Sunday, 15th December 2024

ಎಲ್ಲ ಸೋಂಕಿತರು ಗುಣಮುಖರಾಗುವಂತೆ ನೋಡಿಕೊಳ್ಳಿ: ವಿಜಯ ಭಾಸ್ಕರ್

ಹಾಸನ:

ರಾಜ್ಯದಲ್ಲಿ ಕೋವಿಡ್ ಸೋಂಕಿತರ ಪ್ರಮಾಣ ನಿಯಂತ್ರಣದಲ್ಲಿದ್ದರೂ ಸಹ ಸಾವಿನ ಸಂಖ್ಯೆಯನ್ನು ಸಂಪೂರ್ಣ ಕಡಿಮೆ ಮಾಡಬೇಕು. ಎಲ್ಲಾ ಸೋಂಕಿತರು ಗುಣಮುಖರಾಗುವಂತೆ ಎಚ್ಚರ ವಹಿಸಬೇಕು ಎಂದು ರಾಜ್ಯ ಮುಖ್ಯ ಕಾರ್ಯದರ್ಶಿ ಟಿ.ಎಂ ವಿಜಯ್ ಭಾಸ್ಕರ್ ತಿಳಿಸಿದ್ದಾರೆ.

ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳೊಡನೆ ನಡೆಸಲಾದ ವೀಡಿಯೋ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು ಈಗಾಗಲೇ ರಾಜ್ಯದಲ್ಲಿ ಮೂವರು ಕೋವಿಡ್ ಸೋಂಕಿತರ ಸಾವಿನ ಸಾಧ್ಯತೆ ತಡೆಯಲು ತಂಡ ರಚನೆ ಮಾಡಲಾಗಿದೆ. ಇದೇ ರೀತಿ ಪ್ರತಿ ಜಿಲ್ಲೆಯಲ್ಲಿಯೂ ಇಂದು ಸಂಜೆಯೊಳಗೆ ಖಾಸಗಿ ತಜ್ಞ ವೈದ್ಯರನ್ನು ಒಳಗೊಂಡ ತಂಡ ರಚಿಸಿ, ಅವರಿಂದ ಪ್ರತಿದಿನ ಆಯಾಯ ಜಿಲ್ಲೆಯಲ್ಲಿರುವ ಕೋವಿಡ್ ಸೋಂಕಿತರ ತಪಾಸಣೆ ನಡೆಸಿ ಚಿಕಿತ್ಸೆ ಒದಗಿಸುವಂತಾಗಬೇಕು. ಮುಂದಿನ ದಿನಗಳಲ್ಲಿಯಾದರೂ ಕೋವಿಡ್-19 ಸಾವು ಸಂಪೂರ್ಣ ನಿಲ್ಲುವಂತಾಗಬೇಕು ಎಂದು ಅವರು ಹೇಳಿದರು.

ರಾಜ್ಯದೊಳಗಿನ ವಲಸೆ ಕಾರ್ಮಿಕರ ಕ್ವಾರಂಟೈನ್ ಅವಧಿ ಮುಕ್ತಾಯವಾಗಿದ್ದರೆ, ಅವರನ್ನು ಆಯಾಯ ಜಿಲ್ಲೆಗಳಿಗೆ ಕಳುಹಿಸಬಹುದಾಗಿದ್ದು, ಜಿಲ್ಲಾಧಿಕಾರಿಯವರು ಈ ಬಗ್ಗೆ ಪರಿಶೀಲಿಸಿ ನಿರ್ಧಾರ ಕೈಗೊಳ್ಳಬೇಕು ಎಂದು ವಿಜಯ್ ಭಾಸ್ಕರ್ ಹೇಳಿದರು.

