Monday, 25th November 2024

ಗ್ರಾಪಂಗಳಿಗೆ ಸಂವಿಧಾನ ಬದ್ಧವಾಗಿ ಚುನಾವಣೆ ನಡೆಸುವಂತೆ ಮನವಿ

ಬೆಂಗಳೂರು:

ಗ್ರಾಮ ಪಂಚಾಯತಿಗಳ ಚುನಾವಣೆ ವಿಚಾರದಲ್ಲಿ ರಾಜ್ಯ ಸರ್ಕಾರ ಅಧಿಕಾರವಿಲ್ಲದಿದ್ದರೂ ಕಾನೂನುಬಾಹಿರವಾಗಿ ಚುನಾವಣಾ ಆಯೋಗವನ್ನು ಕಟ್ಟಿಹಾಕಲು ಮುಂದಾಗಿದೆ. ಹೀಗಾಗಿ ಕಾನೂನು ರೀತಿಯಲ್ಲಿ ಚುನಾವಣೆಯನ್ನು ನಡೆಸಬೇಕು ಎಂದು ಚುನಾವಣಾ ಆಯೋಗಕ್ಕೆ ಆಗ್ರಹಪೂರ್ವಕ ಮನವಿ ಮಾಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಗ್ರಾಮ ಪಂಚಾಯಿತಿಗಳಿಗೆ ಸದಸ್ಯರ ನಾಮ ನಿರ್ದೇಶನ ಮಾಡಲು ಅವಕಾಶ ನೀಡದಂತೆ ಹಾಗೂ ಪಂಚಾಯಿತಿಗಳಿಗೆ ಚುನಾವಣೆ ನಡೆಸಲು ರಾಜ್ಯ ಸರಕಾರಕ್ಕೆ ಸೂಚನೆ ನೀಡುವಂತೆ ಒತ್ತಾಯಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ನಿಯೋಗವು ಶುಕ್ರವಾರ ಬೆಂಗಳೂರಿನ ಕನ್ನಿಂಗ್ ಹ್ಯಾಂ ರಸ್ತೆಯಲ್ಲಿರುವ ರಾಜ್ಯ ಚುನಾವಣೆ ಆಯುಕ್ತರಿಗೆ ಮನವಿ ಸನಂತರ ಮಾಧ್ಯಮಗಳ ಜತೆ ಮಾತನಾಡಿದ ಡಿ.ಕೆ. ಶಿವಕುಮಾರ್ ಹೇಳಿದ್ದಿಷ್ಟು…

ಪಂಚಾಯತಿ ಚುನಾವಣೆಗಳು ಯಾವುದೇ ಪಕ್ಷದ ಚಿಹ್ನೆ ಅಡಿಯಲ್ಲಿ ನಡೆಯುವುದಿಲ್ಲ. ಹೀಗಾಗಿ ಈಗ ಇರುವ ಸದಸ್ಯರುಗಳನ್ನೇ ಚುನಾವಣೆ ನಡೆಯುವವರೆಗೂ ಮುಂದುವರಿಸಿ ಎಂದು ನಾವು ಮನವಿ ಮಾಡಿದ್ದೇವೆ. ಆದರೂ ರಾಜ್ಯ ಸರ್ಕಾರ ತನ್ನ ಅಧಿಕಾರ ದುರುಪಯೋಗ ಮಾಡಿಕೊಂಡು ಉಪ ಆಯುಕ್ತರ ಮೂಲಕ ಕೋವಿಡ್ ನೆಪ ನೀಡಿ ಚುನಾವಣೆಯನ್ನು ನಡೆಸದೇ ತಮಗೆ ಬೇಕಾದವರನ್ನು ಆಯ್ಕೆ ಮಾಡಿಕೊಳ್ಳಲು ಸಂವಿಧಾನದ ಉಲ್ಲಂಘನೆ ಮಾಡುತ್ತಿದ್ದಾರೆ.

