Sunday, 24th November 2024

ಕೇಂದ್ರ, ರಾಜ್ಯ ಸರ್ಕಾರದ ಗೊಂದಲಕಾರಿ ಹೇಳಿಕೆಗಳಿಂದ ಅರಾಜಕತೆ ಸೃಷ್ಟಿ

ಕಾರ್ಮಿಕರ ವಿಚಾರದಲ್ಲಿ ಅಮಾನವೀಯ ವರ್ತನೆ : ಸಿದ್ದರಾಮಯ್ಯ
ಬೆಂಗಳೂರು :
ಲಾಕ್ ಡೌನ್ ಜಾರಿ ಮತ್ತು ಸಡಿಲಿಕೆ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಗಂಟೆಗೊಂದು, ಗಳಿಗೆಗೆ ಒಂದು ಎಂಬಂತೆ ಹೊರಡಿಸುತ್ತಿರುವ ಆದೇಶಗಳಿಂದಾಗಿ ಗೊಂದಲ ಉಂಟಾಗಿ  ಅರಾಜಕತೆ ಸೃಷ್ಟಿಯಾಗಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿದಿಗಳ ಜೊತೆ ಮಾತನಾಡಿದ ಅವರು, ವಲಸಿಗ ಕಾರ್ಮಿಕರ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿ ಅತ್ಯಂತ ಅಮಾನವೀಯ ಎಂದು ತಿಳಿಸಿದರು.
ಬೇರೆ ರಾಜ್ಯಗಳಿಂದ ನಮ್ಮ ರಾಜ್ಯಕ್ಕೆ ಬರುವ ಹಾಗೂ ನಮ್ಮ ರಾಜ್ಯದಿಂದ ಹೊರಗೆ ಹೋಗುವ ವಲಸಿಗ ಕಾರ್ಮಿಕರ ಪ್ರಯಾಣ ವೆಚ್ಚವನ್ನು ಕೇಂದ್ರ ಸರ್ಕಾರವೇ ಸಂಪೂರ್ಣವಾಗಿ ಭರಿಸಬೇಕು ಎಂದು ಸಿದ್ದರಾಮಯ್ಯ ಅವರು ಇದೇ ವೇಳೆ ಒತ್ತಾಯಿಸಿದ್ದರು.
ಸಿದ್ದರಾಮಯ್ಯ ಅವರು ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿದ್ದು :
ಲಾಕ್‍ಡೌನ್ ಸಡಿಲಿಕೆ ಬಳಿಕ ಬೇರೆ ಬೇರೆ ರಾಜ್ಯಗಳಲ್ಲಿರುವ ವಲಸಿಗ ಕಾರ್ಮಿಕರು ಕರ್ನಾಟಕಕ್ಕೆ, ಇಲ್ಲಿರುವ ಕಾರ್ಮಿಕರು ತಮ್ಮ ತಮ್ಮ ರಾಜ್ಯಗಳಿಗೆ ಹೋಗಲು ಪ್ರಯಾಣ ಬೆಳೆಸಿದ್ದಾರೆ. ಆ ಕಾರ್ಮಿಕರ ಬಗ್ಗೆ ಕೇಂದ್ರ, ರಾಜ್ಯ ಸರ್ಕಾರದ ಬಳಿ ಮಾಹಿತಿಯೇ ಇಲ್ಲ. ಕಾರ್ಮಿಕರನ್ನು ಕರೆಯಿಸಿಕೊಳ್ಳಲು, ಇಲ್ಲಿಂದ ಕಳುಹಿಸಿಕೊಡಲು ಸೂಕ್ತ ವ್ಯವಸ್ಥೆ ಮಾಡುವಂತೆ ಕಾಂಗ್ರೆಸ್ ಪಕ್ಷದ ವತಿಯಿಂದ ನಿನ್ನೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಮನವಿ ಸಲ್ಲಿಸಿದ್ದೇವೆ.
