Saturday, 26th October 2024

ಆರೇಂಜ್ ಜೋನ್ ನಿಂದ ರೆಡ್ ಜೋನ್ ಗೆ ಬಳ್ಳಾರಿ ಜಿಲ್ಲೆ

6ರಿಂದ 13ಕ್ಕೇರಿದ ಸೋಂಕಿತರ ಸಂಖ್ಯೆ
ಒಂದೇ ಕುಟುಂಬದ ಏಳು ಜನರಲ್ಲಿ ಕಾಣಿಸಿಕೊಂಡ ಮಹಾಮಾರಿ ಸೋಂಕು
ಜಿಲ್ಲೆಯ ಜನರಲ್ಲಿ ಮತ್ತಷ್ಟು ಹೆಚ್ಚಿದ ಆತಂಕ
ಲಾಕ್ ಡೌನ್ ಕಠಿಣವಾಗಿದ್ದರೂ ಜನರಲ್ಲಿ ಇಲ್ಲ ಜಾಗೃತಿ

ವಿಶ್ವವಾಣಿ ಸುದ್ದಿಮನೆ, ಬಳ್ಳಾರಿ

ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಳದಿಂದಾಗಿ ಆರೆಂಜ್ ಝೋನ್ ನಲ್ಲಿದ್ದ ಬಳ್ಳಾರಿ ಜಿಲ್ಲೆ ಇದೀಗ ರೆಡ್ ಝೋನ್ ಗೆ ಬಂದಿದೆ.

ಕರೋನಾ ವೈರಸ್ ಕಂಡುಬಂದ ಮೊದಲಿಗೆ ಯಾವುದೇ ಪಾಸಿಟಿವ್ ಇಲ್ಲದೆ ನೆಮ್ಮದಿಯಿಂದ ಇದ್ದ ಬಳ್ಳಾರಿ ಜಿಲ್ಲೆಯ ಜನತೆಗೆ ಹೊಸಪೇಟೆಯ ಒಂದೇ‌ ಕುಟುಂಬದ ನಾಲ್ವರಿಗೆ ಮೊದಲು ಬಾತಿಗೆ ಸೋಂಕು ಕಾಣಿಸಿಕೊಂಡ ನಂತರ ಜಿಲ್ಲೆಗೆ ಕರೋನ ಕಾಲಿರಿಸಿತ್ತು. ಅದಾದ ಬಳಿಕ ಜಿಲ್ಲೆಯ ಸಿರುಗುಪ್ಪ ಹಾಗೂ ಬಳ್ಳಾರಿ ತಾಲೂಕಿನಲ್ಲಿ ತಲಾ ಒಬ್ಬರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಎರಡನೇ ಅವಧಿಯ ಲಾಕ್ ಡೌನ್ ವಿಸ್ತರಣೆ ನಂತರ ಕೇಂದ್ರ ಸರ್ಕಾರವೇ ಬಿಡುಗಡೆ ಮಾಡಿದ್ದ ಪಟ್ಟಿಯಲ್ಲಿ ಬಳ್ಳಾರಿ ಜಿಲ್ಲೆ ಆರೇಂಜ್ ಝೋನ್ ನಲ್ಲಿತ್ತು. ಘೋಷಣೆಯಾದ ಎರಡನೆ ದಿನವೇ ಜಿಲ್ಲೆ ರೆಡ್ ಝೋನ್‌ ಆಗಿ ಮಾರ್ಪಟ್ಟಿದೆ. ಇದು ಜಿಲ್ಲೆಯ ಜನರಲ್ಲಿ ಇನ್ನಷ್ಟು ಆತಂಕಕ್ಕೆ ಒಳಗಾಗುವಂತೆ ಮಾಡಿದೆ.

ಜಿಲ್ಲೆಯಲ್ಲಿ ಈವರೆಗೆ ಕರೊನಾ ಸೋಂಕಿತರ ಸಂಖ್ಯೆ ಆರರಿಂದ ಮೇಲಕ್ಕೇರದೆ ಆರೆಂಜ್ ಝೋನ್‍ನಲ್ಲಿದ್ದ ಗಣಿನಾಡು ಒಂದೇ ಕುಟುಂಬದ ಏಳು ಜನರಲ್ಲಿ ಕರೋನಾ ಸೋಂಕು ಕಂಡು ಬಂದಿರುವುದರಿಂದ ರೆಡ್ ಜೋನ್‍ಗೆ ತಳ್ಳಲ್ಪಟ್ಟಿದೆ. ಜಿಲ್ಲೆಯ ಹೊಸಪೇಟೆ ನಗರದ ಒಂದೇ ಕಟುಂಬದ ಏಳು ಜನರಲ್ಲಿ ಈ ಸೋಂಕು ಕಂಡುಬಂದಿರುವುದರಿಂದ ಈಗ ಹೊಸಪೇಟೆ ನಗರ ಹಾಟ್ ಸ್ಪಾಟ್ ಆಗಿ ಮಾರ್ಪಟ್ಟಿದೆ.

