Sunday, 15th December 2024

ಆಶಾ ಕಾರ್ಯಕರ್ತೆಯ ಮೇಲೆ ಹಲ್ಲೆ: ಐವರ ಬಂಧನ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು:

ಆರೋಗ್ಯ ಇಲಾಖೆಯಿಂದ ಸಮೀಕ್ಷೆಗೆ ತೆರೆಳಿದ್ದ ಆಶಾ ಕಾರ್ಯಕರ್ತೆಯ ಮೇಲೆ ಹಲ್ಲೆ ನಡೆಸಿದ ಐವರನ್ನು ಹೆಣ್ಣೂರು ಪೋಲಿಸರು ಬಂಧಿಸಿದ್ದಾರೆ.

ಸಾರಾಯಿ ಪಾಳ್ಯದ ಸಾದಿಕ್ ಲೇಔಟ್ ನ ಸುಹೇಲ್ ಭಾಷಾ, ಮೊಹಮದ್ ಮುಸ್ತಫಾ, ಸಗೀರ್ ಶರೀಫ್, ಸರ್ಪರಾಜ್ ಹಡ್ಪಾ ಹಾಗೂ ಅನ್ಸರ್ ಜಬ್ಬಾರ್ ಬಂಧಿತ ಆರೋಪಿಗಳಾಗಿದ್ದಾರೆ ಎಂದು ಪೂರ್ವ ವಿಭಾಗದ ಡಿಸಿಪಿ ಡಾ.ಎಸ್. ಡಿ ಶರಣಪ್ಪ ಅವರು ತಿಳಿಸಿದ್ದಾರೆ.

ಕರೋನ ವೈರಸ್ ಜಾಗೃತಿಗಾಗಿ ಜನರ ಆರೋಗ್ಯ ತಪಾಸಣೆಗೆ ತೆರಳಿದ್ದ ನಸ್೯ ಹಾಗೂ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ನಡೆದಿತ್ತು ಈ ಸಂಬಂಧ ಹೆಣ್ಣೂರು ಪೋಲಿಸ್ ಠಾಣೆಯಲ್ಲಿ ಆರೋಗ್ಯ ನಿರೀಕ್ಷಕ ಮುನಿರಾಜು ಗುರುವಾರ ನೀಡಿದ ದೂರಿನ ಆಧಾರದಲ್ಲಿ ಪೋಲಿಸರು ಎಫ್.ಐ.ಆರ್ ದಾಖಲಿಸಿಕೊಂಡು ಜಿಲ್ಲಾ ಆರೋಗ್ಯ ಅಧಿಕಾರಿ ಶ್ರೀನಿವಾಸ್ ಅವರು ಕೃಷ್ಣವೇಣಿ ಅವರನ್ನು ಠಾಣೆಗೆ ಕರೆದೊಯ್ದು ಹೇಳಿಕೆ ಕೊಡಿಸಿದ್ದರು. ಈ ಸಂಬಂಧ ಕಾರ್ಯಾಚರಣೆ ಕೈಗೊಂಡು ಐವರು ಆರೋಪಿಗಳನ್ನು ಬಂಧಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ.

ಆರೋಗ್ಯ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರು 15 ದಿನಗಳಿಂದ ಮನೆ ಮನೆತೆ ತೆರಳಿ ಆರೋಗ್ಯ ಸಮೀಕ್ಷೆ ನಡೆಸುತ್ತಿದ್ದಾರೆ. ಎರಡು ದಿನಗಳ ಹಿಂದೆ ಮಾಹಿತಿ ಸಂಗ್ರಹಿಸುತ್ತಿದ್ದ ಆಶಾ ಕಾರ್ಯಕರ್ತರ ವಿರುದ್ಧ ಸ್ಥಳೀಯ ಮಸೀದಿಯ ಧ್ವನಿವರ್ಧಕದಿಂದ ಆರೋಗ್ಯ ಕಾರ್ಯಕರ್ತೆಯರಿಗೆ ಯಾವುದೇ ಮಾಹಿತಿ ನೀಡದೇ ಅವರನ್ನು ಇಲ್ಲಿಂದ ಓಡಿಸಿ
ಎಂಬ ಸಂದೇಶ ನೀಡಲಾಗಿತ್ತು.

ತಕ್ಷಣ ಸಮೀಕ್ಷೆಯಲ್ಲಿ ತೊಡಗಿದವರನ್ನು ಸುತ್ತುವರಿದ ಕೆಲವರು ಕೃಷ್ಣವೇಣಿ ಅವರ ಮೊಬೈಲ್‌ ಕಸಿದುಕೊಂಡು ಸಮೀಕ್ಷೆಯ ಕಾಗದ ಪತ್ರ ಹರಿದು ಬೆದರಿಕೆ ಒಡ್ಡಿದ್ದರು.ಈ ಬಗ್ಗೆ ಮಾಹಿತಿ ನೀಡಿದರೂ ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸ್ ಸ್ಪಂದಿಸಿಲ್ಲ ಎಂದು ಆಶಾ ಕಾರ್ಯಕರ್ತೆಯರು ಆರೋಪಿಸಿದ್ದಾರೆ. ಬಳಿಕ ಕೃಷ್ಣವೇಣಿ ಅವರ ಮನೆಗೆ ಡಿಸಿಎಂ ಅಶ್ವತ್ಥ ನಾರಾಯಣ ಭೇಟಿ ನೀಡಿ ಸಾಂತ್ವನ ಹೇಳಿ,ಹಲ್ಲೆಗೆ ಯತ್ನಿಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದು ತಡ ರಾತ್ರಿಯೇ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.