ಬೆಂಗಳೂರಿನಿಂದ ಬೇರೆ ಬೇರೆ ಜಿಲ್ಲೆಗಳಿಂದ ಹೊರಟಿದ್ದ ಕಾರ್ಮಿಕರಿಗೆ ಸರ್ಕಾರ ಬಸ್ ವ್ಯವಸ್ಥೆ ಮಾಡಿ ಪ್ರಯಾಣ ದರ ನಿಗದಿ ಮಾಡಿತ್ತು. ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರು ಒಂದು ಕೋಟಿ ರೂ.ಗಳ ಚೆಕ್ ನೀಡಲು ಮುಂದಾದಾಗ ಎಚ್ಚೆತ್ತ ಸರ್ಕಾರ ಉಚಿತ ಪ್ರಯಾಣ ಎಂದು ಘೋಷಿಸಿತು. ಇದೀಗ ರೈಲಿನ ವ್ಯವಸ್ಥೆ ಮಾಡಿ ಎಂದರೆ ಕೇಂದ್ರ ಸರ್ಕಾರ ಪ್ರಯಾಣ ವೆಚ್ಚದಲ್ಲಿ ರಾಜ್ಯ ಸರ್ಕಾರದಿಂದ ಪಾಲು ಕೇಳುತ್ತಿದೆ. ರೈಲ್ವೆ ಇಲಾಖೆ ಕೇಂದ್ರದ ಅಧೀನದಲ್ಲಿದೆ. ಹೀಗಾಗಿ ಆ ಸರ್ಕಾರವೇ ಕಾರ್ಮಿಕರ ಪ್ರಯಾಣ ವೆಚ್ಚವನ್ನು ಸಂಪೂರ್ಣವಾಗಿ ಭರಿಸಬೇಕು.
ಹೊರ ದೇಶಗಳಲ್ಲಿರುವವರನ್ನು ಕರೆತರಲು ವಿಮಾನದ ವ್ಯವಸ್ಥೆ ಮಾಡುವ ಸರ್ಕಾರಗಳು ಕಾರ್ಮಿಕರ ವಿಚಾರದಲ್ಲಿ ಮೀನಮೇಷ ಎಣಿಸುವುದೇಕೆ ? ರಾಜ್ಯದ ಕೈಗಾರಿಕೋದ್ಯಮಿಗಳು, ವ್ಯಾಪಾರಿಗಳು ಸಿಎಸ್‍ಆರ್ ನಿಧಿಯ ಮೂಲಕ ಪಿಎಂ ಕೇರ್‍ಗೆ 1500 ಕೋಟಿ ರೂ.ಗಳ ದೇಣಿಗೆ ಕೊಟ್ಟಿದ್ದಾರೆ. ಆ ಹಣದಲ್ಲಿ ಕಾರ್ಮಿಕರಿಗೆ ಕೊಂಚ ವೆಚ್ಚ ಮಾಡಲು ಕಷ್ಟವಾದರೂ ಏನು ? ಈ ಕುರಿತು ಸರ್ಕಾರ ಸ್ಪಷ್ಟ ಹೇಳಿಕೆ ಕೊಡಬೇಕು. ಯಾವುದೇ ಗೊಂದಲಕ್ಕೆ ಅವಕಾಶ ಇಲ್ಲದಂತೆ ಪ್ರಯಾಣದ ವೆಚ್ಚವನ್ನು ಕೇಂದ್ರ ಸರ್ಕಾರ ಭರಿಸಬೇಕು.
