ಬೆಂಗಳೂರು
ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ಮತ್ತೊಮ್ಮೆ ಹರಿಹಾಯ್ದಿರುವ ಮಾಜಿ ಸಿಎಂ ಸಿದ್ದರಾಮಯ್ಯ, “ಪಾದರಾಯನಪುರ ಗಲಾಟೆ ವಿಚಾರದಲ್ಲಿ ಈಶ್ವರಪ್ಪ ನೀಡಿದ್ದು ದೇಶದ್ರೋಹಿ ಮತ್ತು ಬೇಜವ್ದಾರಿ ಹೇಳಿಕೆ” ಎಂದು ಕಿಡಿಕಾರಿದ್ದಾರೆ.
ಪಾದರಾಯನಪುರ ಗಲಾಟೆ ಬಿನ್ನಿಗೆ ಹೇಳಿಕೆ ನೀಡಿದ್ದ ಸಚಿವ ಈಶ್ವರಪ್ಪ, “ಈ ಎಲ್ಲಾ ಗಲಾಟೆಗಳಿಗೂ ಶಾಸಕ ಜಮೀರ್ ಅಹಮದ್ ಅವರೇ ಕಾರಣ. ಮೊದಲು ಅವರನ್ನು ಕ್ವಾರಂಟೈನ್ ಮಾಡಬೇಕು” ಎಂದು ಕಿಡಿಕಾರಿದ್ದರು. ಈಶ್ವರಪ್ಪ ಹೇಳಿಕೆಗೆ ಇಂದು ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ, “ಅಗತ್ಯವಿದ್ದರೆ ಶಾಸಕ ಜಮೀರ್ ಅಹಮದ್ ಅವರನ್ನು ಕ್ವಾರಂಟೈನ್ ಮಾಡಲಿ. ಆದರೆ, ಕ್ವಾರಂಟೈನ್ ಮಾಡಲೇಬೇಕು ಎಂದು ಮಾಡುವುದಲ್ಲ. ಇನ್ನೂ ನಾನು ಈ ವಿಚಾರವಾಗಿ ಜಮೀರ್ ಅಹಮದ್ ಬಳಿ ಮಾತನಾಡಿದ್ದೇನೆ.
“ಚಿಕಿತ್ಸೆ ತಪಾಸಣೆಗೆ ಒಳಪಡಿ ಅಂತ ಹೇಳಿದ್ರೆ ಯಾರೇ ಆದ್ರೂ ಸಹಕಾರ ನೀಡಬೇಕು. ಸಹಕಾರ ಕೊಡದಿದ್ರೆ ಅದು ಯಾರೇ ಮಾಡಿದ್ದರೂ ತಪ್ಪು. ಪ್ರಾಣದ ಭಯ ಬಿಟ್ಟು ವೈದ್ಯರು ಫೀಲ್ಡ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಸಪೋರ್ಟ್ ಮಾಡಬೇಕು. ಸಪೋರ್ಟ್ ಮಾಡದವರ ವಿರುದ್ಧ ಸರ್ಕಾರ ನಿರ್ದಾಕ್ಷ್ಯೀಣ್ಯ ಕ್ರಮ ಕೈಗೊಳ್ಳಲಿ” ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಬಡವರ ಅಕ್ಕಿಯಿಂದ ಸ್ಯಾನಿಟೈಸರ್ ತಯಾರಿಕೆ ಸರಿಯಲ್ಲ; ಸಿದ್ದು
ಕೇಂದ್ರ ಸರ್ಕಾರ ಬಡವರಿಗೆ ನೀಡುವ ಪಡಿತರ ಅಕ್ಕಿಯನ್ನು ಬಳಸಿಕೊಂಡು ಸ್ಯಾನಿಟೈಸರ್ ತಯಾರಿಕೆಗೆ ಮುಂದಾಗಿದೆ. ಈ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಸಿದ್ದರಾಮಯ್ಯ, “ಕೇಂದ್ರ ಸರ್ಕಾರ ಬಡವರಿಗೆ ನೀಡುವ ಅಕ್ಕಿಯನ್ನು ಬಳಸಿಕೊಂಡು ಸ್ಯಾನಿಟೈಸರ್ ತಯಾರಿಕೆ ಮಾಡುವುದು ಸರಿ ಅಲ್ಲ.ಸ್ಯಾನಿಟೈಸರ್ ತಯಾರಿಕೆ ಮಾಡುವುದಕ್ಕೆ ಅದರದೇ ಆದ ಕಚ್ಚಾವಸ್ತುಗಳು ಇವೆ. ಅವುಗಳನ್ನು ಬಳಸಿಕೊಂಡು ಸ್ಯಾನಿಟೈಸರ್ ತಯಾರಿಕೆ ಮಾಡಲಿ. ಅದು ಬಿಟ್ಟು ಅಕ್ಕಿಯಿಂದ ಸ್ಯಾನಿಟೈಸರ್ ತಯಾರಿಕೆ ಸರಿ ಅಲ್ಲ. ಅದೇ ಅಕ್ಕಿಯನ್ನು ಬಡವರಿಗೆ ಕೊಟ್ಟರೆ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ” ಎಂದು ಅಭಿಪ್ರಾಯಪಟ್ಟಿದ್ದಾರೆ.