ಚುನಾವಣಾ ಆಯೋಗವು ಮಾರ್ಚ್ 7ರಂದೇ ಗ್ರಾಮ ಪಂಚಾಯತಿ ಚುನಾವಣೆಗಳ ತಯಾರಿ ಮಾಡಿಕೊಳ್ಳಿ ಎಂದು ಸಂದೇಶ ನೀಡಿತ್ತು. ಅದಾದ ಮೇಲೆ ಕೋವಿಡ್ ವಿಚಾರದಿಂದ ಚುನಾವಣೆಯನ್ನು ಮುಂದೂಡಲು ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಂಡಿದೆ. ಆ ಮೂಲಕ ಚುನಾವಣಾ ಆಯೋಗದ ಕೈ ಕಟ್ಟಿಹಾಕುವ ಪ್ರಯತ್ನ ನಡೆಸಲಾಗಿದೆ.

ಸರ್ಕಾರವು ಉಪ ಆಯುಕ್ತರುಗಳಿಗೆ ಚುನಾವಣೆ ಸಿದ್ಧತೆ ಪ್ರಕ್ರಿಯೆ ಪಕ್ಕಕ್ಕಿಡಿ. ಮತದಾರರ ಪಟ್ಟಿ ಸಿದ್ಧಪಡಿಸುವುದು ಸೇರಿದಂತೆ ಇತರ ವಿಚಾರಗಳನ್ನು ಕೈಬಿಟ್ಟು ಕೋವಿಡ್ ಕಡೆ ಗಮನ ಹರಿಸಿ ಎಂದು ನಿರ್ದೇಶನ ನೀಡಿದೆ. ಕೋವಿಡ್ ಕೆಲಸ ಮಾಡಲಿ, ಬೇಡ ಎನ್ನುವುದಿಲ್ಲ. ಆದರೆ ಅದನ್ನೇ ನೆಪವಾಗಿಟ್ಟುಕೊಂಡು ಸಂವಿಧಾನವನ್ನೇ ಮುಗಿಸಿ ಪಕ್ಷದ ಕಾರ್ಯಕರ್ತರನ್ನು ಪಂಚಾಯತಿಗಳಿಗೆ ನೇಮಕ ಮಾಡಿಕೊಳ್ಳುವ ಪ್ರಯತ್ನವನ್ನು ನೋಡಿಕೊಂಡು ನಾವು ಸುಮ್ಮನೆ ಕೂರಲು ತಯಾರಿಲ್ಲ.

ಪಂಚಾಯಿತಿ ಚುನಾವಣೆಗಳು ಪಕ್ಷಾತೀತವಾಗಿ ನಡೆಯುತ್ತವೆ. ಹೀಗಾಗಿ ಸರ್ಕಾರ ಈ ವಿಚಾರದಲ್ಲಿ ಯಾಕೆ ಹೆದರುತ್ತಿದೆ, ತಮ್ಮ ಪಕ್ಷದ ಕಾರ್ಯಕರ್ತರನ್ನು ಕೂರಿಸುವ ಪ್ರಯತ್ನಕ್ಕೆ ಮುಂದಾಗಿದೆ ಎಂಬುದೇ ಗೊತ್ತಾಗುತ್ತಿಲ್ಲ.
ಇದರ ಬಗ್ಗೆ ಯಾವ ರೀತಿ ಸಮಗ್ರ ಹೋರಾಟ ಮಾಡಲು ಸಾಧ್ಯವೋ ಅದನ್ನು ಮಾಡುತ್ತೇವೆ. ಸರ್ಕಾರ ಆಯೋಗಕ್ಕೆ ಸಲಹೆ ನೀಡಿರಬಹುದು. ಆದರೆ ಆಯೋಗವು ಸಂವಿಧಾನಿಕ ಸ್ವಾಯತ್ತ ಸಂಸ್ಥೆಯಾಗಿದ್ದು, ಸರ್ಕಾರಕ್ಕಿಂತ ಮಿಗಿಲಾಗಿದೆ. ಹೀಗಾಗಿ ಆಯೋಗ ಸಂವಿಧಾನದ ಪ್ರಕಾರ ನಡೆದುಕೊಂಡು, ಅದನ್ನು ರಕ್ಷಣೆ ಮಾಡಬೇಕು. ನಿಮ್ಮನ್ನು ಯಾರೂ ಪ್ರಶ್ನೆ ಮಾಡಲು ಸಾಧ್ಯವಿಲ್ಲ ಎಂದು ನಾವು ಮನವಿ ಮಾಡಿದ್ದೇವೆ. ಆ ಕೆಲಸ ಮಾಡುತ್ತೇವೆ ಎಂದು ಆಯೋಗದ ಅಧಿಕಾರಿಗಳು ಭರವಸೆ ನೀಡಿದ್ದಾರೆ.

