Sunday, 27th October 2024

ಗೃಹ ಸಚಿವ ಬೊಮ್ಮಾಯಿ-ಸೋಮಣ್ಣ ಜಟಾಪಟಿ

ವಿಶ್ವವಾಣಿ ಸುದ್ದಿಮನೆ
ಬೆಂಗಳೂರು:
ಪಾದರಾಯನಪುರ ಗಲಾಟೆ ವಿಚಾರದಲ್ಲಿ ನನ್ನ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ ನಡುವೆ ಯಾವುದೇ ಜಟಾಪಟಿ ನಡೆದಿಲ್ಲ. ಕೆಲ ವಿಚಾರಗಳನ್ನ ಅವರಿಗೆ ಹೇಳಬೇಕಿತ್ತು ಹೇಳಿದ್ದೇನೆ ಅಷ್ಟೇ ಎಂದು ವಸತಿ ಸಚಿವ ವಿ. ಸೋಮಣ್ಣ ಎಲ್ಲಾ ಗೊಂದಲಗಳಿಗೂ ತೆರೆ ಎಳೆದಿದ್ದಾರೆ.
ಪಾದರಾಯನಪುರದಲ್ಲಿ ಗಲಾಟೆಯಾದ ನಂತರ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದರು. ಆದರೆ, ತಮಗೆ ತಿಳಿಸದೆ ಬೊಮ್ಮಾಯಿ ಅವರು ಸ್ಥಳಕ್ಕೆ ತೆರಳಿದ್ದಕ್ಕೆ ಸಚಿವ ಸೋಮಣ್ಣ ಗರಂ ಆಗಿದ್ದರು. ಇಬ್ಬರ ನಡುವೆ ವಾಗ್ವಾದ ನಡೆದಿತ್ತು ಎಂಬುದಾಗಿ ವರದಿಯಾಗಿತ್ತು.
ಈ ಕುರಿತು ವಿಧಾನಸೌಧದಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸುವ ಮೂಲಕ ಎಲ್ಲಾ ವಿವಾದಗಳಿಗೆ ತೆರೆ ಎಳೆದಿರುವ ಸಚಿವ ಸೋಮಣ್ಣ, “ನಾನು ಬೆಂಗಳೂರಲ್ಲಿ ಸುಮಾರು 40 ವರ್ಷದಿಂದ ರಾಜಕಾರಣ ಮಾಡುತ್ತಿದ್ದೇನೆ. ಈಗಿರುವ ನಾಯಕರೆಲ್ಲಾ ರಾಜಕಾರಣದಲ್ಲಿ ನನಗಿಂತ ಚಿಕ್ಕವರು. ಇನ್ನೂ ಪಾದರಾಯನಪುರ ಹಿಂದೆ ನನ್ನ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟಿತ್ತು. ಹೀಗಾಗಿ ಗೃಹ ಸಚಿವರಿಗೆ ಕೆಲ ವಿಚಾರಗಳನ್ನ ಹೇಳಬೇಕಿತ್ತು ಹೇಳಿದ್ದೇನೆ ಅಷ್ಟೇ ಹೊರತು ಯಾವುದೇ ಜಟಾಪಟಿಗೆ ಆಸ್ಪದ ಇಲ್ಲ” ಎಂದು ತಿಳಿಸಿದರು.
 ಇದೇ ಸಂದರ್ಭದಲ್ಲಿ ಪಾದರಾಯನಪುರ ಘಟನೆ ನಿರ್ವಹಣೆ ವಿಚಾರದಲ್ಲಿ ಬಿಎಸ್ ವೈ ವೈಫಲ್ಯವಾದ ಬಗ್ಗೆ ಹೈಕಮಾಂಡ್ ಗೆ ದೂರು ನೀಡುವ ವಿಚಾರವಾಗಿ ಮಾತನಾಡಿರುವ ಸೋಮಣ್ಣ, “ಸಿಎಂ ಬಿಎಸ್ ವೈ ಈ ವಿಚಾರದಲ್ಲಿ ಸಮರ್ಥವಾಗಿ ನಡೆದುಕೊಳ್ಳುತ್ತಿದ್ದಾರೆ. ಆದರೆ, ಶಾಸಕ ಜಮೀರ್ ಅಹಮ್ಮದ್ ಹುಡುಗಾಟ ನಿಲ್ಲಿಸಬೇಕು. ಅವರು ಕೂಡ ಜವಾಬ್ದಾರಿಯುತ ವ್ಯಕ್ತಿ. ಹೀಗಾಗಿ ಹುಡುಗಾಟ ನಿಲ್ಲಿಸಿ ಕೊರೋನಾ ವಿರುದ್ಧ ಹೋರಾಟಕ್ಕೆ ಕೈಜೋಡಿಸಲಿ” ಎಂದಿದ್ದಾರೆ.