ಗದಗ :
ಜಿಲ್ಲೆಯಲ್ಲಿ ಐದನೇ ಕೊರೋನಾ ಪಾಸಿಟಿವ್ ಪ್ರಕರಣ ದೃಢಪಟ್ಟಿದೆ. ಈ ಕುರಿತು ಸರಕಾರ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್‌ನಲ್ಲಿ ಪಾಸಿಟಿವ್ ಬಂದಿದೆ. ಈ ಕುರಿತು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಪ್ರಕಟಣೆ ನೀಡಿದ್ದಾರೆ.
ಮೊದಲ ಪಾಸಿಟಿವ್ ಕೇಸ್‌ಗಳಂತೆ ಈ ಐದನೇ ಕೇಸ್ ಗದಗನ ಗಂಜೀ ಬಸವೇಶ್ವರ ಸರ್ಕಲ್ ಬಳಿಯ ನಿವಾಸಿಯಾಗಿದ್ದಾರೆ.
ಈಗ ಪತ್ತೆಯಾಗಿರುವ ಐದನೇ ಕೇಸ್ ೭೫ರ ವೃದ್ದ (ಪಿ-514) ಈ ಮೊದಲಿನ ಕೇಸ್ ಸೋಂಕಿತರ ಜೊತೆಗೆ ಯಾವ ಸಂಪರ್ಕವು ಇರಲಿಲ್ಲ. ಒಂದು ವಾರಗಳ ಕಾಲ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಆ ಹಿನ್ನೆಲೆಯಲ್ಲಿ ಮೊನ್ನೆ ಆಸ್ಪತ್ರೆಗೆ ದಾಖಲಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಟುಂಬದ 9 ಜನ ಹಾಗೂ ಪ್ರಾಥಮಿಕ ಸಂಪರ್ಕದಲ್ಲಿದ್ದ 15 ಜನರ ಸೋಂಕಿನ ಪರೀಕ್ಷೆ ನಡೆಸಲಾಗಿದ್ದು, ಅದರಲ್ಲಿ 13 ಜನರ ವರದಿ (ನೆಗೆಟಿವ್) ನಕಾರಾತ್ಮಕವಾಗಿವೆ. ಉಳಿದವರ ಪರೀಕ್ಷೆ ನಡೆಸಲಾಗುತ್ತದೆ.
ಎರಡನೇ ಕೇಸ್ (ಪಿ-೩೦೪) ಮೃತ ಮೊದಲ ಪಾಸಿಟಿವ್ ಕೇಸ್ (ಪಿ-೧೬೬) ಆಪ್ತರಾಗಿದ್ದರು. ಮೂರನೇ ಕೇಸ್ ವ್ಯಕ್ತಿ (ಪಿ-೩೭೦) ಎರಡನೇ ಕೇಸ್ (ಪಿ-೩೦೪) ಸಂಪರ್ಕದಲ್ಲಿದ್ದರು. ಈಗಾಗಲೇ ಗದಗ ನಗರದಲ್ಲಿ ಒಟ್ಟು ೪ ಪಾಸಿಟಿವ್ ಪತ್ತೆಯಾಗಿವೆ. ನಾಲ್ಕೂ ಕೇಸ್‌ಗಳು ರಂಗನವಾಡಿ ಗಲ್ಲಿಯ ವಾಸಿಗಳು ಎಂಬುದನ್ನು ಗಮನಿಸಬೇಕು. ಜಿಲ್ಲಾಡಳಿತ ಏ.೭ರಂದು ಈ ಪ್ರದೇಶವನ್ನು ನಿಯಂತ್ರಿತ ಪ್ರದೇಶವೆಂದು ಘೋಷಿಸಿದ ನಂತರ ಮತ್ತೆ ೩ ಪಾಸಿಟಿವ್ ಅದೇ ಏರಿಯಾದಿಂದ ದೃಢಪಟ್ಟಿವೆ ಎಂಬುದನ್ನು ಗಮನಿಸಬೇಕು.
ಮೊದಲ ಪಾಸಿಟಿವ್ ಕೇಸ್ ಏ. ೬ರಂದು ೮೦ರ ವಯಸ್ಸಿನ ವೃದ್ದೆಯಲ್ಲಿ ದೃಢಪಟ್ಟಿತ್ತು. ಆ ವೃದ್ದೆ ೮ರಂದು ಮೃತರಾದರು. ಎರಡನೇ ಕೇಸ್ ಏ. ೧೬ರಂದು ದೃಢವಾಗಿತ್ತು. ಏ.೧೮ರಂದು ಮೂರನೇ ಕೇಸ್ ದೃಢಪಟ್ಟಿತ್ತು. ನಾಲ್ಕನೇ ಕೇಸ್ ಏ. ೨೦ರಂದು ಪಾಸಿಟಿವ್ ಎಂದು ದೃಢಪಟ್ಟಿತ್ತು. ಇವತ್ತು ಐದನೇ ಪಾಸಿಟಿವ್ ಪ್ರಕರಣ ದೃಢಪಟ್ಟಿದೆ. ಅಂದರೆ ಎಂಟು ದಿನಗಳ ಅಂತರದಲ್ಲಿ ಮತ್ತೊಂದು ಪಾಸಿಟಿವ್ ಪ್ರಕರಣ ದೃಢಪಟ್ಟಿರುವದರಿಂದ ಗದಗ ನಗರದ ಜನರಲ್ಲಿ ಆತಂಕ ಮನೆ ಮಾಡಿದೆ.