ನೀಡುವಂತೆ ಇಲಾಖೆಯ ಅಧಿಕಾರಿಗಳಿಗೆ ಲಂಚದ ಆಮಿಷವೊಡ್ಡಿರುವ ಆರೋಪಗಳಿವೆ. ಜತೆಗೆ, ಇತರೆ ಮದ್ಯದಂಗಡಿ ಮಾಲೀಕರು ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ.‌