Monday, 28th October 2024

ಕಿಸಾನ್ ಕ್ರೆಡಿಟ್ ಕಾರ್ಡ್ ತೋರಿಸಿ ರಸಗೊಬ್ಬರ ಪಡೆಯಬಹುದು

ದಾವಣಗೆರೆ:

ಜಿಲ್ಲೆಯಲ್ಲಿರುವ ರಸಗೊಬ್ಬರ ಮಾರಾಟಗಾರರು (ಸಹಕಾರ ಸಂಘಗಳು ಸೇರಿದಂತೆ) ರಸಗೊಬ್ಬರ ಮಾರಾಟ ಮಾಡಲು ಪಿಒಎಸ್ ಮೆಷಿನ್ ಬಳಸುತ್ತಿದ್ದು, ರಸಗೊಬ್ಬರದ ಸಹಾಯಧನ ಪಾವತಿಗಾಗಿ ರೈತರ ವಿವರಗಳನ್ನು ಪಡೆಯಲು ಕಡ್ಡಾಯವಾಗಿ ಬಯೋಮೆಟ್ರಿಕ್ ಬಳಸುವುದು ಅಗತ್ಯವಿರುತ್ತದೆ. ಆದರೆ ಕೋವಿಡ್ ಹಿನ್ನೆಲೆ ಇದೀಗ ಕಿಸಾನ್ ಕ್ರೆಡಿಕ್ ಅಥವಾ ಚುನಾವಣಾ ಗುರುತಿನ ಚೀಟಿ ಸಂಖ್ಯೆಯನ್ನು ಪಿಒಎಸ್‍ನಲ್ಲಿ ದಾಖಲಿಸಿ ರಸಗೊಬ್ಬರ ಪಡೆಯಬಹುದಾಗಿದೆ.

ಪಿಒಎಸ್ ಉಪಕರಣದ ಮೂಲಕ ರಸಗೊಬ್ಬರ ಖರೀದಿಸಲು ರೈತರು ತಮ್ಮ ಹೆಬ್ಬೆರಳಿನÀ ಗುರುತನ್ನು ನೀಡಬೇಕಾಗಿರುತ್ತದೆ. ಆದರೆ ಪ್ರಸ್ತುತ ಜಿಲ್ಲೆಯಲ್ಲಿ ಕೋವಿಡ್-19ರ ಪರಿಸ್ಥಿತಿ ಇರುವುದರಿಂದ ಕೇಂದ್ರ ಸರ್ಕಾರದ ರಸಗೊಬ್ಬರ ಇಲಾಖೆ ನೀಡಿರುವ ಸೂಚನೆಯಂತೆ ರೈತರು ತಮ್ಮ ಹೆಬ್ಬೆರಳನ್ನು ಬಳಸಲು ಇಚ್ಛಿಸದಿದ್ದಲ್ಲಿ, ರೈತರ ಹೆಬ್ಬೆರಳಿನ ಗುರುತನ್ನು ಪಿಒಎಸ್ ಉಪಕರಣಕ್ಕೆ ಸಂಪರ್ಕಿಸದೇ ರಸಗೊಬ್ಬರ ಮಾರಾಟಗಾರರು ರೈತರ ಬಳಿ ಇರುವ ಕಿಸಾನ್ ಕ್ರೆಡಿಟ್ ಕಾರ್ಡ್ ಅಥವಾ ಚುನಾವಣಾ ಗುರುತಿನ ಚೀಟಿ ಸಂಖ್ಯೆಯನ್ನು ಪಿಒಎಸ್ ಮೆಷಿನ್‍ನಲ್ಲಿ ದಾಖಲಿಸುವುದರ ಮೂಲಕ ರೈತರ ಆಧಾರ್ ಸಂಖ್ಯೆಯನ್ನು ದೃಢೀಕರಿಸಿಕೊಳ್ಳಬಹುದಾಗಿದೆ. ಪಿಒಎಸ್ ಮೆಷಿನ್‍ನಲ್ಲಿ ಬಯೋಮೆಟ್ರಿಕ್ ಬದಲಾಗಿ ಆಧಾರ್ ಸಂಖ್ಯೆಯನ್ನು ಕಿಸಾನ್ ಕ್ರೆಡಿಟ್ ಕಾರ್ಡ್ ಅಥವಾ ಚುನಾವಣಾ ಗುರುತಿನ ಚೀಟಿ ನೀಡಿ ದೃಢೀಕರಿಸಿಕೂಂಡ ರೈತರಿಗೆ ಮಾತ್ರ ರಸಗೊಬ್ಬರಗಳನ್ನು ಮಾರಾಟ ಮಾಡಲು ತಿಳಿಸಿದೆ.

ರಸಗೊಬ್ಬರ ಮಾರಾಟಗಾರರು ಸೇರಿದಂತೆ ಇತರೆ ಕೃಷಿ ಪರಿಕರ ಮಾರಾಟಗಾರರು ಕೋವಿಡ್-19 ಸೋಂಕು ಹರಡದಂತೆ ಕ್ರಮ ವಹಿಸುವ ಸಲುವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಸೋಂಕು ನಿವಾರಕಗಳ ಬಳಕೆ, ಮಾಸ್ಕ್ ಹಾಗೂ ಕೈಗವಚಗಳ ಬಳಕೆಯಂತಹ ಮುನ್ನೆಚ್ಚರಿಕಾ ಕ್ರಮ ಅಳವಡಿಸಿಕೂಂಡು ಕೃಷಿ ಪರಿಕರ ಮಾರಾಟ ಮಾಡಬೇಕು ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದಗಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.