Thursday, 12th December 2024

ಆಸ್ಪತ್ರೆಗಳ ನಿರ್ಲಕ್ಷ್ಯ: ಚಿಕಿತ್ಸೆ ಸಿಗದೆ ಸಾವಿನ ಸಂಖ್ಯೆ 5ಕ್ಕೆ ಏರಿಕೆ

ವಿಶ್ವವಾಣಿ‌ ಸುದ್ದಿಮನೆ
ಬೆಂಗಳೂರು:
ಕರೋನಾ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿರುವಂತೆ ಸಾವಿನ ಪ್ರಕರಣಗಳು ಸಹ ಹೆಚ್ಚಾಗುತ್ತಿವೆ. ಇಂತಹ ಸಮಯದಲ್ಲಿ ವೈದ್ಯರು, ವೈದ್ಯಕೀಯ ಸಿಬ್ಬಂದಿ ತಮ್ಮ ಸಾವನ್ನು ಲೆಕ್ಕಿಸದೆ ಕೆಲಸ ಮಾಡುತ್ತಿದ್ದಾರೆ. ಆದರೆ, ಕೆಲವು ಆಸ್ಪತ್ರೆ ಹಾಗೂ ಅಲ್ಲಿನ  ವೈದ್ಯಕೀಯ ಸಿಬ್ಬಂದಿ   ಮಾನವೀಯತೆ ಮರೆತಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಇಬ್ಬರಿಗೆ ಚಿಕಿತ್ಸೆ ದೊರೆಯದೆ ಸಾವನ್ನಪ್ಪಿದ್ದಾರೆ. ಶುಕ್ರವಾರ ಮೂರು ಮಂದಿ ಚಿಕಿತ್ಸೆಗೆ ಅಲೆದಿದ್ದಲ್ಲದೆ ಸಾವನ್ನಪ್ಪಿದ್ದಾರೆ. ಅನಾರೋಗ್ಯದಿಂದ ಚಿಕಿತ್ಸೆಗೆಂದು ಆಸ್ಪತ್ರೆಗಳಿಗೆ ಬರುವವರನ್ನು ಅಲೆದಾಡಿಸುವ ಕೆಲಸವನ್ನು ಮಾಡುತ್ತಿದ್ದಾರೆಯೇ ಹೊರತು, ಸಮರ್ಪಕವಾದ ಚಿಕಿತ್ಸೆ ಕೊಡುತ್ತಿಲ್ಲ. ರಾಜಧಾನಿ ಬೆಂಗಳೂರು ಹಾಗೂ ಹೊರಭಾಗದಲ್ಲಿ ಆಸ್ಪತ್ರೆಗಳ ನಿರ್ಲಕ್ಷ್ಯಕ್ಕೆ ಮೂವರು ಅಮಾಯಕರು ಸಾವನ್ನಪ್ಪಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
 ಕೆಲ ಆಸ್ಪತ್ರೆಗಳು ಹಣ ಲೂಟಿ ಮಾಡುವುದಕ್ಕಾಗಿಯೇ ಆಸ್ಪತ್ರೆ ತೆರೆದಿಟ್ಟುಕೊಂಡು ಕೂತಿವೆಯೇ ಎನ್ನುವಂತೆ ವರ್ತಿಸುತ್ತಿವೆ. ಇದಕ್ಕೆ ಕಾರಣ ರಾಜಧಾನಿ ಹಾಗೂ ಹೊರಭಾಗದಲ್ಲಿ ನಡೆದುಹೋಗಿರುವ ಮೂವರು ಅಮಾಯಕರ ಸಾವಿನ ಪ್ರಕರಣಗಳು.
