Thursday, 12th December 2024

ಕರೋನಾ ಬಂದವರನ್ನು ಅಸಹ್ಯದಿಂದ ಕಾಣಬೇಡಿ: ಡಾ.ಸುಧಾಕರ್

ಬೆಂಗಳೂರು:
ಕರೋನಾ ಬಂದವರನ್ನು ಅಸಹ್ಯದಿಂದ ಕಾಣುವುದು ಬೇಡ. 97% ರಷ್ಟು ಜನರಿಗೆ ಕೊರೊನಾ ಸೋಂಕು ತಗುಲಿದರೂ ವಾಸಿಯಾಗುತ್ತದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ
 ಕರೋನಾ ವೈರಸ್ ಕುರಿತು ಕೇಂದ್ರದ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಇಂದು ನಡೆಸಿದ ವಿಡಿಯೋ ಕಾನ್ಫರೆನ್ಸ್ ನಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಭಾಗಿಯಾಗಿದ್ದರು. ಈ ವೇಳೆ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕನ್ನು ತಡೆಗಟ್ಟಲು ಕೈಗೊಂಡ ವಿವಿಧ ಕ್ರಮಗಳ ಬಗ್ಗೆ ಕೇಂದ್ರ ಸಚಿವರಿಗೆ ಮಾಹಿತಿ ನೀಡಲಾಗಿದೆ.
 ವಿಡಿಯೋ ಕಾನ್ಫರೆನ್ಸ್ ಬಳಿಕ ಮಾತನಾಡಿದ ಡಾ.ಕೆ.ಸುಧಾಕರ್, ”ನಮ್ಮ ರಾಜ್ಯದಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಕೇಂದ್ರ ಆರೋಗ್ಯ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು. ಬೇರೆ ರಾಜ್ಯಗಳೂ ಕರ್ನಾಟಕ ಮಾದರಿ ಅನುಸರಿಸಲು ಕರೆ ಕೊಟ್ಟರು. ನಮಗೂ ಬೇರೆ ರಾಜ್ಯಗಳಿಗೆ ಸಲಹೆ ಕೊಡಲು ತಿಳಿಸಿದರು” ಎಂದರು.
ಕರೋನಾ ಬಂದವರನ್ನು ಅಸಹ್ಯದಿಂದ ಕಾಣುವುದು ಬೇಡ. ಶೇ.97 ರಷ್ಟು ಜನಕ್ಕೆ ಕೊರೊನಾ ಬಂದರೂ ವಾಸಿಯಾಗುತ್ತೆ. ಕೊರೊನಾ ಬಂದರೆ ಆತಂಕ ಪಡುವ ಅಗತ್ಯ ಇಲ್ಲ. ಬಹಳ ಜನ ಕೊರೊನಾ ಬಂದ್ರೆ ಕಳಂಕ ಅಂತ ಅನ್ಕೊಂಡಿದ್ದಾರೆ. ಕೊರೊನಾ ಸಹ ಬೇರೆ ವೈರಸ್ ಥರ ಒಂದು ವೈರಸ್ ಅಷ್ಟೇ. ಸಹಜ ಜ್ವರ ಹೇಗೆ ಬರುತ್ತೋ ಇದೂ ಕೂಡಾ ಹಾಗೆ” ಎಂದು ಹೇಳಿದರು.
ಕರೋನಾ ಬೇಗ ಹೋಗಲ್ಲ. ಸೀಲ್ ಡೌನ್ ಮಾಡಿದ ಕೂಡಲೇ ‌ಕೊರೊನಾ ಹೋಗಲ್ಲ. ಕೊರೊನಾ ನಮ್ಮ ಜೊತೆಗೆ ಇರುತ್ತೆ. ಅದರಿಂದ ಹೇಗೆ ರಕ್ಷಣೆ ತಗೋಬೇಕು, ಅಂತರ ಕಾಯ್ದುಕೊಳ್ಳಬೇಕು ಅನ್ನೋದನ್ನು ನಾವು ತಿಳ್ಕೋಬೇಕು. ರಾಜ್ಯದಲ್ಲಿ ಎರಡೂವರೆ ತಿಂಗಳಾದ್ರೂ 445 ಪ್ರಕರಣಗಳಷ್ಟೇ ವರದಿಯಾಗಿದೆ. ಈ ಪೈಕಿ‌ 200 ಕ್ಕೂ ಹೆಚ್ಚು ಜನರಿಗೆ ವಾಸಿಯಾಗಿದೆ” ಎಂದು ಡಾ.ಕೆ.ಸುಧಾಕರ್ ಮಾಹಿತಿ ನೀಡಿದರು.
ರಾಜ್ಯದಲ್ಲಿ ಪ್ಲಾಸ್ಮಾ ಥೆರಪಿ ಮೊದಲ ಪ್ರಯೋಗ ಇಂದು
”ಪ್ಲಾಸ್ಮಾ ಥೆರಪಿಗೆ ಕೇಂದ್ರದಿಂದ ಒಪ್ಪಿಗೆ ಸಿಕ್ಕಿದೆ. ಬೆಂಗಳೂರು ಮೆಡಿಕಲ್ ಕಾಲೇಜಿಗೆ ಇಂದು ಸೂಚನೆ ನೀಡಿದ್ದೇವೆ. ನಾಳೆ ಪ್ಲಾಸ್ಮಾ ಥೆರಪಿಯನ್ನು ಮೊದಲ ರೋಗಿಗೆ ಮಾಡಲಿದ್ದೇವೆ. ಥೆರಪಿಗೆ ಡೋನಾರ್ ಸಹ ಸಿಕ್ಕಿದ್ದಾರೆ” ಎಂದು ಡಾ.ಕೆ.ಸುಧಾಕರ್ ತಿಳಿಸಿದರು.