ಬೆಂಗಳೂರು:
ಕರ್ನಾಟಕ ಸರಕಾರವು ರೈತರ ಹಿತದೃಷ್ಠಿಯನ್ನು ಕಾಪಾಡುವ ಹೆಸರಿನಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಕಾಯಿದೆಗೆ ತಿದ್ದುಪಡಿ ಮಾಡಿ ಸುಗ್ರೀವಾಜ್ಞೆ ಮುಖಾಂತರ ಜಾರಿಗೆ ತರುವ ಪ್ರಯತ್ನಕ್ಕೆ ಎಫ್‌ಕೆಸಿಸಿಐ ಅಧ್ಯಕ್ಷ ಸಿ.ಆರ್. ಜನಾರ್ಧನ ವಿರೋಧ ವ್ಯಕ್ತಪಡಿಸಿದ್ದಾರೆ.
ಸರಕಾರವು ಇದರ ಆಗುಹೋಗುಗಳನ್ನು ಸರಕಾರ ಪರಾಮರ್ಶಿಸದೇ ಆತುರದ ನಿರ್ಧಾರವನ್ನು ತರಾತುರಿಯಲ್ಲಿ ಆದರಲ್ಲೂ ಲಾಕ್‍ಡೌನ್ ಸಂದರ್ಭದಲ್ಲಿ ತರಲು ಉದ್ದೇಶಿಸಿರುವುದು ಅತೃಪ್ತಿಕರವಾಗಿರುತ್ತದೆ. ನಮ್ಮ ನೆರೆರಾಜ್ಯವಾದ ಮಹಾರಾಷ್ಟ್ರವೂ ಸಹ ಇಂತಹುದೇ ನಿರ್ಧಾರ ತೆಗೆದುಕೊಳ್ಳುವ ಸಂದರ್ಭದಲ್ಲಿ ಅದರ ಆಗುಹೋಗುಗಳನ್ನು ಅರಿತು ಸುಗ್ರೀವಾಜ್ಞೆ ಹೊರಡಿಸುವುದನ್ನು ಸ್ಥಗಿತಗೊಳಿಸಿರುವುದಾಗಿ ತಿಳಿದುಬಂದಿದೆ ಎಂದಿದ್ದಾರೆ.
ಇಂತಹ ಸೂಕ್ಷ್ಮ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಂದರ್ಭದಲ್ಲಿ ಎಪಿಎಂಸಿ ವಲಯದ ಸಂಘ ಸಂಸ್ಥೆಗಳೊಡನೆ ಚರ್ಚಿಸದೇ ಸರ್ಕಾರವು ಏಕಾಏಕಿ ಸುಗ್ರೀವಾಜ್ಞೆ ಹೊರಡಿಸಲು ನಿರ್ಧರಿಸಿರುವ ಕ್ರಮವನ್ನು ಇಡೀ ಎಪಿಎಂಸಿ ಸಮೂಹವು ವಿರೋಧಿಸುತ್ತದೆ. ಇಂತಹ ನಿರ್ಧಾರವನ್ನು ಸರ್ಕಾರವು ತೆಗೆದುಕೊಂಡಲ್ಲಿ ರಾಜ್ಯದ 177 ಎಪಿಎಂಸಿ ಮಾರುಕಟ್ಟೆಗಳು ತನ್ನ ಸಂಪೂರ್ಣ ಚುಟುವಟಿಕೆಗಳನ್ನು ಸ್ಥಗಿತಗೊಳಿಸಬೇಕಾಗುತ್ತದೆ.
ಅಲ್ಲದೆ, ಈ ವ್ಯಾಪ್ತಿಯಲ್ಲಿ ಬರುವ 20 ಲಕ್ಷಕ್ಕೂ ಹೆಚ್ಚು ಅವಲಂಬಿತರು ಹಾಗೂ ಎಫ್‍ಕೆಸಿಸಿಐ ಮಹಾಸಂಸ್ಥೆಯು ಜೊತೆಗೂಡಿ ಉಗ್ರ ಹೋರಾಟ ನಡೆಸಲಾಗುವುದು ಎಂಬ ಸಂದೇಶವನ್ನು ನೀಡುತ್ತಾ, ಒಂದು ವೇಳೆ ನಮ್ಮ ನಿವೇದನೆಯನ್ನು ಪರಿಗಣಿಸದೇ, ಸರ್ಕಾರ ಈ ನಿಟ್ಟಿನಲ್ಲಿ ಮುಂದುವರೆದಲ್ಲಿ ದಿನಾಂಕ 18.05.2020ರಿಂದ ತೀವ್ರ ಸ್ವರೂಪದ ಹೋರಾಟ ಪ್ರಾರಂಭಿಸಲಾಗುವುದು ಎಂದು ಅಧ್ಯಕ್ಷ ಜನಾರ್ಧನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.