ಮೊದಲ ಪ್ರಕರಣ ನಡೆದಿರುವುದು ಬೆಂಗಳೂರಿನ ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರದ ಕಾಚರಕನಹಳ್ಳಿ ವಾರ್ಡ್ ನಲ್ಲಿ. ವೆಂಕಟೇಶ್ವರಲು ಎನ್ನುವ ವೃದ್ಧರು ಕಳೆದ ನಾಲ್ಕೈದು ದಿನಗಳ ಹಿಂದೆ ತೀವ್ರ ಜ್ವರದ ಕಾರಣಕ್ಕೆ ಆಸ್ಪತ್ರೆಗೆ ತೆರಳಿದ್ದಾರೆ. ಆದರೆ ಅಲ್ಲಿ ಅವರನ್ನು ನೋಡಿದಾಕ್ಷಣ ವೈದ್ಯಕೀಯ ಸಿಬ್ಬಂದಿ, ನಿಮಗೆ ಕರೋನಾ ಸೋಂಕು ಇರಬಹುದು. ಅದನ್ನು ಮೊದಲು ಟೆಸ್ಟ್ ಮಾಡಿಸಿಕೊಂಡು ಬನ್ನಿ ಆನಂತರ ನೋಡೋಣ ಎಂದು ಕಳುಹಿಸಿದ್ದಾರೆ. ವೈದ್ಯಕೀಯ ಸಿಬ್ಬಂದಿಯ ಆ ರೀತಿಯ ಮಾತನ್ನು ಕೇಳಿ ಹೌಹಾರಿ ಹೋದ ವೃದ್ಧ ತಕ್ಷಣಕ್ಕೆ ಮೂರ್ನಾಲ್ಕು ಖಾಸಗಿ ಆಸ್ಪತ್ರೆಗಳ ಬಾಗಿಲು ತಟ್ಟಿದ್ದಾರೆ. ಆದರೆ ಅಲ್ಲಿಯೂ ಕೂಡ ಅದೇ ರೀತಿ ಉತ್ತರ ವೃದ್ಧರಿಗೆ ಸಿಕ್ಕಿದೆ ಬೇಸರಗೊಂಡು ಮನೆಗೆ ಬಂದ ನಂತರ ಆರೋಗ್ಯದಲ್ಲಿ ತೀವ್ರ ಏರುಪೇರಾಗಿದೆ. ಜ್ವರ ಕೂಡ ತೀವ್ರಗತಿಯಲ್ಲಿ ಏರಿದೆ. ಜ್ವರದ ಪ್ರಮಾಣ ತೀವ್ರಗತಿಯಲ್ಲಿ ಏರುತ್ತಿದ್ದರಿಂದ ಗಾಬರಿಗೊಂಡ ಕುಟುಂಬದವರು, ಸಾಕಷ್ಟು ಬಾರಿ ವೈದ್ಯರಿಗೆ ಕಾಲ್ ಮಾಡಿದ್ದಾರೆ. ಅದೇ ರೀತಿ ಬಿಬಿಎಂಪಿಯ ಸಹಾಯವಾಣಿಯಿಂದಲೂ ನೆರವನ್ನು ನಿರೀಕ್ಷಿಸಿದೆ. ಆದರೆ ಯಾರೊಬ್ಬರೂ ಈ ವೃದ್ಧರ ನೆರವಿಗೆ ಬಂದಿಲ್ಲ. ಈ ನಡುವೆ ಆರೋಗ್ಯ ತೀವ್ರ ಬಿಗಡಾಯಿಸಿ ಮನೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ದುರಂತದ ವಿಚಾರ ಅಂದರೆ ವೃದ್ಧ ಸಾವನ್ನಪ್ಪಿದ ಬೀದಿಯ ಪಕ್ಕದಲ್ಲೇ ಆ ಭಾಗದ ಕಾರ್ಪೊರೇಟರ್ ಆಗಿರುವ ಪದ್ಮನಾಭರೆಡ್ಡಿಯವರು ಮಾಸ್ಕ್ ಅನ್ನು ವಿತರಣೆ ಮಾಡುತ್ತಿದ್ದರು. ವೃದ್ಧ ಸತ್ತಿರುವ ವಿಚಾರ ತಿಳಿದ ಮೇಲೂ ಆ ಬಗ್ಗೆ ವಿಚಾರಿಸುವ ಕನಿಷ್ಠ ಕಾಳಜಿಯನ್ನು ಕೂಡ ತೋರಲಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಎರಡನೇ ಪ್ರಕರಣ ನಡೆದಿರುವುದು ಬೆಂಗಳೂರಿನ ರಾಜಾಜಿನಗರದಲ್ಲಿ. ಕಾಮಾಕ್ಷಿಪಾಳ್ಯ ವಾರ್ಡ್ ನ ಪಾರ್ಕ್ ಒಂದರಲ್ಲಿ ವಾಕಿಂಗ್ ಮಾಡುತ್ತಿದ್ದ ವೃದ್ಧರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದೆ. ತಕ್ಷಣಕ್ಕೆ ಅಲ್ಲಿದ್ದವರು ವೃದ್ಧರನ್ನು ಕಾಡೇ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಕನಿಷ್ಠ ಸೌಜನ್ಯಕ್ಕೂ ಅವರನ್ನು ಒಳಗೆ ಕರೆದುಕೊಳ್ಳುವ ಪ್ರಯತ್ನವನ್ನು ಆಸ್ಪತ್ರೆಯವರು ಮಾಡಿಲ್ಲ‌. ಎದೆನೋವು ತೀವ್ರವಾಗುತ್ತಿದೆ ನನಗೆ ಚಿಕಿತ್ಸೆ ಕೊಡಿ ಎಂದು ವೃದ್ಧರು ಕೇಳಿಕೊಂಡರು ಆಸ್ಪತ್ರೆಯ ಸಿಬ್ಬಂದಿ ಅವರಿಗೆ ಚಿಕಿತ್ಸೆ ಕೊಡದೆ ವಾಪಸ್ ಕಳುಹಿಸಿದ್ದಾರೆ. ವಿಧಿಯಿಲ್ಲದೆ ಪಕ್ಕದಲ್ಲಿ ಬಂದು ಕುಳಿತುಕೊಂಡ ವೃದ್ಧರು ಅಲ್ಲೇ ಕುಸಿದು ಬಿದ್ದಿದ್ದಾರೆ. ಪಲ್ಸ್ ಚೆಕ್ ಮಾಡಿದಾಗ ಅವರು ಸಾವನ್ನಪ್ಪಿರುವುದು ದೃಢಪಟ್ಟಿದೆ‌. ಆಸ್ಪತ್ರೆ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ‌.
ಮತ್ತೊಂದು ದುರಂತ ನಡೆದಿರುವುದು ಬೆಂಗಳೂರು ಹೊರವಲಯದ ಹೊಸಕೋಟೆ ತಾಲ್ಲೂಕಿನ ಸಮೇತನಹಳ್ಳಿಯಲ್ಲಿ. ಕಳೆದ ಬುಧವಾರ ಮನೆಗೆ ಹೋಗುತ್ತಿದ್ದ ನಲವತ್ತೈದು ವರ್ಷದ ಮಹಿಳೆ ತಲೆತಿರುಗಿ ಕೆಳಗೆ ಬಿದ್ದಿದ್ದಾರೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರೂ ಪ್ರಯೋಜನವಾಗಿಲ್ಲ. ಅಲ್ಲಿ ದಾಖಲು ಮಾಡಿಕೊಳ್ಳಲು ಮೀನಮೇಷ ಎಣಿಸಿದ ವೈದ್ಯರು, ಆಸ್ಪತ್ರೆ ಕೋವಿಡ್ ಪೇಷಂಟ್ಸ್ ಗಳಿಂದ ತುಂಬಿ ಹೋಗಿದೆ. ನಿಮ್ಮನ್ನು ಸೇರಿಸಿಕೊಳ್ಳೊಲ್ಲ ಎಂದಿದ್ದಾರೆ. ತಕ್ಷಣಕ್ಕೆ ಬೇರೆ ಬೇರೆ ಆಸ್ಪತ್ರೆಗಳಿಗೆ ಹತ್ತಿರತ್ತಿರ ನಾಲ್ಕು ಗಂಟೆಗಳ ಕಾಲ ತಾಯಿಯೊಂದಿಗೆ ಮಕ್ಕಳು ಅಲೆದಾಡಿದ್ದಾರೆ. ಆದರೂ ಚಿಕಿತ್ಸೆ ಸಿಗದ ಹಿನ್ನೆಲೆಯಲ್ಲಿ ಆಕೆ ಸಾವನ್ನಪ್ಪಿದ್ದಾರೆ.