ರಾಜ್ಯದ ಆರ್ಥಿಕ ಪರಿಸ್ಥಿತಿ ಬಗ್ಗೆಯೂ ಗಮನಹರಿಸಬೇಕಾಗಿದ್ದು ವಾಹನ ಹಾಗೂ ಜಮೀನು ನೊಂದಣಿ ಪ್ರಕ್ರಿಯೆಗೆ ಚಾಲನೆ ನೀಡಬೇಕಾಗುತ್ತದೆ. ಅದಕ್ಕೆ ಜಿಲ್ಲಾಡಳಿತಗಳು ತಯಾರಿ ಮಾಡಿಕೊಳ್ಳಬೇಕು ಎಂದರು.

ಶಂಕಿತರಿಗೆ 5 ಹಾಗೂ 12 ನೇ ದಿನ ಮಾದರಿಗಳ ಪರೀಕ್ಷೆ ನಡೆಯಬೇಕು. ರಾಜ್ಯ ಹಾಗೂ ಪ್ರತಿ ಜಿಲ್ಲೆಯಲ್ಲಿ ಪರೀಕ್ಷಾ ಸಾಮಥ್ರ್ಯ ವೃದ್ಧಿಯಾಗಬೇಕು, ರಾಜ್ಯದಲ್ಲಿ ಕೋವಿಡ್-19 ಚಿಕಿತ್ಸೆಗಾಗಿ 20 ಸಾವಿರ ಬೆಡ್‍ಗಳ ವ್ಯವಸ್ಥೆ ಸಿದ್ಧವಿರಬೇಕು, ಅವುಗಳನ್ನು ಎ.ಬಿ.ಸಿ ಮಾದರಿಗಳಾಗಿ ಗುರುತಿಸಿಡಬೇಕು ಎಂದು ಅವರು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಜಾವಿದ್ ಅಖ್ತರ್ ಅವರು ರಾಜ್ಯದ ಪ್ರತಿ ಜಿಲ್ಲೆಯಲ್ಲಿ 5000 ಕ್ಕೂ ಅಧಿಕ ಪರೀಕ್ಷಾ ಕೇಂದ್ರಗಳ ಸಾಮಥ್ರ್ಯ ಇದ್ದು ಅದನ್ನು ಗರಿಷ್ಠವಾಗಿ ಬಳಸಿಕೊಳ್ಳಬೇಕು ಎಂದರು.

ಅಪರ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಮಾತನಾಡಿ ಇತರೆ ಕಾರ್ಯಗಳನ್ನು ನಿರ್ವಹಿಸಲು ಜಿಲ್ಲಾಡಳಿತದ ವಿವಿಧ ಅಧಿಕಾರಿಗಳನ್ನು ನೇಮಿಸಿ, ಜಿಲ್ಲಾಧಿಕಾರಿಗಳು ಕೇವಲ ಕೊರೋನಾ ನಿಯಂತ್ರಣ ಕ್ರಮಗಳ ಬಗ್ಗೆ ಹೆಚ್ಚು ಜಾಗ್ರತೆ ವಹಿಸಿ ಎಂದರು.

ಈಗಾಗಲೇ ಕೊರೋನಾ ಸೋಂಕಿತರನ್ನು ತಪಾಸಣೆ ಮಾಡುತ್ತಿರುವ ವೈದ್ಯರಿಗೆ ಹೆಚ್ಚಿನ ತರಬೇತಿಯ ಅವಶ್ಯಕತೆ ಇರುವುದರಿಂದ ಎಲ್ಲಾ ಜಿಲ್ಲೆಗಳಲ್ಲಿಯೂ ತಜ್ಞರ ಸಮಿತಿಯನ್ನು ರಚಿಸಿ ಅವರ ಮೂಲಕ ವೈದ್ಯರಿಗೆ ಸಲಹೆ ಹಾಗೂ ತರಬೇತಿಯನ್ನು ನೀಡುವ ವ್ಯವಸ್ಥೆ ಮಾಡಿ ಎಂದು ಅವರು ಹೇಳಿದರು.

ತೀವ್ರ ಉಸಿರಾಟದ ತೊಂದರೆ, ಜ್ವರ, ಕೆಮ್ಮು ಹಾಗೂ ಇತರೆ ಕೊರೋನಾ ಸೋಂಕಿನ ಲಕ್ಷಣಗಳು ಇರುವ ವ್ಯಕ್ತಿಯು ಖಾಸಗಿ ಆಸ್ಪತ್ರೆಯಲ್ಲಿದ್ದರೆ, ಕೂಡಲೇ ಅಂತವರನ್ನು ಕೋವಿಡ್ ಆಸ್ಪತ್ರಗೆ ವರ್ಗಾಯಿಸಿ. ಅದರೆ ಅನಗತ್ಯವಿದ್ದಲ್ಲಿ ವಿನಾಕಾರಣ ರೋಗಿಗಳನ್ನು ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರ ಮಾಡಬೇಡಿ ಎಂದರು.

ಪ್ರಧಾನ ಕಾರ್ಯದರ್ಶಿ ಜಾವಿದ್ ಅಖ್ತರ್ ಅವರು ಪಿ.ಪಿ.ಟಿ ಮೂಲಕ ಜಿಲ್ಲೆಗಳಲ್ಲಿ ಕೊರೋನಾ ನಿಯಂತ್ರಣಾ ಕ್ರಮಗಳನ್ನು ಯಾವ ರೀತಿಯಲ್ಲಿ ಕೈಗೊಳ್ಳಬೇಕು, ಮೂರು ಹಂತದಲ್ಲಿ ಕೋವಿಡ್ ಕೇರ್ ಸಂಟರ್‍ಗಳನ್ನಾಗಿ ಮಾಡಿರುವ ಅಸ್ಪತ್ರೆಗಳು ಯಾವ ರೀತಿ ಕಾರ್ಯ ನಿರ್ವಹಿಸಬೇಕು, ಎಷ್ಟು ಸಿಬ್ಬಂದಿಗಳು ಕಾರ್ಯ ನಿರ್ವಹಿಸಬೇಕು ಎಂದು ಕೊರೋನಾ ನಿಯಂತ್ರಣಾ ಕ್ರಮಗಳ ಸಂಪೂರ್ಣ ಕಾರ್ಯ ತಂತ್ರವನ್ನು ವಿವರಿಸಿದರು.

ಏಪ್ರಿಲ್ ತಿಂಗಳ ಕೊನೆಯವರೆಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಕೋರೋನಾ ಪರೀಕ್ಷಾ ಕೇಂದ್ರವು ಸ್ಥಾಪನೆಯಾಗಬೇಕು. ಇದಕ್ಕಾಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆ ಅಥವಾ ಮೆಡಿಕಲ್ ಕಾಲೇಜುಗಳನ್ನು ಸಿದ್ಧಪಡಿಸಿಕೊಂಡು ಪರೀಕ್ಷಾ ಕೇಂದ್ರದ ಸ್ಥಾಪನೆಗೆ ಅರ್ಜಿ ನೀಡಿ ಎಂದರು.

ರಾಜೀವ್ ಗಾಂಧಿ ವಿಶ್ವವಿದ್ಯಾನಿಲಯದಿಂದ ನೀಡಲಾಗಿರುವ ಎಸ್.ಒ.ಪಿ ( ಪ್ರಮಾಣಿತ ಕಾರ್ಯಚರಣಾ ವಿಧಾನ) ಅನ್ನು ಈಗಾಗಲೇ ಅಗತ್ಯವಿರುವ ಜಿಲ್ಲೆಗಳಿಗೆ ಕಳುಹಿಸಲಾಗಿದೆ. ಅಪರ ಮುಖ್ಯ ಕಾರ್ಯದರ್ಶಿಗಳು ಹೇಳಿದಂತೆ ಜಿಲ್ಲೆಯಲ್ಲಿ ವಿವಿಧ ವಿಷಯಗಳಲ್ಲಿ ಪರಿಣಿತಿ ಹೊಂದಿರುವ ವೈದ್ಯರ ಸಮಿತಿಯನ್ನು ರಚಿಸಿ ಎಸ್.ಒ.ಪಿ ಬಗ್ಗೆ ಸ್ಥಳೀಯ ವೈದ್ಯರಿಗೆ ಸೂಚನೆ ಹಾಗೂ ಸಲಹೆಗಳನ್ನು ನೀಡುವಂತೆ ವ್ಯವಸ್ಥೆ ಮಾಡಿ ಎಂದು ಜಾವಿದ್ ಅಖ್ತರ್ ಹೇಳಿದರು.

