Sunday, 15th December 2024

ಅಬಕಾರಿ ದಾಳಿ ನಡೆಸಿ ಕಳ್ಳಭಟ್ಟಿ ಸರಾಯಿ ಜಪ್ತಿ

ಕಲಬುರಗಿ

ಕರೋನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮಗಾಗಿ ಕಲಬುರಗಿ ಜಿಲ್ಲೆಯಾದ್ಯಂತ ಮದ್ಯ ಉತ್ಪಾದನೆ, ಸಾಗಾಣಿಕೆ ಹಾಗೂ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ.

ಇದರ ಹಿನ್ನೆಲೆಯಲ್ಲಿ ಕಲಬುರಗಿ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕ ಮಹ್ಮದ್ ಇಸ್ಮಾಯಿಲ್ ಇನಾಮದಾರ ಇವರ ನೇತೃತ್ವದಲ್ಲಿ ಕಲಬುರಗಿ ವಿಭಾಗದ ಸಿಬ್ಬಂದಿಗಳೊಂದಿಗೆ ಗುರುವಾರ ಕೆಳಕಂಡ ಸ್ಥಳದಲ್ಲಿ ದಾಳಿ ನಡೆಸಿ ಕಳ್ಳಭಟ್ಟಿ ಸರಾಯಿ ಹಾಗೂ ವಾಹನವನ್ನು ಜಪ್ತಿಪಡಿಸಿದ್ದಾರೆ ಎಂದು ಕಲಬುರಗಿ ಉಪವಿಭಾಗದ ಅಬಕಾರಿ ಉಪ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಫಜಲಪೂರ ತಾಲೂಕಿನ ಗೊಬ್ಬುರ (ಕೆ) ದಿಂದ ಗೊಬ್ಬೂರ (ಬಿ) ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ವಾಹನ ತಪಾಸಣೆ ನಡೆಸಿದಾಗ ಮಾರುತಿ ಕಾರ್‍ನಲ್ಲಿ ಅಕ್ರಮವಾಗಿ 11.250 ಲೀಟರ್ ಸ್ಕಾಚ್ ವಿಸ್ಕಿ ಸ್ವದೇಶಿ ಮದ್ಯವನ್ನು ಮಾರಾಟಕ್ಕಾಗಿ ಸಾಗಾಣಿಕೆ ಮಾಡುತ್ತಿರುವದನ್ನು ಪತ್ತೆ ಹಚ್ಚಿಲಾಗಿದೆ.

ಆರೋಪಿಯು ವಾಹನ ಬಿಟ್ಟು ಪರಾರಿಯಾಗಿದ್ದು, ವಾಹನ ಜಪ್ತಿ ಮಾಡಿಕೊಂಡು ಪರಾರಿಯಾದ ವಾಹನದ ಮಾಲೀಕರ ವಿರುದ್ಧ ಕಲಬುರಗಿ ಉಪ ವಿಭಾಗ ಅಬಕಾರಿ ನಿರೀಕ್ಷಕ ವಿಠ್ಠಲರಾವ ಎಂ. ವಾಲಿ ಅವರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ. ಜಪ್ತಿ ಪಡಿಸಿದ ಒಟ್ಟು ಮದ್ಯ ಹಾಗೂ ವಾಹನದ ಒಟ್ಟು ಅಂದಾಜು ಮೌಲ್ಯ 6,37,500 ರು. ಇರುತ್ತದೆ.
ಈ ದಾಳಿ ಸಂದರ್ಭದಲ್ಲಿ ಅಬಕಾರಿ ಉಪ ನಿರೀಕ್ಷಕರಾದ ಸಂತೋಷಕುಮಾರ, ರುದ್ರಗೌಡ, ಅಬಕಾರಿ ಹಿರಿಯ ರಕ್ಷಕ ಬಸವರಾಜ, ಅಬಕಾರಿ ರಕ್ಷಕ ಭೀಮಸೇನರಾವ ರವಿಕುಮಾರ, ಯಮುನಾಬಾಯಿ ಹಾಗೂ ಸಿಬ್ಬಂದಿ ಸುನೀಲ ಉಪಸ್ಥಿತರಿದ್ದರು.