Thursday, 12th December 2024

ಇನ್ಫೋಸಿಸ್ ಫೌಂಡೇಷನ್‌ನಿಂದ 100 ಹಾಸಿಗೆಗಳ ಕ್ವಾರಂಟೈನ್ ಸೌಲಭ್ಯ

ಸಮಾಜದ ಆರ್ಥಿಕವಾಗಿ ಹಿಂದುಳಿದ ರೋಗಿಗಳಿಗೆ ಉಚಿತ ಚಿಕಿತ್ಸಾ ಸೌಲಭ್ಯ

ಬೆಂಗಳೂರು

ಇನ್ಫೋಸಿಸ್ ಸಂಸ್ಥೆಯ ಜನೋಪಕಾರಿ ಅಂಗಸಂಸ್ಥೆಯಾಗಿರುವ ಇನ್ಫೋಸಿಸ್ ಫೌಂಡೇಷನ್ ಮತ್ತು ದೇಶದ ಅತಿ ದೊಡ್ಡ ಆರೋಗ್ಯ ರಕ್ಷಣೆ ಸೇವಾದಾರ ಸಂಸ್ಥೆಗಳಲ್ಲಿ ಒಂದಾಗಿರುವ ನಾರಾಯಣ ಹೆಲ್‌ತ್‌ ಸಹಯೋಗದಲ್ಲಿ ಬೆಂಗಳೂರಿನ ನಾರಾಯಣ ಹೆಲ್‌ತ್‌ ಸಿಟಿಯಲ್ಲಿ ಕೋವಿಡ್-19 ರೋಗಿಗಳಿಗೆ 100 ಹಾಸಿಗೆಗಳ ಕ್ವಾರಂಟೈನ್ ಸೌಲಭ್ಯವನ್ನು ಪ್ರಕಟಿಸಿವೆ.

ಸಮಾಜದಲ್ಲಿನ ಆರ್ಥಿಕವಾಗಿ ಹಿಂದುಳಿದ ವರ್ಗದ ರೋಗಿಗಳಿಗೆ ಚಿಕಿತ್ಸೆ ನೀಡುವ ಸಲುವಾಗಿ ಈ ಸೌಲಭ್ಯವನ್ನು ಕಲ್ಪಿಸಲಾಗುತ್ತಿದೆ. ಇಲ್ಲಿ ರೋಗಿಗಳಿಗೆ ಕ್ವಾರಂಟೈನ್ ಸೌಲಭ್ಯದೊಂದಿಗೆ ನಿಗಾ ವಹಿಸುವ ವೈದ್ಯರು, ನರ್ಸ್‌ಗಳು ಮತ್ತು ಅಗತ್ಯ ಔಷಧೋಪಚಾರವನ್ನು ಸಂಪೂರ್ಣವಾಗಿ ಉಚಿತವಾಗಿ ಒದಗಿಸಲಾಗುತ್ತದೆ.

ಇಲ್ಲಿ ದಾಖಲಾಗುವ ರೋಗಿಗಳಿಗೆ ನಾರಾಯಣ ಹೆಲ್‌ತ್‌ ಸಿಟಿಯ ವೈದ್ಯರು ಮತ್ತು ನರ್ಸ್‌ಗಳು ಚಿಕಿತ್ಸೆ ನೀಡಲಿದ್ದಾರೆ ಮತ್ತು ನಿರ್ವಹಣೆ ಮಾಡಲಿದ್ದಾರೆ. ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಕ್ವಾರಂಟೈನ್ ಸೌಲಭ್ಯ ಮತ್ತು ಸೂಕ್ತ ವೈದ್ಯಕೀಯ ಚಿಕಿತ್ಸೆ ಒದಗಿಸುವ ಇನ್ಫೋಸಿಸ್ ಫೌಂಡೇಷನ್‌ನ ಪ್ರಯತ್ನಗಳ ವಿಸ್ತರಣೆಯ ಮುಂದುವರಿದ ಭಾಗ ಇದಾಗಿದೆ. ಈ ವಾರದ ಆರಂಭದಲ್ಲಿ ಇನ್ಫೋಸಿಸ್ ಫೌಂಡೇಷನ್ ಸರ್ಕಾರದ ಕೋವಿಡ್-19 ಪರಿಹಾರ ಕ್ರಮಗಳಿಗೆ ನೆರವಾಗುವ ನಿಟ್ಟಿನಲ್ಲಿ 100 ಕೋಟಿ ರೂಪಾಯಿಗಳ ದೇಣಿಗೆ ನೀಡುವುದಾಗಿ ಘೋಷಣೆ ಮಾಡಿದೆ.

