ಬೆಂಗಳೂರು
ಪಿಯುಸಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನದಲ್ಲಿ ಉಪನ್ಯಾಸಕರು ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ಮೌಲ್ಯಮಾಪಕರಲ್ಲಿ ಮನವಿ ಮಾಡಿಕೊಂಡಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್, ಬಾಕಿ ಉಳಿದಿರುವ ಇಂಗ್ಲೀಷ್ ಪತ್ರಿಕೆಯ ಉತ್ತರ ಪತ್ರಿಕೆಯ ಮೌಲ್ಯಮಾಪನವನ್ನು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿಯೇ ನಡೆಸಲಾಗುತ್ತದೆ ಹಾಗೆಯೇ ಮೌಲ್ಯಮಾಪಕರ ಹಿತವನ್ನೂ ಕಾಯಲಾಗುತ್ತದೆ ಎಂದು ತಿಳಿಸಿ ಮೌಲ್ಯಮಾಪಕರಿಗೆ ಪತ್ರ ಬರೆದು ತಿಳಿಸಿದ್ದಾರೆ.
ವಿದ್ಯಾರ್ಥಿ ಜೀವನದ ಪ್ರಮುಖ ತಿರುವಿಗೆ ಅವಕಾಶ ಕಲ್ಪಿಸುವ ಎಸ್ಎಸ್‌ಎಲ್‌ಸಿ ಪರೀಕ್ಷೆಗಳಿಗೆ ಕ್ಷಣ ಗಣನೆ ಆರಂಭವಾಗಿದೆ. ರಾಜ್ಯದ ಉಚ್ಚ ನ್ಯಾಯಾಲಯವು, ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಬೇಕೆಂಬ ಶಿಕ್ಷಣ ಇಲಾಖೆಯ ನಿರ್ಧಾರವನ್ನು ಬೆಂಬಲಿಸಿ ಈ ಕುರಿತಂತೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇತ್ಯರ್ಥಪಡಿಸಿದೆ ಎಂದು ಸುರೇಶ್ ಕುಮಾರ್ ಪತ್ರದಲ್ಲಿ ತಿಳಿಸಿದ್ದಾರೆ.
ಕೊರೋನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಅತ್ಯಂತ ಸುರಕ್ಷಿತವಾಗಿ ಹಾಗೆಯೇ ಮಕ್ಕಳ ಶ್ರೇಯಸ್ಸಿಗೆ ಪೂರಕವಾಗಿ ನಡೆಯುವಲ್ಲಿ ನಿಮ್ಮ ಸಕ್ರಿಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಇಡೀ ರಾಜ್ಯದಲ್ಲಿ ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ಎಲ್ಲಾ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಸೇರಿದಂತಗೆ ಹಲವಾರು ಸಂಘಸಂಸ್ಥೆಗಳು ಸರ್ಕಾರದ ಈ ಪ್ರಯತ್ನಕ್ಕೆ ಕೈಜೋಡಿಸಿವೆ, ಹಲವು ಖಾಸಗಿ ಸಂಸ್ಥೆಗಳು ಪರೀಕ್ಷಾರ್ಥಗಳಿಗೆ ಸ್ಯಾನಿಟೈಸರ್ ಮತ್ತು ಮಾಸ್ಕ್ ಗಳನ್ನು ಪೂರೈಸಲು ಕ್ರಮವಹಿಸಿವೆ.
ಇಲಾಖೆಯು ಪ್ರತಿ ವಿದ್ಯಾರ್ಥಿಗೆ ಕನಿಷ್ಠ 2 ಮಾಸ್ಕ್‌ಗಳನ್ನು ವಿತರಿಸುವ ಉದ್ದೇಶ ಹೊಂದಿದೆ. ರಾಜ್ಯದ ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯೇ ಥರ್ಮಲ್ ಸ್ಕ್ಯಾನರ್‌ಗಳನ್ನು ಪೂರೈಸುತ್ತಿದ್ದು, ಆರೋಗ್ಯ ತಪಾಸಣೆಯೊಂದಿಗೆ ವಿದ್ಯಾರ್ಥಿಗಳ ಯೋಗ ಕ್ಷೇಮಕ್ಕೆ ಮುಂದಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಪರೀಕ್ಷಾ ಮಂಡಳಿಯು ಎಲ್ಲಾ ಮುಂಜಾಗರೂಕತಾ ಕ್ರಮಗಳನ್ನು ತೆಗೆದುಕೊಳ್ಳುವ ವಿಶ್ವಾಸ ಹೊಂದಿದ್ದರೂ ಸಹ ಸುರಕ್ಷಿತ ವಾತಾವರಣದಲ್ಲಿ ಪರೀಕ್ಷೆ ನಡೆಯಬೇಕೆಂಬ ಶಿಕ್ಷಣ ಇಲಾಖೆಯ ಆಶಯವನ್ನು ಸಾಕಾರಗೊಳಿಸುವ ಪ್ರಧಾನವಾದ ಜವಾಬ್ದಾರಿ ನಿಮ್ಮದಾಗಿರುತ್ತದೆ. ಪರೀಕ್ಷೆಗೆ ಸಂಬಂಧಿಸಿದಂತೆ ಸೂಕ್ಷ್ಮ ವಿಚಾರಗಳಿಗೆ ಸ್ಥಳೀಯ ಅವಶ್ಯಕತೆಗಳಿಗನುಗುಣವಾಗಿ ನೀವು ನಿಮ್ಮ ವ್ಯಾಪ್ತಿಯಲ್ಲಿ ಅನುಕೂಲ ಕಲ್ಪಿಸುವುದು ತಮ್ಮ ಬ ಹುದೊಡ್ಡ ಜವಾಬ್ದಾರಿಯಾಗಿದೆ.
