Saturday, 14th December 2024

ತಬ್ಲೀಘ್ ಸಮಾವೇಶಕ್ಕೆ ಅನುಮತಿ ಕೊಟ್ಟವರು ಯಾರು ?

ಪೂರ್ವಸಿದ್ಧತೆ, ಮುಂಗಾಗ್ರತೆ ಕೊರತೆ ಸೋಂಕು ಹೆಚ್ಚಲು ಕಾರಣ : ಸಿದ್ದರಾಮಯ್ಯ

ಬೆಂಗಳೂರು :

ಕೊರೋನಾ ಸೋಂಕನ್ನು ವ್ಯವಸ್ಥಿತವಾಗಿ ತಡೆಯುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಮಪೂರ್ಣವಾಗಿ ವಿಫಲವಾಗಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಆರೋಪಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಪೂರ್ವಸಿದ್ಧತೆ ಹಾಗೂ ಮುಂಜಾಗ್ರತಾ ಕ್ರಮಗಳ ಕೊರತೆಯಿಂದಾಗಿ ನಾನಾ ಸಮಸ್ಯೆಗಳು ಉದ್ಭವವಾಗಿದೆ ಎಂದು ದೂರಿದರು.

ಸೋಂಕು ಕಾಣಿಸಿಕೊಂಡ ತಕ್ಷಣ ವಿಮಾನಗಳ ಹಾರಾಟವನ್ನು ಸಂಪೂರ್ಣವಾಗಿ ಬಂದ್ ಮಾಡಿದ್ದರೆ ದೇಶದಲ್ಲಿ ಸೋಂಕು ಈ ಪ್ರಮಾಣದಲ್ಲಿ ಹರಡಲು ಸಾಧ್ಯವಾಗುತ್ತಿರಲಿಲ್ಲ. ಈ ಕೆಲಸವನ್ನು ಪ್ರಧಾನಿ ಮೋದಿಯವರಾಗಲಿ, ಅವರ ಮೇಲೆ ಒತ್ತಡ ಹೇರುವುದನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರಾಗಲಿ ಮಾಡಲಿಲ್ಲ. ತಬ್ಲೀಘ್‍ಗಳಿಂದ ಸೋಂಕು ಹೆಚ್ಚಾಯಿತು ಎನ್ನುತ್ತಾರೆ. ಹಾಗಾದರೆ ಇಟಲಿ, ಅಮೆರಿಕ, ಸ್ಪೇನ್ ನಲ್ಲಿ ಯಾವ ತಬ್ಲೀಘ್‍ಗಳಿದ್ದರು. ರಾಜಕೀಯ ಕಾರಣಕ್ಕಾಗಿ ಆರ್‍ಎಸ್‍ಎಸ್ ನವರು ಈ ರೀತಿಯ ಮಾತುಗಳನ್ನಾಡುತ್ತಿದ್ದಾರೆ. ಇದು ಕೋಮುವಾದಿಗಳ ಹುನ್ನಾರ.

ದೆಹಲಿಯಲ್ಲಿ ತಬ್ಲೀಘ್ ಸಮಾವೇಶಕ್ಕೆ ಪರವಾನಗಿ ಕೊಟ್ಟವರು ಯಾರು ? ಕೇಂದ್ರ ಸರ್ಕಾರವೇ ಪರವಾನಗಿ ಕೊಟ್ಟಿದ್ದು. ಇದು ಮೊದಲನೆಯ ತಪ್ಪು. ಸೋಂಕು ತಡೆಗಟ್ಟದೇ ಹೋಗಿದ್ದು ಎರಡನೇ ತಪ್ಪು. ಯಾರ ಪ್ರಮಾದ ಇದು? ಕೇಂದ್ರವೇ ಇದಕ್ಕೆ ಹೊಣೆ. ತಬ್ಲೀಘ್‍ಗಳ ವಿಷಯದಲ್ಲಿ ಕೋಮುವಾದಿಗಳು ನೀಡುತ್ತಿರುವ ಹೇಳಿಕೆ ರಾಜಕೀಯ ಹುನ್ನಾರ ಎಂಬುದು ಸ್ಪಷ್ಟವಾಗುತ್ತದೆ.