ಇನ್ಫೋಸಿಸ್ ಫೌಂಡೇಷನ್‌ನ ಅಧ್ಯಕ್ಷರಾದ ಸುಧಾಮೂರ್ತಿ ಅವರು ಮಾತನಾಡಿ, ‘ಸೂಕ್ತ ಚಿಕಿತ್ಸೆ ಪಡೆಯಲು ಸಾಧ್ಯವಾಗದ ಹಿನ್ನೆಲೆಯಲ್ಲಿ ದುರ್ಬಲ ವರ್ಗದವರನ್ನು ತೀವ್ರ ರೀತಿಯಲ್ಲಿ ಸಂಕಷ್ಟಕ್ಕೀಡು ಮಾಡುತ್ತವೆ. ಇದರಿಂದ ಅವರು ತಮ್ಮ ಜೀವನೋಪಾಯವನ್ನೇ ಕಳೆದುಕೊಳ್ಳಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ನಮ್ಮ ಸಮಾಜದ ದುರ್ಬಲ ವರ್ಗದವರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆಗಳೊಂದಿಗೆ ಸ್ವಚ್ಛ, ನೈರ್ಮಲ್ಯವಾದ ವಸತಿ ಸೌಲಭ್ಯವನ್ನು ನೀಡುವ ಒಂದು ಸಣ್ಣ ಪ್ರಯತ್ನವನ್ನು ಫೌಂಡೇಷನ್ ಮಾಡುತ್ತಿದೆ. ನಮ್ಮ ಈ ಪ್ರಯತ್ನಕ್ಕೆ ಸಹಕಾರ ನೀಡುತ್ತಿರುವ ನಾರಾಯಣ ಹೆಲ್‌ತ್‌ ಸಿಟಿಗೆ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದು ತಿಳಿಸಿದರು.

ನಾರಾಯಣ ಹೆಲ್‌ತ್‌‌ನ ಅಧ್ಯಕ್ಷ ಮತ್ತು ಕಾರ್ಯಕಾರಿ ನಿರ್ದೇಶಕ ಡಾ.ದೇವಿ ಶೆಟ್ಟಿ ಅವರು ಮಾತನಾಡಿ,‘‘ನಾವು ಇನ್ಫೋಸಿಸ್ ಫೌಂಡೇಷನ್ ಜತೆಗೂಡಿ ಸಮಾಜದ ಹಿಂದುಳಿದ ವರ್ಗದ ರೋಗಿಗಳಿಗೆ 100 ಕೊಠಡಿಗಳ ಕ್ವಾರಂಟೈನ್ ಸೌಲಭ್ಯವನ್ನು ಕಲ್ಪಿಸಲು ಸಂತಸವಾಗುತ್ತಿದೆ. ಸೂಕ್ತ ವೈದ್ಯಕೀಯ ಆರೈಕೆಯೊಂದಿಗೆ ರೋಗಿಗಳು ಸ್ವಯಂ ಗುಣಮುಖರಾಗಲು ಈ ಸೌಲಭ್ಯ ನೆರವಾಗುತ್ತದೆ. ಕೋವಿಡ್-19 ವಿರುದ್ಧ ಭಾರತ ನಡೆಸುತ್ತಿರುವ ಹೋರಾಟದಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ಈ ಉಪಕ್ರಮವನ್ನು ಕೈಗೊಂಡಿರುವ ಇನ್ಫೋಸಿಸ್ ಫೌಂಡೇಷನ್‌ಗೆ ನಾವು ಧನ್ಯವಾದಗಳನ್ನು ಹೇಳುತ್ತಿದ್ದೇವೆ ಎಂದು ತಿಳಿಸಿದರು.