ಮಾರ್ಚ್ 5 ರಿಂದ 16 ವರೆಗೆ 11 ದಿನಗಳ ಕಾಲ ಜಿಲ್ಲೆಯಲ್ಲಿ ಕರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗದಿದ್ದರಿಂದ ಜಿಲ್ಲೆಯ ಜನತೆ ನಿಟ್ಟುಸಿರು ಬಿಟ್ಟಿದ್ದರು. ಲಾಕ್‍ಡೌನ್ ಸಮಯದಲ್ಲಿ ಜನತೆ ಆದಷ್ಟು ಮನೆಯಲ್ಲಿದ್ದು, ಸಾಮಾಜಿಕ ಅಂತರ ಕಾಯ್ದುಕೊಂಡು ಸೋಂಕು ಹರಡಂದಂತೆ ಇದ್ದುದರಿಂದ ಜಿಲ್ಲೆ ಆರೇಂಜ್ ಝೋನ್ ನಲ್ಲಿತ್ತು.
ಈಗ 14 ದಿನಗಳ ನಂತರ ಮೊದಲ ಬಾರಿಗೆ ಪಾಸಿಟಿವ್ ಕಾಣಿಸಿಕೊಂಡ ರೋಗಿ 52 ವರ್ಷದ ಗಂಡ ಮತ್ತು 48 ವರ್ಷದ ಹೆಂಡತಿ (ಪಿ-89 ಮತ್ತು 90) ಅವರ ಸಂಪರ್ಕಕ್ಕೆ ಬಂದಿದ ಸಂಬಂಧಿಕರ ಏಳು ಜನರಲ್ಲಿ ಕರೋನಾ ಪಾಸಿಟಿವ್ ಕಂಡು ಬಂದಿದೆ.

ಈಗ ಪಿ-90 ಅವರ 68 ವರ್ಷದ ತಾಯಿ, 50 ವರ್ಷದ ಅಣ್ಣ, 47 ವರ್ಷದ ತಂಗಿ, 39 ವರ್ಷದ ತಮ್ಮ, 11 ವರ್ಷದ ತಂಗಿಯ ಮಗಳು, ಮತ್ತೊಬ್ಬ ಸಹೋದರಿ ಮತ್ತು ಆಕೆಯ ಪತಿ ಅವರಿಗೆ ಈ ಸೋಂಕು ಕಾಣಿಸಿಕೊಂಡಿದೆ.
ಜಿಲಾಡಳಿತದ ಶತಪ್ರಯತ್ನದ ಮಧ್ಯೆಯೂ ಸೋಂಕು ಹರಡುತ್ತಿರುವುದು ತೀವ್ರ ಆತಂಕಕ್ಕೆ ಈಡುಮಾಡಿದೆ. ಆದರೆ ಜಿಲ್ಲೆಯಲ್ಲಿ ಮಾತ್ರ ಜನತೆ ಈ ಬಗ್ಗೆ ನಿರ್ಲಕ್ಷ್ಯ ತಾಳಿ ಮನಸೊ ಇಚ್ಛೆ ಓಡಾಡುತ್ತಿರುವುದು ನಿಲ್ಲುತ್ತಿಲ್ಲ. ಹೀಗೆಯೆ ಆದರೆ ಇಡೀ ಜಿಲೆ ಹಾಟ್ ಸ್ಪಾಟ್ ಆಗುವುದರಲ್ಲಿ ಯಾವುದೇ ಅನುಮಾನಗಳಿಲ. ಹೀಗಾಗಿ ಜನತೆ ಸಾಮಾಜಿಕ ಅಂತರ ಕಾಪಾಡುವುದು, ಮಾಸ್ಕ್ ಬಳಸುವುದು ಹಾಗೂ ಲಾಕ್ ಡೌನ್ ನ್ನು ಕಠಿಣವಾಗಿ ಪಾಲಿಸಬೇಕಿದೆ.