ಕೆಲವು ಕೊಳೆಗೇರಿ ಪ್ರದೇಶಗಳಲ್ಲಿ ಹೋಂ ಕ್ವಾರಂಟೈನ್ ಮಾಡಲು ಸಾಧ್ಯವಿಲ್ಲ. ಹಾಗಾಗಿ ಕೊರೋನಾ ಶಂಕಿತರ ದ್ವಿತೀಯ ಸಂಪರ್ಕದಲ್ಲಿ ಇರುವವರನ್ನು ಸರ್ಕಾರಿ ಕ್ವಾರಂಟೈನ್‍ನಲ್ಲಿ ಇರಿಸುವ ವ್ಯವಸ್ಥೆ ಮಾಡಿ ಎಂದರಲ್ಲದೇ ಕೊಳಗೇರಿಗಳಿಗೆ ಆರೋಗ್ಯ ಸಿಬ್ಬಂದಿಗಳು ಪ್ರತಿದಿನ ಭೇಟಿ ನೀಡಿ ವರದಿ ಮಾಡಬೇಕು ಎಂದು ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಕೊರೋನಾ ಸೋಂಕಿತ ವ್ಯಕ್ತಿಯು ಗುಣಮುಖನಾದರೆ, ಆ ವ್ಯಕ್ತಿಯನ್ನು ಪುನಃ 2 ವಾರಗಳವರೆಗೆ ಕ್ವಾರಂಟೈನ್‍ನಲ್ಲಿ ಇಡಬೇಕು. ನಂತರ ವರದಿ ಅವಧಿಯಲ್ಲಿ ಇಡಬೇಕು, ಕಾಂಟ್ಯಾಕ್ಟ್ ಟ್ರೇಸಿಂಗ್ ತಂಡಗಳನ್ನು ಹೆಚ್ಚು ರಚಿಸಿ ಶಂಕಿತರ ಸಂಪರ್ಕಕ್ಕೆ ಬಂದಿರುವವರ ವರದಿಯನ್ನು ಕೂಲಂಕುಶವಾಗಿ ಕಲೆಹಾಕಬೇಕು ಎಂದು ತಿಳಿಸಿದರು.

ಎಲ್ಲಾ ಜಿಲ್ಲೆಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು ಎಲ್ಲಾ ಗ್ರಾಮ ಪಂಚಾಯತಿ ಪಿ.ಡಿ.ಒ ಗಳು ಹಾಗೂ ಮುಖ್ಯ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಯಾವುದೇ ತೀವ್ರ ಉಸಿರಾಟದ ತೊಂದರೆ, ಜ್ವರ, ಕೆಮ್ಮು ಇಂತಹ ರೋಗ ಲಕ್ಷಣಗಳು ಇರುವ ವ್ಯಕ್ತಿಗಳನ್ನು ಗುರುತಿಸಿ ವರದಿ ಸಲ್ಲಿಸುವಂತೆ ಆದೇಶ ನೀಡಿ ಎಂದು ಅವರು ತಿಳಿಸಿದರು.

ಜಿಲ್ಲಾಧಿಕಾರಿ ಆರ್. ಗಿರೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್ ಗೌಡ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಬಿ.ಎ ಪರಮೇಶ್, ಅಪರ ಜಿಲ್ಲಾದಿಕಾರಿ ಕವಿತಾ ರಾಜಾರಾಂ, ಉಪವಿಭಾಗಾಧಿಕಾರಿ ಡಾ. ನವೀನ್ ಭಟ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾನಾಧಿಕಾರಿ ಡಾ. ಸತೀಶ್ ಹಾಗೂ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.