Sunday, 15th December 2024

ಕಾಂಗ್ರೆಸ್ ಶಾಸಕರಿಂದ ತಲಾ ಒಂದು ಲಕ್ಷ ರೂ ’ಕರೋನಾ’ ದೇಣಿಗೆ: ಡಿಕೆ ಶಿವಕುಮಾರ್

ಬೆಂಗಳೂರು:
ಕೊರೋನಾ ಮಹಾಮಾರಿ ಸೋಂಕು ನಿಯಂತ್ರಣಕ್ಕಾಗಿ ಕಾಂಗ್ರೆಸ್ ಶಾಸಕರು ತಲಾ ಕನಿಷ್ಠ 1 ಲಕ್ಷ ರೂ. ದೇಣಿಗೆಯನ್ನು ನೀಡಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಅಧ್ಯಕ್ಷ ಡಿಕೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಸಲೀಂ ಅಹಮದ್, ಶಾಸಕ ಅಜಯ್ ಸಿಂಗ್ ಸೇರಿದಂತೆ ಇತರೆ ನಾಯಕರು ಉಪಸ್ಥಿತರಿದ್ದರು. ಸಭೆ ನಂತರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ನಾವು ಆರ್ ಎಸ್ಎಸ್ ಹಾಗೂ ಬಿಜೆಪಿಯವರ ತರಹ ಬೀದಿಗಿಳಿದು ಕಾರ್ಯಕರ್ತರಿಂದೆಲ್ಲಾ ವಸೂಲಿ ಮಾಡುವುದಿಲ್ಲ ಎಂದರು.
ಕೊರೋನಾ ಸೋಂಕು ನಿಯಂತ್ರಣ ವಿಚಾರವಾಗಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಇತರೆ ನಾಯಕರುಗಳು ರಾಷ್ಟ್ರ ಮಟ್ಟದಲ್ಲಿ ಸರ್ಕಾರಕ್ಕೆ ಸಹಕಾರ ನೀಡುತ್ತಿದ್ದಾರೆ. ರಾಜ್ಯದಲ್ಲಿ ನಾವೆಲ್ಲರೂ ಕೂಡ ಸರ್ಕಾರದ ಜತೆ ನಿಂತುಕೊಳ್ಳಲು ನಿರ್ಧರಿಸಿದ್ದೇವೆ. ನಮ್ಮಲ್ಲಿ ಯಾವುದೇ ತರಹದ ಭಿನ್ನಾಭಿಪ್ರಾಯವಿಲ್ಲ. ಸರ್ಕಾರ ತೆಗೆದುಕೊಂಡಿರುವ ಅನೇಕ ಕಾರ್ಯಕ್ರಮ, ಘೋಷಣೆಗಳಿಗೆ ನಮ್ಮಿಂದ ಸಂಪೂರ್ಣ ಸಹಕಾರವಿರುತ್ತದೆ ಎಂದರು.
ಈ ಸಮಸ್ಯೆ ಎದುರಿಸಲು ಹಾಗೂ ಅಗತ್ಯ ಜನರಿಗೆ ನೆರವಾಗಲು ನಮ್ಮ ಪಕ್ಷದ ಒಳಗಡೆ ತೀರ್ಮಾನಿಸಲಾಗಿದೆ. ನಮ್ಮಲ್ಲಿರುವ ಅನೇಕ ಶಾಸಕರುಗಳು ಹಾಗೂ ವಿಧಾನ ಪರಿಷತ್ ಸದಸ್ಯರುಗಳು ಕನಿಷ್ಠ ತಲಾ 1 ಲಕ್ಷ ದೇಣಿಗೆಯನ್ನು ನೀಡಲು ನಿರ್ಧರಿಸಲಾಗಿದೆ. ಇನ್ನು ಜಿಲ್ಲೆ, ತಾಲೂಕು ಮಟ್ಟದ ನಾಯಕರು ಹಾಗೂ ಕಾರ್ಯಕರ್ತರು ಬೇಕಾದರೆ ಸ್ವಯಂ ಇಚ್ಛೆಯಿಂದ ದೇಣಿಗೆ ನೀಡಬಹುದು. ಎಲ್ಲ ಶಾಸಕರುಗಳು ನಮ್ಮ ಶಾಸಕಾಂಗ ಪಕ್ಷದ ನಾಯಕರ ಮೂಲಕ ತಮ್ಮ ದೇಣಿಗೆಯನ್ನು ನೀಡಲಾಗುವುದು ಎಂದು ಮಾಹಿತಿ ನೀಡಿದರು.
