Friday, 13th December 2024

ಗುತ್ತಿಗೆ ಆಧಾರದ ಮೇಲೆ ಸರಕಾರಿ ಜಮೀನು ಖಾಯಂ ಮಾಡಲು ಆದೇಶ

ಬೆಂಗಳೂರು

ಖಾಸಗಿ ಸಂಘ ಸಂಸ್ಥೆಗಳಿಗೆ ವಿವಿಧ ಉದ್ದೇಶಗಳಿಗೆ ಗುತ್ತಿಗೆ ಆಧಾರದ ಮೇಲೆ ನೀಡಲಾಗಿರುವ ಸರಕಾರಿ ಜಮೀನುಗಳನ್ನು ಗುತ್ತಿಗೆ ಪಡೆದ ಸಂಸ್ಥೆ ಖಾಯಂ ಆಗಿ ಮಂಜೂರು ಮಾಡುವ ಬಗ್ಗೆ ಸರಕಾರ ಆದೇಶ ಹೊರಡಿಸಿದೆ.

ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969ರ ನಿಯಮ  19ರಡಿಯಲ್ಲಿ ಸರಕಾರಿ ಜಮೀನುಗಳನ್ನು ವಿವಿಧ ಉದ್ದೇಶಗಳಿಗೆ ಗರಿಷ್ಠ 30 ವರ್ಷಗಳ ಗುತ್ತಿಗೆ ಅವಧಿಗೆ ನೀಡಲು ಕಳೆದ ಸಚಿವ ಸಂಪುಟದಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಈ ಅವಧಿ ಮುಕ್ತಾಾಯವಾದ ನಂತರ  ಗುತ್ತಿಗೆ ಅವಧಿಯನ್ನು ಸಂಸ್ಥೆ  ಪರಿಸ್ಥಿತಿಗೆ ಅನುಗುಣವಾಗಿ ಕೋರಿಕೆಯ ಮೇರೆಗೆ ಇನ್ನೂ 5  ವರ್ಷಗಳ ಕಾಲ ನವೀಕರಿಸಲು ಜಿಲ್ಲಾಧಿಕಾರಿಯವರಿಗೆ ಅಧಿಕಾರವಿದೆ. ಹಿಂದಿನಿಂದಲೂ ಕಂದಾಯ  ಇಲಾಖೆಯ ಒಡೆತನದ ಸರಕಾರಿ ಜಮೀನುಗಳನ್ನು ಖಾಸಗಿ ಸಂಘ ಸಂಸ್ಥೆಗಳಿಗೆ ಕೋರಿಕೆ ಮೇರೆಗೆ  ವಿವಿಧ ಉದ್ದೇಶಗಳಿಗೆ ಗುತ್ತಿಗೆ ಆಧಾರದ ಮೇಲೆ ನಿಯಮಾನುಸಾರ ನೀಡಲಾಗುತ್ತಿದೆ.