ಕಾರ್ಮಿಕರ ಅಲೆದಾಟ ತಪ್ಪಿಸಿ : 
ಬೆಂಗಳೂರು ನಗರದಲ್ಲಿ ಕಳೆದ ಮೂರು ದಿನಗಳಿಂದ ಕಾರ್ಮಿಕರನ್ನು ರಾಜ್ಯ ಸರ್ಕಾರ ನಡೆಸಿಕೊಳ್ಳುತ್ತಿರುವ ರೀತಿಯನ್ನು ಜನತೆ ಗಮನಿಸುತ್ತಿದ್ದಾರೆ. ಊರುಗಳಿಗೆ ಹೋಗಲು ನಿರ್ಧರಿಸಿರುವ ಕಾರ್ಮಿಕರನ್ನು ಮೆಜೆಸ್ಟಿಕ್‍ನಿಂದ ಅರಮನೆ ಮೈದಾನಕ್ಕೆ ಅಲ್ಲಿಂದ ಪೀಣ್ಯಕ್ಕೆ ಅಲೆದಾಸಲಾಗುತ್ತಿದೆ. ಲಗೇಜು ಹೊತ್ತು ಮಹಿಳೆಯರು, ಮಕ್ಕಳು ಅಲ್ಲಿಂದಿಲ್ಲಿಗೆ ಅಲೆದಾಡುತ್ತಿರುವುದನ್ನು ನೋಡಿದರೆ ಕಣ್ಣೀರು ಬರುತ್ತದೆ. ಈ ಸರ್ಕಾರಕ್ಕೆ ಹೃದಯ ಎಂಬುದು ಏನಾದರೂ ಇದೆಯೇ ?
ಬಸ್‍ಗಳಿಗೆ ಕಾಯುತ್ತಾ, ಅನ್ನ, ನೀರು ಇಲ್ಲದೆ, ಮಲಗಲು ಜಾಗವಿಲ್ಲದೆ ಬಸ್ ನಿಲ್ದಾಣದಲ್ಲಿ ಮಹಿಳೆಯರು, ಮಕ್ಕಳು ಪರದಾಡುತ್ತಿರುವುದನ್ನು ನೋಡಿಯೂ ಸರ್ಕಾರಕ್ಕೆ ಕನಿಕರ ಬರುತ್ತಿಲ್ಲ. ಕಾರ್ಮಿಕರಿಗೆ ಬಸ್ ಹತ್ತಲು ಸ್ಥಳ ನಿಗದಿ ಮಾಡಲು
ಇರುವ ತೊಂದರೆಯಾದರೂ ಏನು ? 
ವಲಸೆ ಕಾರ್ಮಿಕರ ವಿಚಾರದಲ್ಲಿ ಸರ್ಕಾರ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸಲು ಆಗುತ್ತಿಲ್ಲ. ಕಾರ್ಮಿಕರ ಪ್ರಯಾಣಕ್ಕೆ ಮೂರು ಕೋಟಿ ರೂ. ವೆಚ್ಚ ಆಗಬಹುದು. ಅದನ್ನು ಭರಿಸುವ ಶಕ್ತಿಯೂ ಇಲ್ಲವೇ ? ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ಈ ವರೆಗೆ ಬಂದಿರುವ ದೇಣಿಗೆ ಎಷ್ಟು ಎಂಬುದರ ಬಗ್ಗೆಯೂ ಮಾಹಿತಿ ಇಲ್ಲ.
ಪಿಎಂ ಕೇರ್‍ಗೆ ಈ ವರೆಗೆ 35 ಸಾವಿರ ಕೋಟಿ ರೂ.ಗಳ ದೇಣಿಗೆ ಬಂದಿದೆ. ರೈಲಿನ ಮೂಲಕ ಕಾರ್ಮಿಕರನ್ನು ಕಳಹಿಸಲು 60 ಕೋಟಿ ರೂ. ವೆಚ್ಚ ಆಗಬಹುದು. ಇದು ಸರ್ಕಾರಕ್ಕೆ ದೊಡ್ಡ ಮೊತ್ತವೇನಲ್ಲ. ಇಷ್ಟಕ್ಕೂ ಇದೆಲ್ಲಾ ಜನತೆಯ ಹಣ. ಪ್ರಧಾನಿಯವರು ಇಟ್ಟುಕೊಳ್ಳಲು ಕೊಟ್ಟಿರುವುದಲ್ಲ.