ನಮ್ಮ ಪಕ್ಷ, ಆರ್ ಎಸ್ಎಸ್ ಹಾಗೂ ಬಿಜೆಪಿ ರೀತಿಯಲ್ಲಿ ಒತ್ತಡ ಹಾಕಿ ಕಾರ್ಯಕರ್ತರಿಂದ ದೇಣಿಗೆ ಸಂಗ್ರಹಿಸಲು ಮುಂದಾಗುವುದಿಲ್ಲ. ಈ ರೀತಿ ಹಣ ಹಾಗೂ ದವಸ ಧಾನ್ಯ ಸಂಗ್ರಹಿಸಲು ನಮ್ಮ ಪಕ್ಷ ಪ್ರೋತ್ಸಾಹ ನೀಡುವುದಿಲ್ಲ. ಇನ್ನು ಕಾರ್ಯಕರ್ತರುಗಳು, ಅಭಿಮಾನಿಗಳು ದೇಣಿಗೆ ನೀಡುವುದಾದರೆ ಅವರು ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಮೂಲಕ ಹಣವನ್ನು ತಲುಪಿಸಬಹುದು.
ಸಂಗ್ರಹವಾದ ದೇಣಿಗೆಯನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದರ ವಿಚಾರವಾಗಿ ಆರೋಗ್ಯ ಸಚಿವರಾಗಿ ಕಾರ್ಯ ನಿರ್ವಹಿಸಿರುವ ರಮೇಶ್ ಕುಮಾರ್ ಅವರ ನೇತೃತ್ವದಲ್ಲಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್ ಅವರನ್ನೊಳಗೊಂಡಂತೆ ಟಾಸ್ಕ್ ಫೋರ್ಸ್ ಅನ್ನು ರಚಿಸಲಾಗುವುದು. ಈ ಸಮಿತಿಯು ಪರಿಸ್ಥಿತಿ ಅಧ್ಯಯನ ನಡೆಸಿ ದೇಣಿಗೆಯನ್ನು ಯಾವ ರೀತಿ ಬಳಸಿಕೊಳ್ಳಬೇಕು ಎಂಬುದನ್ನು ತಿಳಿಸಲಿದೆ. ಜತೆಗೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಕಾರ್ಯಕ್ರಮಗಳು ಹೇಗಿವೆ. ಅವು ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ? ಜನರಿಗೆ ಸರ್ಕಾರದಿಂದ ಏನು ಸಿಗಬೇಕಿದೆ ಎಂಬ ಅಂಶಗಳ ಬಗ್ಗೆ ಈ ಸಮಿತಿ ಪರಿಶೀಲಿಸಲಿದೆ. ಪಕ್ಷದ ನಾಯಕರು ಹಾಗೂ ಕಾರ್ಯಕರ್ತರಲ್ಲಿ ಇರುವ ವೈದ್ಯರನ್ನು ಈ ಟಾಸ್ಕ್ ಫೋರ್ಸ್ ನಲ್ಲಿ ಒಳಗೊಂಡಿರಲಾಗುತ್ತದೆ. ಯಾರೇಲ್ಲಾ ಇರಲಿದ್ದಾರೆ ಎಂಬುದನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು ಎಂದರು.
