ಮೈಸೂರು:
ಕಣ್ಣಿಗೆ ಕಾಣದ ಮಾಯಾಜಿಂಕೆಯಂತೆ ಮನುಷ್ಯನದ ದೇಹದೊಳಗೆ ನುಗ್ಗುತ್ತಿರುವ ಕರೋನಾ ವೈರಸ್ ನಿಯಂತ್ರಿಸಲು ಕೇಂದ್ರಸರಕಾರ ಲಾಕ್‌ಡೌನ್ ಘೋಷಣೆ ಮಾಡಿದ್ದರಿಂದ ಎರಡು ತಿಂಗಳಿಂದ ವ್ಯಾಪಾರ-ವಹಿವಾಟುಇಲ್ಲದೆ ಮಾಲೀಕರು ಕಂಗೆಟ್ಟಿದ್ದು,ಜೂ.೮ರಿಂದ ದೇವಸ್ಥಾನ ಸೇರಿ ಇನ್ನಿತರ ಮಾಲ್, ರೆಸ್ಟೋರೆಂಟ್ ತೆರೆಯಲು ಅವಕಾಶ ಸಿಕ್ಕಿರುವ ಪರಿಣಾಮ ದಿನಗಣನೆ ಶುರುವಾಗಿದೆ. ಎರಡು ತಿಂಗಳಿಂದ ಬಾಗಿಲು ಬಂದ್ ಮಾಡಿರುವ ಮಾಲೀಕರು ಸಿಬ್ಬಂದಿ ಜತೆಗೂಡಿ ಹೋಟೆಲ್, ರೆಸ್ಟೋರೆಂಟ್, ಲಾಡ್ಜ್‌ಗಳನ್ನ ಶುಚಿಗೊಳಿಸುವ ಕಾರ್ಯದಲ್ಲಿ ತೊಡಗಿದ್ದರೆ, ಇತ್ತ ಭಕ್ತರ ದರ್ಶನಕ್ಕೆ ಬೇಕಾದ ಸಾಮಾಜಿಕ ಅಂತರಕಾಪಾಡಲು ಮುಜರಾಯಿ ಇಲಾಖೆ ಬೇಕಾದ ಸಿದ್ಧತೆ ಮಾಡುತ್ತಿದೆ. ಕೇಂದ್ರದ ಸೂಚನೆಯಂತೆ ರಾಜ್ಯಸರಕಾರ ಗ್ರೀನ್‌ಸಿಗ್ನಲ್ ಕೊಟ್ಟಿದ್ದರಿಂದ ಮಾಲೀಕರು ಸಂತಸಗೊಂಡಿದ್ದರೂ, ಗ್ರಾಹಕರು ಬರದಿದ್ದರೆ ಹೇಗೆ ಎನ್ನುವ ಚಿಂತೆ ಶುರುವಾಗಿದೆ. ಅದಕ್ಕಾಗಿ,ಆರಂಭದಲ್ಲಿ ಕೆಲವು ಕಾರ್ಮಿಕರಿಂದ ಹೋಟೆಲ್, ರೆಸ್ಟೋರೆಂಟ್ ತೆರೆಯಲು ಮುಂದಾಗಿದ್ದರೆ, ಅನುಮತಿ ಸಿಕ್ಕಿದರೂ ಕೊಠಡಿಗಳ ಬುಕ್ಕಿಂಗ್ ಆಗುವ ತನಕ ಓಪನ್ ಮಾಡಲು ಹಿಂದೇಟು ಹಾಕಿದ್ದಾರೆ ಎಂದು ಹೇಳಲಾಗಿದೆ.
