Sunday, 15th December 2024

ಗ್ರೀನ್ ಝೋನ್ ಹಾವೇರಿ ಜಿಲ್ಲೆಗೂ ಕರೋನಾ !!

ವಿಶ್ವವಾಣಿ‌ ಸುದ್ದಿಮನೆ
ಬೆಂಗಳೂರು:
ಹಚ್ಚ ಹಸಿರಾಗಿ ಗ್ರೀನ್ ಝೋನ್ ನಲ್ಲಿ ನೆಮ್ಮದಿಯೊಗಿದ್ದ ಹಾವೇರಿ ಜಿಲ್ಲೆಗೂ ಕರೋನಾ ವೈರಸ್ ಮಹಾಮಾರಿ ವಕ್ಕರಿಸಿದೆ. ಸೋಮವಾರ ಜಿಲ್ಲೆಯಲ್ಲಿ ಮೊದಲ ಕರೋನಾ ಪ್ರಕರಣ ಪತ್ತೆಯಾಗಿದ್ದು, ಜಿಲ್ಲೆಯ ಜನರಲ್ಲಿ ಆತಂಕ ಸೃಷ್ಟಿಸಿದೆ.
 ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನಲ್ಲಿ ಮೊದಲ ಕರೋನಾ ವೈರಸ್ ಸೋಂಕು ಪತ್ತೆಯಾಗಿದೆ. ಏಪ್ರಿಲ್.28ರಂದು ಮುಂಬೈನಿಂದ ಸೋಂಕಿತ ವ್ಯಕ್ತಿಯು ರಾತ್ರಿ 11 ಗಂಟೆಗೆ ಅಣ್ಣ ಹಾಗೂ ಪುತ್ರನ ಜತೆಗೆ ಸವಣೂರಿಗೆ ಆಗಮಿಸಿದ್ದು ನೇರವಾಗಿ ಮನೆಗೆ ತೆರಳಿದ್ದಾನೆ. ಅಂದು ವ್ಯಕ್ತಿಯಲ್ಲಿ ಯಾವುದೇ ಸೋಂಕಿತ ಲಕ್ಷಣಗಳು ಕಂಡು ಬಂದಿರಲಿಲ್ಲ.
 ಮುಂಬೈನಿಂದ ಆಗಮಿಸಿದರು ಎಂಬ ಮಾಹಿತಿ ಆಧರಿಸಿ ಮೂವರ ರಕ್ತ ಹಾಗೂ ಗಂಟಲು ದ್ರವ್ಯದ ಮಾದರಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಮೇ.03ರಂದು ಒಬ್ಬನಲ್ಲಿ ಕರೋನಾ ವೈರಸ್ ಸೋಂಕು ಪತ್ತೆಯಾಗಿದ್ದು, ಮೇ.04ರಂದು ಮತ್ತೊಬ್ಬನಿಗೆ ಸೋಂಕು ಇರುವುದು ಮೊದಲ ಹಂತದ ತಪಾಸಣೆಯಲ್ಲಿ ದೃಢಪಟ್ಟಿದೆ. ಎರಡನೇ ಹಂತದ ಮರುಪರೀಕ್ಷೆಯ ವರದಿ ಇನ್ನಷ್ಟೇ ಬರಬೇಕಿದೆ.
