Sunday, 27th October 2024

ಕರೋನಾ ಜಾಗೃತಿಗೆ ಗಮನ ನೀಡಿ

ಬೆಂಗಳೂರು:

ಕೊರೋನಾ ವೈರಾಣು ಸೋಂಕು ಹರಡದಂತೆ ನಿಯಂತ್ರಿಸಲು ಜಿಲ್ಲೆಯಲ್ಲಿ ಹೆಚ್ಚು ಪರಿಣಾಮಕಾರಿ ಆರೋಗ್ಯ ಶಿಕ್ಷಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜನರಲ್ಲಿ ಕೋವಿಡ್-19 ಕುರಿತು ಜಾಗೃತಿ ಮೂಡಿಸಬೇಕೆಂದು ಜಿಲ್ಲಾ ಪಂಚಾಯತಿ ಮುಖ್ಯ ಲೆಕ್ಕಾಧಿಕಾರಿ ಹಾಗೂ ಕೋವಿಡ್-19 ಐಇಸಿ ಚಟುವಟಿಕೆಗಳ ಜಿಲ್ಲಾ ತಂಡ ಮತ್ತು ತರಬೇತಿ ಸಮಿತಿ ಅಧ್ಯಕ್ಷರಾದ ಟಿ.ಆರ್.ಶೋಭ ಅವರು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ದೇವನಹಳ್ಳಿ ತಾಲ್ಲೂಕು, ಬೀರಸಂದ್ರ ಗ್ರಾಮದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪಂಚಾಯತಿ ಕಚೇರಿಯಲ್ಲಿಂದು ನಡೆದ ಕೋವಿಡ್-19 ಐ.ಇ.ಸಿ ಚಟುವಟಿಕೆಗಳ ಜಿಲ್ಲಾ ತಂಡ ಮತ್ತು ತರಬೇತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಮಾಹಿತಿ, ಶಿಕ್ಷಣ, ಸಂವಹನ(ಐ.ಇ.ಸಿ) ಕಾರ್ಯಕ್ರಮಗಳಡಿ ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಕೋವಿಡ್-19/ಕೊರೋನಾ ವೈರಾಣು ಸೋಂಕು ಹರಡದಂತೆ ತಡೆಯಲು ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಸಾರ್ವಜನಿಕರಿಗೆ ಆರೋಗ್ಯ ಶಿಕ್ಷಣ ನೀಡಲಾಗುತ್ತಿದೆ ಎಂದರು.
ಗ್ರಾಮಗಳಲ್ಲಿನ ಜನರು ತಮ್ಮ ಸುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ‌ ತಿಳಿಸಬೇಕು. ವೈಯಕ್ತಿಕ ಶುಚಿತ್ವ ಕಾಪಾಡಿಕೊಳ್ಳುವಂತೆ, ಪದೇ ಪದೇ ಕೈ ತೊಳೆಯುವಂತೆ, ಮನೆಯಿಂದ ಹೊರ ಬರುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ, ಸಾರ್ವಜನಿಕ ಸ್ಥಳಗಳಲ್ಲಿ ‌ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ, ಅನವಶ್ಯಕವಾಗಿ ತಿರುಗಾಡದಂತೆ‌, ಜ್ವರ ಇನ್ನಿತರ ಆರೋಗ್ಯ ಸಮಸ್ಯೆಗಳು ಕಂಡುಬಂದರೆ ನಿರ್ಲಕ್ಷಿಸದೆ ಶೀಘ್ರವಾಗಿ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ವೈದ್ಯರನ್ನು ಸಂಪರ್ಕಿಸಬೇಕೆಂದು ಜನರಿಗೆ‌ ತಿಳಿಸಬೇಕೆಂದರು.

ಕ್ವಾರಂಟೀನ್ ನಲ್ಲಿರಿಸಲಾದ ಕುಟುಂಬಗಳು ಬಳಸಿ ಬಿಸಾಡುವ ಮಾಸ್ಕ್, ಇನ್ನಿತರ ಜೈವಿಕ ತ್ಯಾಜ್ಯ ವಸ್ತುಗಳನ್ನು ಪ್ರತ್ಯೇಕವಾಗಿ ವಿಲೇವಾರಿ ಮಾಡುವ ಕುರಿತು ಸಭೆಯಲ್ಲಿ ಚರ್ಚಿಸಿ ಅಂತಿಮಗೊಳಿಸಲಾಯಿತು. ಸಂಬಂಧಿಸಿದ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕ್ವಾರಂಟೀನ್ ನಲ್ಲಿರಿಸಲಾದ ವ್ಯಕ್ತಿ ಅಥವಾ ಮನೆಗಳಿಂದ ಪ್ರತ್ಯೇಕವಾಗಿ ಜೈವಿಕ‌ ತ್ಯಾಜ್ಯ(Bio Wastes) ಸಂಗ್ರಹಿಸಿ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ಮೂಲಕ ಜೈವಿಕ‌ ವಿಲೇವಾರಿ(Bio Disposal) ಮಾಡಬೇಕು ಎಂದು ಹೇಳಿದರು.