ಪರೀಕ್ಷಾ ಕೇಂದ್ರದಲ್ಲಿ ಮಕ್ಕಳು ಒಂದು ಮೀಟರ್ ಹಂತದಲ್ಲಿ ಕುಳಿತುಕೊಳ್ಳುವುದು ಸೇರಿದಂತೆ ಪರೀಕ್ಷಾ ಕೇಂದ್ರಕ್ಕೆ ಬರುವಾಗಲೂ ವಿದ್ಯಾರ್ಥಿಗಳು ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಗಮನ ಹರಿಸಬೇಕಾಗಿದೆ ಎಂದು ಸಚಿವರು ಪತ್ರದಲ್ಲಿ ತಿಳಿಸಿದ್ದಾರೆ.
ಅನಾರೋಗ್ಯಕ್ಕೊಳಗದ ವಿದ್ಯಾರ್ಥಿಗಳಿಗೆ ಅವರ ಮತ್ತು ಇತರೆ ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಪ್ರತ್ಯೇಕ ಕೊಠಡಿಯಲ್ಲಿ ಅವರಿಗೆ ಪರೀಕ್ಷೆ ಬರೆಯಲು ಅನುವು ಮಾಡಿಕೊಡುವುದು ಹಾಗೆಯೇ ಹೆಚ್ಚುವರಿ ಕೊಠಡಿಗಳನ್ನುಕಾಯ್ದಿರಿಸಬೇಕಾಗಿದೆ.
ಹಾಗೇಯೇ ಆರೋಗ್ಯ ತಪಾಸಣೆ ಕುರಿತಂತೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲು ಇಲಾಖೆಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುವುದು. ಅಗತ್ಯ ಬಿದ್ದಲ್ಲಿ ವಲಸೆ ಕಾರ್ಮಿಕರ ಮಕ್ಕಳಿಗೆ ಪರೀಕ್ಷೆ ಬರೆಯಲು ವಿಶೇಷ ಅವಕಾಶ ಕಲ್ಪಿಸುವುದು ಬಗ್ಗೆ ಗಮನಹರಿಸಬೇಕಾಗಿದೆ.
ಪರೀಕ್ಷಾ ಪೂರ್ವದಲ್ಲಿ ಪ್ರತಿ ವಿದ್ಯಾರ್ಥಿ ಮತ್ತು ಪೋಷಕರನ್ನು ಭೇಟಿ ಮಾಡಿ ಪರೀಕ್ಷೆ ಮತ್ತು ಸುರಕ್ಷಿತ ವಾತಾವರಣ ಕುರಿತಂತೆ ಅವರಲ್ಲಿ ಆತ್ಮವಿಶ್ವಾಸ ಮೂಡಿಸುವುದು. ಹೀಗೆ ಒಂದು ಸಮರೋಪಾದಿಯಲ್ಲಿ ಇಂತಹ ವಿದ್ಯಾರ್ಥಿಪರವಾದ ಪ್ರಯತ್ನಕ್ಕೆ ತಮ್ಮನ್ನು ತೊಡಗಿಸಿಕೊಳ್ಳಬೇಕಾದ ಸಂದರ್ಭ ಇದಾಗಿದೆ ಎಂದು ತಮಗೆ ವಿಶೆಷವಾಗಿ ಹೇಳಬೇಕಾಗಿಲ್ಲ ಎಂದೇ ಭಾವಿಸಿದ್ದೇನೆ. ತಮ್ಮ ಸಹಕಾರ ಇಡೀ ವಿದ್ಯಾರ್ಥಿ ಸಮೂಹದ ಭವಿಷ್ಯಕ್ಕೆ ತನ್ನದೇ ಆದ ಕೊಡುಗೆಯನ್ನು ಧಾರೆ ಎರೆಯಲಿದೆ ಎಂದು ಸುರೇಶ್ ಕುಮಾರ್ ಪತ್ರದಲ್ಲಿ ತಿಳಿಸಿದ್ದಾರೆ.