Sunday, 15th December 2024

ಆಪರೇಷನ್ ಮಾಡಿ ಬಟ್ಟೆಯನ್ನು ಹೊಟ್ಟೆಯಲ್ಲಿ ಬಿಟ್ಟು ಎಡವಟ್ಟು !

ವಿಶ್ವವಾಣಿ ಸುದ್ದಿಮನೆ
ಬೆಂಗಳೂರು:
ರಸ್ತೆ ಅಪಘಾತದಲ್ಲಿ ಗಾಯಗೊಂಡು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಯುವತಿಗೆ ಆಪರೇಷನ್ ಮಾಡಿದ ವೈದ್ಯರು ಬಟ್ಟೆಯನ್ನು ಹೊಟ್ಟೆಯಲ್ಲಿ ಬಿಟ್ಟು ಎಡವಟ್ಟು  ಮಾಡಿದ್ದಾರೆ.
ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು, ಬಟ್ಟೆಯ ತುಂಡನ್ನು ಹೊಟ್ಟೆಯಲ್ಲೇ ಬಿಟ್ಟು ಹೊಲಿಗೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಯುವತಿಯ ಪೋಷಕರು ವೈದ್ಯರ ವಿರುದ್ಧ ಗಿರಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸದ್ಯ ನಾಲ್ವರು ವೈದ್ಯರ ವಿರುದ್ಧ ಪ್ರಕರಣ ದಾಖಲಾಗಿದೆ.
ನಡೆದಿದ್ದೇನು?
ಆರ್.ಟಿ. ನಗರದ 25 ವರ್ಷದ ಯುವತಿ, ಐಎಎಸ್‌ಗೆ ಕೋಚಿಂಗ್​​ ಪಡೆಯುತ್ತಿದ್ದರು. ಮಾ.17ರಂದು ಪರೀಕ್ಷೆಯೊಂದನ್ನು ಬರೆಯಲು ಬನ್ನೇರುಘಟ್ಟ ರಸ್ತೆಯಲ್ಲಿರುವ ಪರೀಕ್ಷಾ ಕೇಂದ್ರಕ್ಕೆ ಸ್ಕೂಟರ್‌ನಲ್ಲಿ ತೆರಳುವಾಗ ಅಪಘಾತವಾಗಿತ್ತು. ಗಾಯಗೊಂಡಿದ್ದ ಆಕೆಯನ್ನು ಬನಶಂಕರಿ 3ನೇ ಹಂತದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಪಾಸಣೆ ವೇಳೆ ಎಡಗೈ ಮೂಳೆ ಮುರಿದಿರುವುದನ್ನು ವೈದ್ಯರು ದೃಢಪಡಿಸಿದ್ದರು. ಇದೇ ವೇಳೆ ಯುವತಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಸ್ಕ್ಯಾನಿಂಗ್ ಮಾಡಿದಾಗ ಹೊಟ್ಟೆಯ ಒಳಭಾಗದಲ್ಲಿ ಗಾಯ ಆಗಿರುವುದು ಕಂಡುಬಂದಿತ್ತು. ಆಗ ಶಸ್ತ್ರಚಿಕಿತ್ಸೆ ನೆರವೇರಿಸಿದ್ದ ವೈದ್ಯರು ಮಾ.23ರವರೆಗೆ ಆಸ್ಪತ್ರೆಯಲ್ಲೆ ಚಿಕಿತ್ಸೆ ಮುಂದುವರಿಸಿದ್ದರು. ಇದಾದ 2-3 ದಿನದಲ್ಲಿ ಯುವತಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಆಗ ತಪಾಸಣೆ ನಡೆಸಿದ್ದ ವೈದ್ಯರು, ಶ್ವಾಸಕೋಶದಲ್ಲಿ ಇನ್ಫೆಕ್ಷನ್​ನಿಂದ ನ್ಯುಮೋನಿಯಾ ರೀತಿ ಆಗಿದೆ ಎಂದು ಹೇಳಿ, ಬನ್ನೇರುಘಟ್ಟದಲ್ಲಿರುವ ಪ್ರತಿಷ್ಠಿತ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿ  ಡಿಸ್ಚಾರ್ಜ್ ಮಾಡಿದ್ದರು.
ವೈದ್ಯರ ಸಲಹೆ ಮೇರೆಗೆ ಯುವತಿಯನ್ನ ಬನ್ನೇರುಘಟ್ಟ ರಸ್ತೆಯಲ್ಲಿರುವ ಮತ್ತೊಂದು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರು. ಉಸಿರಾಟದ ತೊಂದರೆಯನ್ನು ನಿವಾರಿಸಿದ್ದ ವೈದ್ಯರು, ಏ.4ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿ ಆಕೆಯನ್ನ ಮನೆಗೆ ಕಳುಹಿಸಿದ್ದರು.
ಹೊಟ್ಟೆಯಲ್ಲೇ ಬಟ್ಟೆ ಬಿಟ್ಟ ವೈದ್ಯರು
2-3 ದಿನದಲ್ಲಿ ಮತ್ತೆ ಯುವತಿಗೆ ಆರೋಗ್ಯ ಸಮಸ್ಯೆಯಾಗಿತ್ತು. ಏ.16ರಂದು ಮತ್ತೊಮ್ಮೆ ಆಕೆಯನ್ನ ಮತ್ತೊಂದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಸ್ಕ್ಯಾನಿಂಗ್ ಮಾಡಿದ ಸಂದರ್ಭದಲ್ಲಿ ಆಕೆಯ ಹೊಟ್ಟೆಯಲ್ಲಿ ಬಟ್ಟೆಯ ತುಂಡು ಇರುವುದು ಗೊತ್ತಾಗಿದೆ. ಶಸ್ತ್ರಚಿಕಿತ್ಸೆ ಮೂಲಕ ಬಟ್ಟೆ ತುಂಡನ್ನು ಹೊರತೆಗೆದಿರುವ ಅಲ್ಲಿನ ವೈದ್ಯರು ಯುವತಿಗೆ ಮರುಜೀವ ನೀಡಿದ್ದಾರೆ.
ಶಸ್ತ್ರ ಚಿಕಿತ್ಸೆ ಸಂದರ್ಭದಲ್ಲಿ ಬನಶಂಕರಿ 3ನೇ ಹಂತದಲ್ಲಿರುವ ಆಸ್ಪತ್ರೆಯ ವೈದ್ಯರು ನಿರ್ಲಕ್ಷ್ಯ ತೋರಿದ್ದು, ನಮ್ಮ ಮಗಳ ಪ್ರಾಣಕ್ಕೆ ಕುತ್ತು ತಂದಿದ್ದಾರೆ. ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪೋಷಕರು ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ. ದೂರಿನ ಅನ್ವಯ ವೈದ್ಯರಾದ ರಾಜೇಶ್ ಮೂರ್ತಿ, ಗೋಪಿಕಾ ರಾಜೇಶ್, ಸಂಗಮೇಶ್, ಮನೋಜಿತ್ ಹಾಗೂ ಮಂಜುನಾಥ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.