ಬೆಂಗಳೂರು:
ರಾಜ್ಯದಲ್ಲಿ ಒಂದೆಡೆ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದರೆ, ಮತ್ತೊಂದೆಡೆ ಗುಣಮುಖರಾಗುತ್ತಿರುವ ಸಂಖ್ಯೆ ಕೂಡ ಏರಿಕೆಯಾಗುತ್ತಿದೆ.
ಈ ನಡುವೆ ಕೊರೋನಾಗೆ ರಾಮಬಾಣವೆಂದೇ ಹೇಳಲಾಗುತ್ತಿರುವ ಪ್ಲಾಸ್ಮಾ ಥೆರಪಿಗೆ ಗುಣಮುಖರಾದ ಸೋಂಕಿತರು ಪ್ಲಾಸ್ಮಾ ದಾನ ಮಾಡುವಂತೆ ವೈದ್ಯರು ಮನವಿ ಮಾಡಿಕೊಳ್ಳುತ್ತಿದ್ದಾರೆ.
ಪ್ರಸ್ತುತ ರಾಜ್ಯದಲ್ಲಿ ಇಬ್ಬರು ಗುಣಮುಖರಾದ ಸೋಂಕಿತರು ಪ್ಲಾಸ್ಮಾ ದಾನ ಮಾಡಲು ಮುಂದಾಗಿದ್ದು, ಉಳಿದವರಾರು ಮುಂದಕ್ಕೆ ಬಂದಿಲ್ಲ. ಹೀಗಾಗಿ ಪ್ಲಾಸ್ಮಾ ದಾನ ಮಾಡುವಂತೆ ವೈದ್ಯರು ಮನವಿ ಮಾಡಿಕೊಂಡಿದ್ದಾರೆ.
ರಾಜ್ಯದಲ್ಲಿ ಸೋಂಕಿತರ ಸಂಖ್ಯೆಯಷ್ಟೇ ಏರಿಕೆಯಾಗುತ್ತಿಲ್ಲ. ಗುಣಮುಖರಾಗುತ್ತಿರುವವರ ಸಂಖ್ಯೆ ಕೂಡ ಏರಿಕೆಯಾಗುತ್ತಿದೆ. ಬೆಂಗಳೂರು ಹಾಗೂ ಮೈಸೂರು ನಗರಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಇದರ ಜೊತೆಜೊತೆಗೆ ಗುಣಮುಖರಾಗುತ್ತಿರುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಇಂತಹವರು ಇತರರು ಗುಣಮುಖರಾಗರು ಸಹಾಯ ಮಾಡಬೇಕೆಂದು ಡಾ. ವಿಶಾಲ್ ರಾವ್ ಅವರು ಹೇಳಿದ್ದಾರೆ.
ಪ್ಲಾಸ್ಮಾ ಥೆರಪಿಗೆ ರಾಜ್ಯ ಸರಕಾರ ಅನುಮತಿ ನೀಡಿದ್ದು, ಈಗಾಗಲೇ ಈ ಪ್ರಯೋಗ ರಾಜ್ಯದಲ್ಲಿ ಆರಂಭವಾಗಿದೆ. ಮುಂದಕ್ಕೆ ಬರುವ ಎಲ್ಲಾ ದಾನಿಗಳನ್ನು ನಾವು ಪರಿಗಣಿಸುತ್ತಿದ್ದೇವೆ. ನಮ್ಮಿಂದ ಸಾಧ್ಯವಾದಷ್ಟು ರೋಗಿಗಳಿಗೆ ನಾವು ಚಿಕಿತ್ಸೆ ನೀಡುತ್ತೇವೆ. ಒಬ್ಬ ಗುಣಮುಖನಾದ ಸೋಂಕಿತ ವ್ಯಕ್ತಿಯ ಪ್ಲಾಸ್ಮಾದಿಂದ ಇಬ್ಬರು ರೋಗಿಗಳ ಸೋಂಕನ್ನು ದೂರಾಗಿಸಬಹುದು ಎಂದು ತಿಳಿಸಿದ್ದಾರೆ.