ಇವತ್ತು ಅಸಂಘಟಿತ ಕಾರ್ಯಕರ್ತರು, ವಲಸಿಗರು ಮಧ್ಯಾಹ್ನ ಹಾಗೂ ರಾತ್ರಿ ಹೊತ್ತು ಊಟ ಸಿಗದೇ ಹಸಿವಿನಿಂದ ಬಳಲುತ್ತಿದ್ದಾರೆ. ಪಿಜಿ ಕೇಂದ್ರಗಳು ಖಾಲಿಯಾಗಿವೆ. ಹೋಟೇಲ್ ಮುಚ್ಚಿದ್ದು, ಅವರಿಗೂ ಊಟ ಸಿಗುತ್ತಿಲ್ಲ. ಹೀಗಾಗಿ ಇಂದಿರಾ ಕ್ಯಾಂಟೀನ್ ಅನ್ನು ಉಪಯೋಗಿಸಿಕೊಳ್ಳಬೇಕು. ಆ ಜನರಿಗೆ ಉತ್ತಮ ಗುಣಮಟ್ಟದ ಊಟ ನೀಡಬೇಕು ಎಂದು ನಮ್ಮ ಪಕ್ಷ ಒತ್ತಾಯ ಮಾಡುತ್ತಿದೆ.
ಇದು ಕೇವಲ ಒಂದು ಪಕ್ಷದ ಸಮಸ್ಯೆ ಅಲ್ಲ. ಇಡೀ ಪ್ರಪಂಚವೇ ಈ ಸಮಸ್ಯೆ ಎದುರಿಸುತ್ತಿದೆ. ನಾವು ವಿರೋಧ ಪಕ್ಷದಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇವೆ. ನಾವು ಆಡಳಿತದಲ್ಲಿ ಇದ್ದಿದ್ದರೆ, ನಾವು ಎಲ್ಲ ಪಕ್ಷಗಳ ನಾಯಕರನ್ನು ಕರೆದು ಈ ಪರಿಸ್ಥಿತಿ ನಿಭಾಯಿಸುವ ವಿಚಾರದಲ್ಲಿ ನಿಮ್ಮ ಸಲಹೆಗಳೇನು ಎಂದು ಅಭಿಪ್ರಾಯ ಸಂಗ್ರಹಿಸುತ್ತಿದ್ದೆವು. ಆದರೆ ಇಂದು ಸರ್ಕಾರ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ. ಆದರೂ ನಾವು ವಿಧಾನಸೌಧದಲ್ಲಿ ನೀಡಿದ ಅನೇಕ ಸಲಹೆಗಳನ್ನು ಪಡೆದು ಕೆಲವು ಘೋಷಣೆಗಳನ್ನು ಮಾಡಿದೆ. ಇದನ್ನು ನಾವು ಸ್ವಾಗತಿಸುತ್ತೇವೆ. ಕೇಂದ್ರ ಸರ್ಕಾರ ಕೂಡ ಇಎಂಐ, ಸಾಲದ ಕಂತು ಕಟ್ಟುವುದನ್ನು ಮುಂದೂಡಬೇಕು ಎಂದು ನಾವು ಕೇಳಿಕೊಂಡ ಮನವಿಗೆ ಸ್ಪಂದಿಸಿ ತೀರ್ಮಾನ ಪ್ರಕಟಿಸಿದೆ ಎಂದರು. ಸರ್ಕಾರ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿದ್ದರೆ ಅನಿವಾರ್ಯತೆಯಿಂದ ನಮ್ಮ ನಿಯೋಗದೊಂದಿಗೆ ರಾಜ್ಯಪಾಲರನ್ನೋ ಅಥವಾ ಮುಖ್ಯಮಂತ್ರಿಗಳನ್ನೋ ಭೇಟಿ ಮಾಡಿ ನಮ್ಮ ಮನವಿ ಸಲ್ಲಿಸಬೇಕಾಗುತ್ತದೆ ಎಂದರು.