ಪ್ರಸ್ತುತ  ರಾಜ್ಯದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಪರಿಣಾಮಕಾರಿಯಾಗಿ ತಡೆಯುವ ದೃಷ್ಟಿಯಿಂದ ಜಾರಿಯಲ್ಲಿರುವ ಲಾಕ್‌ಡೌನ್‌ನಿಂದಾಗಿ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಸುಸ್ಥಿತಿಯಲ್ಲಿರಿಸಬೇಕಾಗಿರುವುದರಿಂದ ಖಾಸಗಿ ಸಂಘ ಸಂಸ್ಥೆಗಳಿಗೆ  ವಿವಿಧೋದ್ದೇಶಗಳಿಗೆ ಗುತ್ತಿಗೆ ನೀಡಲಾಗಿರುವ ಜಮೀನುಗಳನ್ನು, ಅದೇ ಉದ್ದೇಶಕ್ಕೆ ಖಾಯಂ ಮಂಜೂರಾತಿ ಕೋರಿದ್ದರೆ, ಪ್ರಸ್ತುತ ಮಾರ್ಗಸೂಚಿ ಮೌಲ್ಯವನ್ನು ವಿಧಿಸಲು, ಅನ್ಯ  ಉದ್ದೇಶಕ್ಕೆೆ ಖಾಯಂ ಮಂಜೂರಾತಿ ಕೋರಿದ್ದಲ್ಲಿ, ಮಾರ್ಗಸೂಚಿ ಮೌಲ್ಯದ ಎರಡು ಪಟ್ಟು  ಮೊತ್ತವನ್ನು ವಿಧಿಸಿ ಒಂದು ಬಾರಿಗೆ ಮಾತ್ರ ಅನ್ವಯಿಸುವಂತೆ ಖಾಯಂ ಮಂಜೂರು ಮಾಡುವ ಮೂಲಕ  ಸಂಪನ್ಮೂಲ ಕ್ರೊಡೀಕರಿಸಲು ಉದ್ದೇಶಿಸಲಾಗಿದೆ.
ಗುತ್ತಿಗೆ ನೀಡಲಾಗಿರುವ ಜಮೀನುಗಳನ್ನು  ಖಾಯಂ ಮಂಜೂರಾತಿ ಪಡೆಯಲು ಇಚ್ಛಿಸದಿದ್ದಲ್ಲಿ, ಅಂತಹ ಗುತ್ತಿಗೆ ಜಮೀನುಗಳನ್ನು ಸ್ಥಳ  ಪರಿವೀಕ್ಷಣೆ ನಡೆಸಿ, ಉಪಯೋಗಿಸೇ ಖುಲ್ಲಾ ಉಳಿಸಲಾಗಿರುವ ವಿಸ್ತೀರ್ಣದ ಜಮೀನುಗಳನ್ನು ಪುನಃ  ಸರಕಾರದ ವಶಕ್ಕೆ ಪಡೆಯಲು ಸಹ ನಿರ್ಣಯಿಸಲಾಗಿದೆ.
ಕರ್ನಾಟಕ ಭೂ ಮಂಜೂರಾತಿ ನಿಯಮಗಳು  1969ರ ನಿಯಮ 19ರಿಂದ 22ರ ಪ್ರಕಾರ ಸರಕಾರಿ ಭೂಮಿಯನ್ನು ಖಾಸಗಿ ಸಂಘ ಸಂಸ್ಥೆೆಗಳಿಗೆ  ವಿವಿಧ ಉದ್ದೇಶಗಳಿಗೆ ಗುತ್ತಿಿಗೆ ಆಧಾರದಲ್ಲಿ ನೀಡಲು ಅವಕಾಶವಿದೆ. ಕರ್ನಾಟಕ ಭೂ  ಮಂಜೂರಾತಿ ನಿಯಮಗಳು 1969ರ ನಿಯಮ 22ರ ಎ ಮೇರೆಗೆ ಮಂಜೂರು ಮಾಡುವಾಗ ಅಥವಾ ಗುತ್ತಿಗೆಗೆ  ನೀಡುವಾಗ ಏಕರೂಪದ ಮಾರುಕಟ್ಟೆ ಮೌಲ್ಯ ಅಥವಾ ಮಾರ್ಗಸೂಚಿ ಮೌಲ್ಯವನ್ನು ನಿಗದಿಪಡಿಸಲು ಅವಕಾಶ  ಕಲ್ಪಿಸಲಾಗಿದೆ.
ಈ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ಗುತ್ತಿಗೆ ಆಧಾರದ ಮೇಲೆ ನೀಡಿರುವ  ಸರಕಾರಿ ಜಮೀನುಗಳನ್ನು ಗುತ್ತಿಗೆ ಪಡೆದ ಸಂಸ್ಥೆ ಅದೇ ಉದ್ದೇಶಕ್ಕೆ ಖಾಯಂ ಮಂಜೂರಾತಿ  ಕೋರಿದ್ದಲ್ಲಿ ಪ್ರಸ್ತುತ ಮಾರ್ಗಸೂಚಿ ಮೌಲ್ಯವನ್ನು ವಿಧಿಸಲು ಅಥವಾ ಅನ್ಯ ಉದ್ದೇಶಕ್ಕೆೆ  ಖಾಯಂ ಮಂಜೂರಾತಿ ಕೋರಿದ್ದಲ್ಲಿ ಮಾರ್ಗಸೂಚಿ ಮೌಲ್ಯದ ಎರಡು ಪಟ್ಟು ಮೊತ್ತವನ್ನು ವಿಧಿಸಲು  ಕರ್ನಾಟಕ ಭೂ ಮಂಜೂರಾತಿ
ನಿಯಮಗಳು, 1969ರ ನಿಯಮ 27ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ,  ಒಂದು ಬಾರಿಗೆ ಮಾತ್ರ ಅನ್ವಯಿಸುವಂತೆ ಖಾಯಂ  ಆಗಿ ಸರಕಾರದ ವತಿಯಿಂದ ಮಂಜೂರು ಮಾಡಲು  ಸಂಬಂಧಪಟ್ಟ  ಜಿಲ್ಲಾಧೀಕಾರಿಗಳು ಪ್ರಸ್ತಾಾವನೆ ಸಲ್ಲಿಸಬೇಕು ಎಂದು ಆದೇಶದಲ್ಲಿ  ತಿಳಿಸಲಾಗಿದೆ.
ಗುತ್ತಿಗೆ ನೀಡಲಾಗಿರುವ ಜಮೀನುಗಳನ್ನು ಖಾಯಂ ಮಂಜೂರಾತಿ ಪಡೆಯಲು  ಗುತ್ತಿಗೆ ಪಡೆದ ಸಂಸ್ಥೆ ಇಚ್ಛಿಸದಿದ್ದಲ್ಲಿ ಅಂತಹ ಗುತ್ತಿಗೆ ಜಮೀನುಗಳ ಸ್ಥಳ  ಪರಿವೀಕ್ಷಣೆ ನಡೆಸಿ ಉಪಯೋಗಿಸದೇ ಖುಲ್ಲಾ ಉಳಿಸಲಾಗಿರುವ ವಿಸ್ತೀರ್ಣದ ಜಮೀನುಗಳನ್ನು ಪುನಃ ಸರಕಾರದ ವಶಕ್ಕೆ ಪಡೆಯಲು ಜಿಲ್ಲಾಧಿಕಾರಿ ಕ್ರಮ ವಹಿಸಬೇಕು ಎಂದು ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ಸಿ.ಬಲರಾಮ್ ಆದೇಶದಲ್ಲಿ ತಿಳಿಸಿದ್ದಾರೆ.