ಸರ್ಕಾರಗಳು ಪಂಚಾಯತ್ ವ್ಯವಸ್ಥೆಯನ್ನು ಕೇಸರೀಕರಣ ಮಾಡಲು ನಾವು ಬಿಡುವುದಿಲ್ಲ. ಪಂಚಾಯತ್ ವ್ಯವಸ್ಥೆ ವಿಚಾರದಲ್ಲಿ ರಾಜ್ಯವು ದೇಶಕ್ಕೆ ಮಾದರಿಯಾಗಿದ್ದು, ನಮ್ಮ ಸಂಪ್ರದಾಯವನ್ನು ನಾವು ಉಳಿಸಿಕೊಂಡು ಹೋಗಬೇಕಿದೆ. ಇದು ಆಯೋಗದ ಜವಾಬ್ದಾರಿಯೂ ಆಗಿದೆ. ಒಂದು ವೇಳೆ ಸರ್ಕಾರ ಈ ವಿಚಾರದಲ್ಲಿ ಅಧಿಕಾರ ದುರುಪಯೋಗ ಮಾಡಿಕೊಂಡರೆ ನಾವು ಮುಂದೆ ಯಾವ ರೀತಿ ಹೋರಾಟ ಮಾಡಬೇಕೋ ಅದನ್ನು ಮಾಡುತ್ತೇವೆ.

ಬಿಜೆಪಿಯ ಕುತಂತ್ರಕ್ಕೆ ಹೆದರುವುದಿಲ್ಲ

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ವಿರುದ್ಧ ಎಫ್ಐಆರ್ ದಾಖಲಿಸುವ ಮೂಲಕ ಬಿಜೆಪಿಯು ಕಾಂಗ್ರೆಸ್ ಪಕ್ಷವನ್ನು ಹೆದರಿಸಲು ಮುಂದಾಗಿದೆ. ನಮಗೆ ಈ ದೇಶದ ಕಾನೂನು ಚೆನ್ನಾಗಿ ಗೊತ್ತಿದೆ. ನಾವು ಹೆದರುವುದಿಲ್ಲ. ಏನೇ ಸವಾಲು ಬಂದರೂ ಅದನ್ನು ಎದುರಿಸಲು ಸಿದ್ಧವಿದ್ದೇವೆ. ಪ್ರತಿಪಕ್ಷವಾಗಿ ನಮಗೆ ಯಾವ ಹಕ್ಕಿದೆ, ಸಂವಿಧಾನ ನಮಗೆ ಯಾವ ಸ್ವಾತಂತ್ರ್ಯ ನೀಡಿದೆ ಎಂಬುದು ತಿಳಿದಿದೆ. ನಿನ್ನೆ ಮುಖ್ಯಮಂತ್ರಿಗಳನ್ನು ಭೇಟಿಯಾದಾಗ ಎಫ್ಐಆರ್ ಅನ್ನು ಹಿಂಪಡೆದು ಬಿ ರಿಪೋರ್ಟ್ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.