ಮಾರ್ಚ್ 24ರಂದು ಲಾಕ್‍ಡೌನ್ ಮಾಡುವ ಮುನ್ನೆ ಅದಕ್ಕೂ ಮುನ್ನ ಸಿದ್ಧತೆಗಳೇ ಇರಲಿಲ್ಲ. ಜನರಿಗೂ ಮೊದಲೇ ತಿಳಿಸಲಿಲ್ಲ. ಒಂದು ವಾರದ ಮೊದಲೇ ಹೇಳಿದ್ದರೆ ವಲಸೆ ಕಾರ್ಮಿಕರು ಈ ರೀತಿ ಪರದಾಡುವ ಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. ಪೂರ್ವ ಸಿದ್ಧತೆ, ಮುಂಗಾಗ್ರತೆ ಇಲ್ಲದ ಕಾರಣ ಈ ಎಲ್ಲ ಸಮಸ್ಯೆಗಳು ಉದ್ಭವ ಆಗಿವೆ. ಕರ್ನಾಟಕದಲ್ಲಿರುವ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ಉಚಿತವಾಗಿ ಕಳುಹಿಸಬೇಕು. ಅದೇ ರೀತಿ ಹೊರ ರಾಜ್ಯಗಳಲ್ಲಿರುವ ಕನ್ನಡಿಗರನ್ನು ಇಲ್ಲಿಗೆ ಕರೆತರಬೇಕು. ಆರ್ಥಿಕ ವಲಯಕ್ಕೆ ಕಾರ್ಮಿಕರೇ ಬೆನ್ನೆಲುಬು. ಅವರ ವಿಚಾರದಲ್ಲಿಯೇ ಈ ರೀತಿ ಮೀನಮೇಷ ಎಣಿಸಿದರೆ ಕಾರ್ಮಿಕರ ಬಗ್ಗೆ ಸರ್ಕಾರಕ್ಕೆ ಇರುವ ಕಾಳಜಿ ಏನು ಎಂಬುದು ಅರ್ಥವಾಗುತ್ತದೆ.

ನಾವು ಇದುವರೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಕಠಿಣ ಶಬ್ದಗಳಿಂದ ಟೀಕೆ ಮಾಡಿರಲಿಲ್ಲ. ಮೊದಲಿನಿಂದಲೂ ನಾವು ಸರ್ಕಾರಕ್ಕೆ ಸಹಕಾರ ನೀಡುತ್ತಾ ಬಂದಿದ್ದೇವೆ. ಆದರೆ, ನಮ್ಮ ಸಲಹೆ ಸೂಚನೆಗಳಿಗೆ ಕಿಮ್ಮತ್ತು ನೀಡುತ್ತಿಲ್ಲ. ಶ್ರಮಿಕ ವರ್ಗದವರು, ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ವಿವರಿಸಿ ಅವರ ಪರವಾಗಿ ಬೇಡಿಕೆಗಳನ್ನು ಮಂಡಿಸಿದರೂ ರಾಜ್ಯ ಸರ್ಕಾರ ಕ್ರಮ ಕೈಗೊಂಡಿಲ್ಲ. ಹೀಗಾಗಿ ಸರ್ಕಾರದ ವಿರುದ್ಧ ಹೋರಾಟಕ್ಕಿಳಿಯಲು ತೀರ್ಮಾನ ಮಾಡಿದ್ದೇವೆ ಎಂದರು.

ಚಪ್ಪಾಳೆ ತಟ್ಟುವುದರಿಂದ, ದೀಪ ಬೆಳಗಿಸುವುದರಿಂದ ಏನೂ ಆಗುವುದಿಲ್ಲ. ಅದರ ಬದಲಿಗೆ ಬಡವರು, ಕಾರ್ಮಿಕರನ್ನು ರಕ್ಷಣೆ ಮಾಡಲಿ. ಇಡೀ ಜಗತ್ತಿನಲ್ಲಿ ಮೋದಿಯವರು ಒಬ್ಬರೇ ಪರಿಸ್ಥಿತಿಯನ್ನು ಬಹಳ ಚೆನ್ನಾಗಿ ನಿಭಾಯಿಸಿದ್ದಾರೆ ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುವ ಬದಲು ಸೃಷ್ಟಿಯಾಗಿರುವ ಸಮಸ್ಯೆಗಳ ನಿವಾರಣೆಯತ್ತ ಗಮನ ಹರಿಸುವುದು ಒಳ್ಳೆಯದು ಎಂದು ಸಿದ್ದರಾಮಯ್ಯ ಅವರು ಹೇಳಿದರು.