ವಿಶ್ವವಾಣಿ ಸುದ್ದಿಮನೆ
ಬೆಂಗಳೂರು:
ಕರೋನಾ ಲಾಕ್ ಡೌನ್ ನಿಂದಾಗಿ ನಗರದಲ್ಲಿ ಸಿಲುಕಿರುವ ಕೂಲಿಕಾರ್ಮಿಕರಿಗೆ ಹಾಗೂ ಬಡ ಜನರಿಗೆ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ವಲಸಿಗರ ಪ್ರದೇಶಗಳಿಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಭೇಟಿ ನೀಡಿದ್ದಾರೆ.
ಗುರುವಾರ ಬಿಹಾರ, ಒರಿಸ್ಸಾ, ಬೆಂಗಾಲಿ,ಅಸ್ಸಾಂನಿಂದ ವಲಸೆ ಬಂದು ಪೀಣ್ಯದ ಲೇಬರ್ಸ್ ಕಾಲೋನಿ ಮತ್ತು ಸೋಪ್ ಫ್ಯಾಕ್ಟರಿ ಕಾಲೋನಿಯಲ್ಲಿ ನೆಲೆಸಿರುವ ಕಟ್ಟಡ ಕೂಲಿಕಾರ್ಮಿಕರ ಶೆಡ್‌ಗಳಿಗೆ ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದು ಮುಖರ್ಜಿ, ಉತ್ತರ ವಿಭಾಗದ ಡಿಸಿಪಿ ಎನ್. ಶಶಿಕುಮಾರ್ ಜತಗೂಡಿ ಭೇಟಿ ಮಾಡಿ ಪರಿಶೀಲಿಸಿದರು. ಈ ವೇಳೆ ಎಲ್ಲ ಕೂಲಿಕಾರ್ಮಿಕ ಕುಟುಂಬಗಳ ಪ್ರತಿಯೊಬ್ಬರಿಗೂ ಸ್ಯಾನಿಟೈಸರ್, ಮಾಸ್ಕ್ ಹಾಗೂ ಗ್ಲೌಸ್ ವಿತರಿಸಬೇಕು. ಆಹಾರ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಬೇಕು. ಈ ಸಂಬಂಧ ಸ್ಥಳೀಯ ಪೊಲೀಸರು ಬಿಬಿಎಂಪಿ ಅಧಿಕಾರಿ ಜತೆಗೂಡಿ ಕಾರ್ಯನಿರ್ವಹಿಸುವಂತೆ ಸೂಚಿಸಿದರು.
ಬಳಿಕ ವಲಸಿಗರ ಜತೆ ಮಾತನಾಡಿ, ಕರೋನಾ ಭೀತಿಗೆ ಹೆದರುವ ಅಗತ್ಯವಿಲ್ಲ. ಸುರಕ್ಷತೆಗೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಏನಾದರೂ ಸಮಸ್ಯೆ ಎದುರಾದರೆ ಸಹಾವಾಣಿಗೆ ಕರೆ ಮಾಡಿ. ಸಿಬ್ಬಂದಿ ನೆರವಿಗೆ ಧಾವಿಸುತ್ತಾರೆ ಎಂದು ಭರವಸೆ ನೀಡಿದರು.
ಕರೋನಾ ಭೀತಿ ನಡುವೆಯೂ ವಸ್ತುನಿಷ್ಠ ವರದಿಗಾಗಿ ಪತ್ರಕರ್ತರು ಕಾರ್ಯನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ ಸುರಕ್ಷತೆಗಾಗಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ವೈಝರ್ ವಿತರಿಸಿದರು. ಇದೇ ವೇಳೆ ಹೆಚ್ಚುವರಿ ಪೊಲೀಸ್ ಆಯುಕ್ತರಾದ ಎಸ್.ಮುರುಗನ್, ಸೌಮೇಂದು ಮುಖರ್ಜಿ, ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಡಾ ಬಿ.ಆರ್. ರವಿಕಾಂತೇಗೌಡ, ಡಿಸಿಪಿ ನಾರಾಯಣ, ಸೌಮ್ಯಲತಾ ಹಾಗೂ ಸಾರಾ ಫಾತಿಮಾ ಸೇರಿ ಮತ್ತಿತರರಿದ್ದರು.