ಮುಜರಾಯಿ ಇಲಾಖೆ, ಖಾಸಗಿ ಧಾರ್ಮಿಕ ಟ್ರಸ್ಟ್‌ಗಳು ತಯಾರಿ:
ಲಾಕ್‌ಡೌನ್ ೫ರಲ್ಲಿ ದೇವಸ್ಥಾನ ತೆರೆದು ಭಕ್ತರ ದರ್ಶನಕ್ಕೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಮೈಸೂರಿನ ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಸ್ಥಾನ, ಅರಮನೆ ಆವರಣದ ಮುಜರಾಯಿ ದೇವಸ್ಥಾನಗಳು, ಉತ್ತನ ಹಳ್ಳಿಯ ಜ್ವಾಲಾಮುಖಿ ತ್ರಿಪುರ ಸುಂದರಿ ಅಮ್ಮನವರ ದೇವಸ್ಥಾನ, ನಂಜನಗೂಡಿನ ಶ್ರೀ ನಂಜುಂಡೇಶ್ವರ ದೇವಸ್ಥಾನ ಸೇರಿದಂತೆ ಮೈಸೂರು ನಗರ ಹಾಗೂ ಜಿಲ್ಲೆಯಾದ್ಯಂತ ಎಲ್ಲಾ ಮುಜರಾಯಿ ದೇವಾಲಯಗಳನ್ನು ತೆರೆಯಲು ಕಳೆದ ಮೂರು ದಿನಗಳಿಂದಲೇ ಸಿದ್ಧತೆ ಆರಂಭಿಸಲಾಗಿದೆ. ಈಗಾಗಲೇ ಪ್ರಧಾನ ಅರ್ಚಕರು, ನೌಕರರು ಹಾಗೂ ಭದ್ರತಾ ಸಿಬ್ಬಂದಿಯೊಂದಿಗೆ ಸಮಾಲೋಚನೆ ನಡೆ ಸಿದ್ದು, ಪೂಜಾ ವಿಧಿ-ವಿಧಾನ, ಭಕ್ತಾದಿಗಳಿಗೆ ದರ್ಶ ನದ ವ್ಯವಸ್ಥೆ, ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಸಂಬಂಧ ಸಲಹೆ-ಮಾರ್ಗದರ್ಶನ ನೀಡಲಾಗಿದೆ.
ಜೂನ್ ೮ರಿಂದ ಚಾಮುಂಡೇಶ್ವರಿ ದೇವಾಲಯ ಕಾರ್ಯಾರಂಭವಾಗುವುದರಿಂದ ಬರುವ ಭಕ್ತಾದಿ ಗಳು ಮಾಸ್ಕ್ ಧರಿಸಬೇಕೆಂಬ ನಿಯಮವನ್ನು ಕಡ್ಡಾಯ ಗೊಳಿಸಲಾಗಿದೆ.ದರ್ಶನಕ್ಕೆ ಭಕ್ತರು ಸಾಲಾಗಿ ನಿಲ್ಲುವ ವೇಳೆ ಸಾಮಾ ಜಿಕ ಅಂತರ ಕಾಯ್ದುಕೊಳ್ಳುವಂತೆ ಬಾಕ್ಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಪ್ರವೇಶದ್ವಾರದಲ್ಲಿ ಭಕ್ತರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಿ ದೇಹದ ಉಷ್ಣಾಂಶ ಮಾಪನ ಮಾಡಲಾಗುತ್ತದೆ.
ದೇವಸ್ಥಾನದ ಪ್ರಾಂಗಣ, ಆವರಣದಲ್ಲಿ ಹೆಚ್ಚು ಜನರು ಗುಂಪಾಗಿ ನಿಲ್ಲದಂತೆ ಭದ್ರತಾ ಸಿಬ್ಬಂದಿ ಎಚ್ಚರ ವಹಿ ಸುವರು. ಪ್ರಸಾದವನ್ನು ದೇವಾಲಯ ಪ್ರಾಂಗಣದ ಒಂದು ಕೌಂಟರ್‍ನಲ್ಲಿ ಮಾತ್ರ ಮಾರಾಟ ಮಾಡಲಾಗುವುದು, ದಾಸೋಹ ಸೇವೆ ಆರಂಭಿಸಲು ರಾಜ್ಯಸರಕಾರದ ಮಾರ್ಗ ಸೂಚಿಯನ್ನು ನಿರೀಕ್ಷಿಸಲಾಗುತ್ತಿದೆ ಎಂದು ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಕಾರ್ಯ ನಿರ್ವಾಹಕ ಅಧಿಕಾರಿ ಎಂ.ಎಸ್.ಯತಿರಾಜ್ ಸಂಪತ್‌ಕುಮಾರ್ ತಿಳಿಸಿದ್ದಾರೆ.