Friday, 13th December 2024

ಜೆ.ಸಿ ರಸ್ತೆಯಲ್ಲಿ ವಾಹನಗಳ ಪಾರ್ಕಿಂಗ್ ನಿಷೇಧ

ವಿಶ್ವವಾಣಿ ಸುದ್ದಿಮನೆ
ಬೆಂಗಳೂರು

ನಗರದ ವಾಹನ ಸಂಚಾರದ ದಟ್ಟಣೆ ಇರುವ ಜೆ.ಸಿ.ರಸ್ತೆಯಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಲು ಬಿಬಿಎಂಪಿ ಗಂಭೀರ ಚಿಂತನೆ ನಡೆಸಿದೆ.

ಮಂಗಳವಾರ ಜೆ.ಸಿ ರಸ್ತೆಯಲ್ಲಿರುವ ಬಹುಹಂತದ ಕಾರುಗಳ ಪಾರ್ಕಿಂಗ್ ಸ್ಥಳಕ್ಕೆ ಸಂಸದ ತೇಜಸ್ವಿ ಸೂರ್ಯ, ಶಾಸಕ ಉದಯ ಗರುಡಾಚಾರ್, ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್‌ಕುಮಾರ್ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯನ್ನು ಪರಿಶೀಲನೆ ಮಾಡುವ
ಸಂದರ್ಭದಲ್ಲಿ ಮಿನರ್ವ ವೃತ್ತದಿಂದ ಟೌನ್‌ಹಾಲ್‌ವರೆಗೆ ಎರಡೂ ಬದಿಯಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸುವ ಕುರಿತಂತೆ ಚರ್ಚೆ ಮಾಡಿದ್ದಾರೆ.

ಜೆ.ಸಿ ರಸ್ತೆೆ ಎಂದರೆ ಸದಾ ಕಾಲ ವಾಹನಗಳ ಓಡಾಟ ಇರುತ್ತದೆ. ಈ ರಸ್ತೆಯಲ್ಲಿ ವಾಹನಗಳ ಬಿಡಿ ಭಾಗಗಳ ಮಾರಾಟ ಜೋರಾಗಿ ಇರುತ್ತದೆ.  ಇದರಿಂದ ಈ ಭಾಗದಲ್ಲಿ ವಾಹನಗಳ ನಿಲುಗಡೆಯೂ ಇರುತ್ತದೆ. ಹಾಗೆಯೇ ಇದೇ ರಸ್ತೆಯಲ್ಲಿ ಕನ್ನಡ ಭವನ, ರವೀಂದ್ರ ಕಲಾಕ್ಷೇತ್ರ, ಪುರಭವನ,ಎಡಿಎ ರಂಗಮಂದಿರಗಳು ಇವೆ. ಇಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಸೆೇರಿದಂತೆ  ಇನ್ನಿತರ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಇಂತಹ ಸಂದರ್ಭದಲ್ಲಿ ಈ ಭಾಗದಲ್ಲೂ ವಾಹನಗಳನ್ನು ರಸ್ತೆ ಬದಿ ನಿಲ್ಲಿಸಲಾಗುತ್ತದೆ. ಇದರಿಂದ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿರುತ್ತದೆ. ಈ ಹಿನ್ನೆಲೆಯಲ್ಲಿ ಈ ರಸ್ತೆಯಲ್ಲಿ ವಾಹನ ನಿಲುಗಡೆಯನ್ನು ಸಂಪೂರ್ಣವಾಗಿ ನಿಷೇಧ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ.

ಈ ರಸ್ತೆಯಲ್ಲಿ ಬಿಬಿಎಂಪಿಯ ಬಹುಮಹಡಿ ಕಾರ್, ಆಟೋ ಮುಂತಾದ ವಾಹನಗಳನ್ನು ಪಾರ್ಕಿಂಗ್ ಸಂಪೂರ್ಣ ನಿಷೇಧಿಸಿದರೆ ವಾಹನ ಸವಾರರಿಗೆ ತೊಂದರೆಯಾಗಲಿದ್ದು, ಅಕ್ಕಪಕ್ಕದ ರಸ್ತೆಗಳಲ್ಲಿ ವಾಹನ ನಿಲುಗಡೆ ಮಾಡುವ ಸಾಧ್ಯತೆಗಳಿದ್ದು, ಇದರಿಂದಲೂ ಸಮಸ್ಯೆ ಉಂಟಾಗುತ್ತವೆ ಎಂದು ಅಲ್ಲಿನ ವ್ಯಾಪಾರಿಗಳು ಹೇಳುತ್ತಾರೆ.