ಜಿನಿವಾ:
ಜಗತ್ತಿನಾದ್ಯಂತ ಭಾರೀ ಸಾವು ನೋವು ಮತ್ತು ಅಪಾರ ಆರ್ಥಿಕ ನಷ್ಟಕ್ಕೆ ಕಾರಣವಾಗಿರುವ ಕರೋನಾ ವೈರಸ್ ನಿಗ್ರಹಕ್ಕಾಗಿ ಇಡೀ ವಿಶ್ವವೇ ಒಗ್ಗೂಡಿ ಹೋರಾಟ ನಡೆಸುತ್ತಿದ್ದರೂ ಮಹಾಮಾರಿಯನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ.
ಈ ನಡುವೆ ವಿಶ್ವ ಆರೋಗ್ಯ ಸಂಸ್ಥೆೆ ನೀಡಿರುವ ಹೇಳಿಕೆಯೊಂದರ ಜಗತ್ತಿನ ಜನರನ್ನು ಮತ್ತಷ್ಟು ಭಯಭೀತಗೊಳಿಸಿದೆ. ಕರೋನಾ ವೈರಸ್, ಏಡ್‌ಸ್‌ನಂತೆ ದೊಡ್ಡ ಪಿಡುಗಾಗಿ ಪರಿಣಮಿಸಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆೆಯ ತುರ್ತು ಪರಿಸ್ಥಿತಿ ನಿರ್ವಹಣೆ ಪರಿಣಿತ ಮೈಕ್ ರಯಾನ್ ತಿಳಿಸಿದ್ದಾರೆ.
ಕರೋನಾ ವಿಶ್ವ ಸಮುದಾಯಕ್ಕೆ ದೊಡ್ಡ ಪಿಡುಗಾಗಿದೆ. ಈ ಪೀಡೆಯ ಕಾಟವನ್ನು ನಿಯಂತ್ರಿಸುವುದು ಅಷ್ಟು ಸುಲಭವಲ್ಲ. ಇದರ ಹಾವಳಿ ದೀರ್ಘಕಾಲ ಮುಂದುವರಿಯಲಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಈ ಹೆಮ್ಮಾರಿ ಸದ್ಯಕ್ಕೆ ನಮ್ಮ ವಿಶ್ವವನ್ನು ಬಿಟ್ಟು ಹೋಗುವುದಿಲ್ಲ. ಬದಲಿಗೆ ದೀರ್ಘಕಾಲ ತಳವೂರಲಿದೆ ಈ ನಿಟ್ಟಿನಲ್ಲಿ ನಾವು ತುಂಬಾ ಎಚ್ಚರಿಕೆಯಿಂದ ಈ ಪೀಡೆ ಜತೆಗೆ ಹೆಣಗಬೇಕು. ಇದರೊಂದಿಗೆ ಬದುಕಬೇಕಾದ ಅನಿವಾರ್ಯತೆ ಈಗ ವಿಶ್ವದ ಜನರಿಗೆ ಅನಿವಾರ್ಯವಾಗಿದೆ ಎಂದು ಮೈಕ್ ರಯಾನ್ ತಿಳಿಸಿದ್ದಾರೆ.
ಈಗ ನಾವೆಲ್ಲರೂ ವಾಸ್ತವ ಸಂಗತಿಯನ್ನು ಅರ್ಥ ಮಾಡಿಕೊಳ್ಳಬೇಕು. ಈ ಪೀಡೆ ನಮ್ಮ ವಿಶ್ವದಿಂದ ಯಾವಾಗ ತೊಲಗುತ್ತದೆ ಎಂಬುದನ್ನು ಯಾರೂ ಕೂಡ ನಿಖರವಾಗಿ ಹೇಳಲು ಸಾಧ್ಯವಾಗುತ್ತಿಲ್ಲ. ಆದಾಗ್ಯೂ ಈ ವೈರಸ್‌ಅನ್ನು ಸ್ವಲ್ಪಮಟ್ಟಿಗೆ ನಿಯಂತ್ರಿಸಲು ಸಾಧ್ಯ. ಇದಕ್ಕೇ ಸಮೂಹ ಯತ್ನಗಳನ್ನು ನಾವು ಮುಂದುವರಿಸಬೇಕು. ಇದರ ನಿಗ್ರಹಕ್ಕಾಗಿ ಔಷಧಿ ಮತ್ತು ಲಸಿಕೆ ಕಂಡುಹಿಡಿದ ಬಳಿಕವೂ ಈ ಪೀಡೆಯನ್ನು ಸಂಪೂರ್ಣವಾಗಿ ತೊಲಗಿಸಲು ಸಾಕಷ್ಟು ಸಮಯ ಬೇಕು ಎಂದು ತಿಳಿಸಿದ್ದಾರೆ.