ಈ ಸಮಸ್ಯೆಯನ್ನು ತಡೆಯಲು ಹೇಗೆ ಕಾರ್ಯನಿರ್ವಹಿಸಬೇಕು ಎಂಬ ಸ್ಪಷ್ಟ ಯೋಜನೆ ಸರ್ಕಾರದ ಬಳಿ ಇಲ್ಲ. ಅಧಿಕಾರಿಗಳ ಜತೆ ಚರ್ಚೆ ಮಾಡಿದಾಗ ಸರ್ಕಾರದಿಂದ ಇನ್ನು ಹಣ ತಲುಪಿಲ್ಲ. ಅಗತ್ಯ ವಸ್ತುಗಳು ಲಭ್ಯವಾಗಿಲ್ಲ. ವೈದ್ಯರಿಗೆ ಸುರಕ್ಷಾ ಸೌಲಭ್ಯಗಳೂ ಇಲ್ಲವಾಗಿದೆ ಎಂದರು.
ಈ ವಿಚಾರದಲ್ಲಿ ನಾವು ಹೇಗೆ ನಡೆದುಕೊಳ್ಳಬೇಕು ಎಂಬುದರ ಬಗ್ಗೆ ನಮ್ಮ ಪಕ್ಷದ ಅಧ್ಯಕ್ಷರಾದ ಶ್ರೀಮತಿ ಸೋನಿಯಾ ಗಾಂಧಿ ಅವರು ನಮಗೆ ನಿರ್ದೇಶನ ನೀಡಿದ್ದು, ಸದ್ಯದಲ್ಲೇ ನಾನು ನಮ್ಮ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರಿಗೆ ಸಂದೇಶ ಕಳುಹಿಸುತ್ತೇವೆ ಎಂದರು.
ರೈತರು ಬೆಳೆದ ಪದಾರ್ಥ ರೇಷ್ಮೆ, ತರಕಾರಿ ಯಾವುದೇ ಇರಲಿ, ಅವುಗಲ ಮಾರಾಟಕ್ಕೆ ಅವಕಾಶ ಕಲ್ಪಿಸಬೇಕು. ಅಥವಾ ಸರ್ಕಾರವೇ ಅದನ್ನು ಖರೀದಿಸಬೇಕು. ಯಾವ ಪದಾರ್ಥಗಳನ್ನು ಶೀಥ ಸಂರಕ್ಷಣಾ ಘಟಕದಲ್ಲಿ ಇಡಬಹುದೋ ಅವುಗಳನ್ನು ಸಂರಕ್ಷಿಸಬೇಕು. ಇದರೊಂದಿಗೆ ರೈತರಿಗೆ ನಷ್ಟ ಆಗುವುದನ್ನು ತಡೆಯಬೇಕು. ಇದುವರೆಗೂ ಆಗಿರುವ ನಷ್ಟವನ್ನು ಅಧ್ಯಯನ ಮಾಡಿ ಮುಂದಿನ ದಿನಗಳಲ್ಲಿ ಇದಕ್ಕೆ ಪರಿಹಾರ ನೀಡಬೇಕು ಎಂದು ಸಲಹೆ ನೀಡಿದರು.
ಇನ್ನು ದಿನನಿತ್ಯದ ಅಗತ್ಯ ವಸ್ತುಗಳನ್ನು ಖರೀದಿಸಲು ಹೋಗುವವರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸುತ್ತಿದ್ದಾರೆ ಎಂಬ ವರದಿಗಳು ಬಂದಿವೆ. ದಿನನಿತ್ಯದ ಅಗತ್ಯ ವಸ್ತುಗಳನ್ನು ಪಡೆಯಲು ಬಂದಾಗ ಅವರ ಮೇಲೆ ಪೊಲೀಸರು ದಾಳಿ ಮಾಡುವುದು ಸರಿಯಲ್ಲ. ಈ ವಿಚಾರವಾಗಿ ಸರ್ಕಾರ ಸರಿಯಾದ ವ್ಯವಸ್ಥೆ ಕಲ್ಪಿಸಬೇಕು. ಇದರಿಂದ ಜನರಿಗೆ ಅಗತ್ಯ ವಸ್ತುಗಳೂ ತಲುಪಬೇಕು ಎಂದರು.