ವಿಶ್ವವಾಣಿ ಸುದ್ದಿಮನೆ ಬೆಂಗಳೂರು
ಪಾದರಾಯನಪುರದ ಜನರ ಪರೀಕ್ಷೆಗೆ ಗಂಟಲು ದ್ರವದ ಮಾದರಿ ಸಂಗ್ರಹಿಸುವುದಕ್ಕೆ ಬಿಬಿಎಂಪಿ ಆರೋಗ್ಯ ಇಲಾಖೆಯ ಸಿಬ್ಬಂದಿ ಹಿಂದೇಟು ಹಾಕುತ್ತಿದ್ದರೆ ಮತ್ತೊೊಂದು ಕಡೆ ಸ್ಥಳೀಯ ಜನರ ಗಂಟಲು ದ್ರವದ ಮಾದರಿ ಸಂಗ್ರಹಿಸಬೇಕಾದ ಅನಿವಾರ್ಯತೆ ಪಾಲಿಕೆಗೆ ಎದುರಾಗಿದೆ.
ಗುರುವಾರ ಪಾದರಾಯನಪುರದ ಸುಮಾರು ಏಳು ಸಾವಿರ ಕುಟುಂಬದ ಸುಮಾರು 40 ಸಾವಿರ ಮಂದಿಯನ್ನು ಆರೋಗ್ಯ ತಪಾಸಣೆಗೆ ಒಳಪಡಿಸಿ ಮನೆಗೆ ಒಬ್ಬರಂತೆ ಗಂಟಲು ದ್ರವದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿಕೊಡುವ ಕಾರ್ಯ ಆರಂಭವಾಗಿದೆ. ಗುರುವಾರ 11 ಮಂದಿಯ ಗಂಟಲು ದ್ರವದ ಮಾದರಿ ಸಂಗ್ರಹಿಸಲಾಗಿತ್ತು. ಇನ್ನು ಎರಡನೇ ದಿನವಾದ ಶುಕ್ರವಾರ 15 ರಿಂದ 16 ಮಂದಿಯ ಗಂಟಲು ದ್ರವದ ಮಾದರಿಯನ್ನು ಮಾತ್ರ ಸಂಗ್ರಹಿಸಿ ಲ್ಯಾಬ್‌ಗೆ ಕಳುಹಿಸಿಕೊಡಲಾಗಿದೆ.
ಗಂಟಲು ದ್ರವದ ಮಾದರಿ ಸಂಗ್ರಹಿಸುವುದಕ್ಕೆ ಬಿಬಿಎಂಪಿಯ ಬಳಿ ಸಿಬ್ಬಂದಿ ಕೊರತೆ ಉಂಟಾಗಿದೆ. ಶುಕ್ರವಾರ ಕೇವಲ 14 ಸಿಬ್ಬಂದಿ ಗಂಟಲು ದ್ರವದ ಮಾದರಿ ಸಂಗ್ರಹಿಸುವ ಕುರಿತು ತರಬೇತಿ ಹೊಂದಿರುವ ಸಿಬ್ಬಂದಿ ನೀಡುವಂತೆ ಪಾಲಿಕೆ ಕ್ಲಿನಿಕ್ ವಿಭಾಗಕ್ಕೆ ಮನವಿ ಮಾಡಿದರೂ ಸಿಬ್ಬಂದಿ ನಿಯೋಜನೆ ಮಾಡಿಲ್ಲ. ಪಾದರಾಯನಪುರಕ್ಕೆ ಹೋಗಿ ಅಲ್ಲಿ ಮಾದರಿ ಸಂಗ್ರಹಿಸುವುದಕ್ಕೆ ವೈದ್ಯಕೀಯ ಸಿಬ್ಬಂದಿಯೂ ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ ಶುಕ್ರವಾರ ಪಾದರಾಯನಪುರದಲ್ಲಿ ಗಂಟಲು ದ್ರವದ ಮಾದರಿ ಸಂಗ್ರಹಿಸುವ ಕುರಿತು ಏಳು ಮಂದಿಯ ವೈದ್ಯಕೀಯ ತಂಡಕ್ಕೆ ಪಾದರಾಯನಪುದಲ್ಲಿಯೇ ತರಬೇತಿಯನ್ನು ನೀಡಿ ಮಾದರಿ ಸಂಗ್ರಹಿಸುವ ಕಾರ್ಯಕ್ಕೆ ತೊಡಗಿಸಿಕೊಳ್ಳಲಾಗಿದೆ.
==========
ಪರೀಕ್ಷೆಗೆ ಜನ ಒಪ್ಪುತ್ತಿಲ್ಲ
ಪಾದರಾಯನಪುರದಲ್ಲಿ ಮತ್ತೆ ಸಾರ್ವಜನಿಕರು ಆರೋಗ್ಯ ತಪಾಸಣೆಗೆ ಹಾಗೂ ಗಂಟಲು ದ್ರವದ ಮಾದರಿ ನೀಡುವುದಕ್ಕೆ ಒಪ್ಪುತ್ತಿಲ್ಲ. ನಾವಯ ಆರೋಗ್ಯವಾಗಿದ್ದೇವೆ. ನನಗೆ ಯಾವುದೇ ಪರೀಕ್ಷೆ ಅವಶ್ಯಕತೆ ಇಲ್ಲ ಎನ್ನುತ್ತಿದ್ದಾರೆ. ಶುಕ್ರವಾರ ಎರಡು ತಂಡದಲ್ಲಿ ಗಂಟಲು ದ್ರವದ ಮಾದರಿ ಸಂಗ್ರಹಿಸಲಾಗಿದೆ. ಶನಿವಾರದಿಂದ ಮತ್ತಷ್ಟು ಚುರುಕುಗೊಳಿಸಲಾಗುವುದು.
– ಮನೋರಂಜನ್ ಹೆಗಡೆ, ಪಶ್ಚಿಮ ವಲಯದ ಆರೋಗ್ಯಾಧಿಕಾರಿ