ಮೊದಲ ಸೋಂಕಿತನೊಂದಿಗೆ 25 ಮಂದಿಗೆ ಸಂಪರ್ಕ
ಕರೋನಾ ವೈರಸ್ ಸೋಂಕಿತನ ಜೊತೆಗೆ ಆತನ ಕುಟುಂಬ ಸದಸ್ಯರು, ಸ್ನೇಹಿತರು ಹಾಗೂ ಆತನಿಗೆ ಚಿಕಿತ್ಸೆ ನೀಡಿದ ವೈದ್ಯರ ತಂಡ ಹೀಗೆ ಪ್ರಾಥಮಿಕ ಸಂಪರ್ಕವನ್ನು ಹೊಂದಿದ್ದ 21 ಮಂದಿಯನ್ನು ಗುರುತಿಸಲಾಗಿದೆ. ಪ್ರಾಥಮಿಕ ಸಂಪರ್ಕದಲ್ಲಿದ್ದ ಎಲ್ಲರನ್ನೂ ಹಾವೇರಿ ಜಿಲ್ಲಾಸ್ಪತ್ರೆಯ ಐಸೋಲೇಟೆನ್ ವಾರ್ಡ್ ನಲ್ಲಿ ಪ್ರತ್ಯೇಕವಾಗಿರಿಸಿ ತಪಾಸಣೆ ನಡೆಸಲಾಗುತ್ತಿದೆ.
ಮೊದಲ ಸೋಂಕಿತನಿದ್ದ ಬಡಾವಣೆ ಸೀಲ್ ಡೌನ್
ಕರೋನಾ ವೈರಸ್ ಸೋಂಕಿತನು ವಾಸವಿದ್ದ ಸವಣೂರಿನ ಎರಡು ಬಡಾವಣೆಗಳಲ್ಲಿ 394 ಮನೆಗಳಿದ್ದು, 1,789 ಜನರು ವಾಸಿಸುತ್ತಿದ್ದಾರೆ. ಈ ಪೂರ್ಣ ಪ್ರದೇಶವನ್ನು ಇದೀಗ ಸೀಲ್ ಡೌನ್ ಮಾಡಲಾಗಿದೆ. ಸದರಿ ಪ್ರದೇಶದಲ್ಲಿ ಒಳ ಬರುವ ಹಾಗೂ ಹೊರ ಹೋಗುವ ಒಂದೇ ಮಾರ್ಗವನ್ನು ತೆರೆಯಲಾಗಿದೆ. ಇನ್ಸಿಡೆಂಟಲ್ ಕಮಾಂಡರ್ ಅನುಮತಿಯಿಲ್ಲ ಯಾರೂ ಈ ಪ್ರದೇಶ ಪ್ರವೇಶಿಸುವಂತಿಲ್ಲ, ಇಲ್ಲಿಯವರು ಹೊರಗೆ ಹೋಗುವಂತೆಯೂ ಇಲ್ಲ.
ಅಗತ್ಯ ವಸ್ತುಗಳನ್ನು ಪೂರೈಸಲು ಕಂಟ್ರೋಲ್ ರೂಮ್ ಸ್ಥಾಪನೆ
ಸವಣೂರಿನ ಎರಡು ಬಡಾವಣೆಗಳಲ್ಲಿನ ಜನರಿಗೆ ದಿನನಿತ್ಯದ ಅಗತ್ಯ ವಸ್ತುಗಳನ್ನು ಪೂರೈಸುವುದಕ್ಕೆ ಹಾಗೂ ವೈದ್ಯಕೀಯ ಅವಶ್ಯಕತೆಗಳನ್ನು ಒದಗಿಸಲು ಕಂಟ್ರೋಲ್ ರೂಮ್ ಸ್ಥಾಪಿಸಲಾಗಿದೆ. ಸಹಾಯಕ ಆಯುಕ್ತರು ಹಾಗೂ ಸವಣೂರಿನ ಡಿಎಸ್ ಪಿ ಇದರ ಮೇಲ್ವಿಚಾರಣೆ ವಹಿಸಿರುತ್ತಾರೆ. ಕೊವಿಡ್-19 ಪರಿಸ್ಥಿತಿ ನಿಭಾಯಿಸಲು ಜಿಲ್ಲಾ ಮಟ್ಟದಲ್ಲಿ ಪ್ರಮುಖ ವಿಪತ್ತು ನಿರ್ವಹಣಾ ತಂಡವನ್ನು ರಚಿಸಲಾಗಿದೆ.