ಐಇಸಿ ಚಟುವಟಿಕೆಗಳಡಿ ಆಶಾ ಕಾರ್ಯಕರ್ತೆಯರಿಗೆ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ, ಗ್ರಾಮ ಪಂಚಾಯತಿ ಕಾರ್ಯಕಾರಿ ಸದಸ್ಯರುಗಳಿಗೆ ಕೋವಿಡ್-19 ಕುರಿತು ತರಬೇತಿ ನೀಡಬೇಕು. ಮನೆ-ಮನೆ ಭೇಟಿ ನೀಡುವ ಆಶಾ ಕಾರ್ಯಕರ್ತೆರುಗಳಿಗೆ, ಆರೋಗ್ಯ ಹಾಗೂ ಶಿಕ್ಷಣ ಇಲಾಖೆ ಸಿಬ್ಬಂದಿಗಳಿಗೆ ಎನ್-95 ಮಾಸ್ಕ್, ಗ್ಲೌಸ್, ಸ್ಯಾನಿಟೈಜರ್ ಗಳನ್ನು ಒದಗಿಸಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಆರೋಗ್ಯ ಇಲಾಖೆ ಅಧಿಕಾರಿಗೆ ಸೂಚಿಸಿದರು.
ಐಇಸಿ ಚಟುವಟಿಕೆಗಳಡಿ, ಇದುವರೆಗೆ ಹೊಸಕೋಟೆ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಸುತ್ತಮುತ್ತಲಿನ ಗ್ರಾಮಗಳಿಗೆ ಆಶಾ ಕಾರ್ಯಕರ್ತೆಯರು, ಆರೋಗ್ಯ ಹಾಗೂ ಶಿಕ್ಷಣ ಇಲಾಖೆ ಸಿಬ್ಬಂದಿಗಳು ಮನೆ-ಮನೆಗೆ ಭೇಟಿ ನೀಡಿ ಅಂದಾಜು‌ 1800 ಕುಟುಂಬಗಳ 8000 ಜನರ ಥರ್ಮಲ್ ‌ಸ್ಕ್ರೀನಿಂಗ್ ನಡೆಸಿ, ಆರೋಗ್ಯ ಮಾಹಿತಿ ಸಂಗ್ರಹಿಸಿದ್ದಾರೆ. ಹಾಗೂ ಕೋವಿಡ್-19/ಕೊರೋನಾ ವೈರಾಣು ಸೋಂಕು ಹರಡದಂತೆ ಕೈಗೊಳ್ಳಬೇಕಾದ ಮುಂಜಾಗ್ರತೆ ಕ್ರಮಗಳ ಕುರಿತ ಮಾಹಿತಿಯುಳ್ಳ ಕರಪತ್ರಗಳನ್ನು ವಿತರಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಿದ್ದಾರೆ. ಅದರಂತೆ ದೇವನಹಳ್ಳಿ ತಾಲ್ಲೂಕು ವ್ಯಾಪ್ತಿಯಲ್ಲಿ ಅಂದಾಜು‌ 800 ಕುಟುಂಬಗಳ 3200 ಜನರು, ದೊಡ್ಡಬಳ್ಳಾಪುರ ತಾಲ್ಲೂಕು ಹಾಗೂ ನೆಲಮಂಗಲ ತಾಲ್ಲೂಕು ವ್ಯಾಪ್ತಿಯಲ್ಲಿ ಅಂದಾಜು‌ 1200 ಕುಟುಂಬಗಳ 4500 ಜನರ, ಥರ್ಮಲ್ ‌ಸ್ಕ್ರೀನಿಂಗ್ ನಡೆಸಿ, ಆರೋಗ್ಯ ಮಾಹಿತಿ ಸಂಗ್ರಹಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಗೋವಿಂದರಾಜು ಸೇರಿದಂತೆ ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿಗಳು ಉಪಸ್ಥಿತರಿದ್ದರು.