ಕಾರ್ಮಿಕರಿಗೆ ಜಾಬ್ ಕಾರ್ಡ್ : 
ಇನ್ನದಾರೂ ರಾಜ್ಯ ಸರ್ಕಾರ ಬೆಂಗಳೂರಿನಿಂದ ಬೇರೆ ಜಿಲ್ಲೆಗಳಿಗೆ ಹೋಗುವವರಿಗೆ, ಬೇರೆ ಜಿಲ್ಲೆಗಳಿಂದ ಬೆಂಗಳೂರಿಗೆ ಬರುವ ಕಾರ್ಮಿಕರಿಗೆ ಸೂಕ್ತ ವ್ಯವಸ್ಥೆ ಮಾಡಬೇಕು. ಹೋಗುವವರು, ಬರುವವರಿಗೆ ಮೊದಲು ಆರೋಗ್ಯ ತಪಾಸಣೆ ಮಾಡಿಸಬೇಕು. ಅಗತ್ಯವೆನಿಸಿದರೆ ಕ್ವಾರಂಟೈನ್‍ಗೆ ಒಳಪಡಿಸಬೇಕು. ಸ್ವಂತ ಊರುಗಳಿಗೆ ಹೋಗುವ ಕಾರ್ಮಿಕರಿಗೆ ಅಲ್ಲಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಉದ್ಯೋಗದ ಕಾರ್ಡ್‍ಗಳನ್ನು ಒದಗಿಸಿ ಕೆಲಸ ಮಾಡಲು ಅವವಕಾಶ ಕೊಡಬೇಕು. ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಉದ್ಯೋಗ ಎಂಬ ನಿಯಮ ಸಡಿಲಿಸಬೇಕು. ಯೋಜನೆಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ 45 ದಿನಗಳಿಂದ ಸಂಬಳ ಕೊಟ್ಟಿಲ್ಲ. ಕೂಡಲೇ ಅವರಿಗೆ ಭತ್ಯೆ ಬಿಡುಗಡೆ ಮಾಡಬೇಕು.
ಮೂರು ದಿನಗಳ ಹಿಂದೆ ವಿರೋಧ ಪಕ್ಷಗಳ ಮುಖಂಡರ ಜೊತೆ ಸಮಾಲೋಚನೆ ನಡೆಸಿ ಸರ್ಕಾರಕ್ಕೆ ಸಲ್ಲಿಸಲು ಹಕ್ಕೋತ್ತಾಯಗಳ ಪತ್ರ ಸಿದ್ಧಪಡಿಸಿದ್ದೇವೆ. ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಈ ಪತ್ರ ಸಲ್ಲಿಸಲಾಗುವುದು. ಇದಕ್ಕಾಗಿ ಮುಖ್ಯಮಂತ್ರಿಯವರ ಭೇಟಿಗೆ ಸಮಯ ಕೇಳಿ ಪತ್ರ ಬರೆದಿದ್ದೇನೆ ಎಂದು ಸಿದ್ದರಾಮಯ್ಯ ಅವರು ತಿಳಿಸಿದರು.
ಎರಡು ದಿನಗಳಲ್ಲಿ ಸಿಎಂ ಭೇಟಿ : 
ಹಕ್ಕೋತ್ತಾಯಗಳ ಪತ್ರ ಸಿದ್ಧಪಡಿಸಲು ಇದಕ್ಕೂ ಮುನ್ನ ನಡೆದ ಸಭೆಯಲ್ಲಿ ಜೆಡಿಎಸ್‍ನ ಎಚ್.ಡಿ. ರೇವಣ್ಣ, ಕುಪೇಂದ್ರ ರೆಡ್ಡಿ, ಸಿಪಿಐಎಂನ ಜಿ.ಎನ್. ನಾಗರಾಜ್, ಸಿಪಿಐನ ಸ್ವಾತಿ ಸುಂದರೇಶ್, ರೈತ ಸಂಘಟನೆಗಳ ಕೋಡಿಹಳ್ಳಿ ಚಂದ್ರಶೇಖರ್, ಬಡಗಲಪುರ ನಾಗೇಂದ್ರ ಚಾಮರಸಮಾಲಿ ಪಾಟೀಲ್ ಭಾಗವಹಿಸಿದ್ದರು.