ಬೆಂಗಳೂರು
‘ವರ್ಕ್ ಫ್ರಮ್ ಎನಿವೇರ್’ ಎಂಬ ಪರಿಕಲ್ಪನೆ ಜನಪ್ರಿಯವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ದೂರಸಂಪರ್ಕ ವ್ಯವಸ್ಥೆ ಸುಧಾರಣೆಗೆ ಸಂಬಂಧಿಸಿದ ಭಾಗೀದಾರರೊಂದಿಗೆ ಶೀಘ್ರ ಸಭೆ ಕರೆದು ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಿಳಿಸಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದರು. ಸರ್ಕಾರಿ ವಲಯ ಹಾಗೂ ಖಾಸಗಿ ವಲಯದ ದೂರಸಂಪರ್ಕ ಜಾಲ ಸುಧಾರಣೆಯಿಂದ ಸರ್ಕಾರಿ ಕಚೇರಿಗಳಲ್ಲಿ ಹಾಗೂ ಇತರೆಡೆಗಳಲ್ಲಿ ಕಾರ್ಯನಿರ್ವಹಣೆಯ ವೇಗ ಹೆಚ್ಚಲಿದೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿಯವರು ತಿಳಿಸಿದರು.
ಕೋವಿಡ್ 19 ರ ಸಂದರ್ಭದಲ್ಲಿ ಉಪಮುಖ್ಯಮಂತ್ರಿಗಳು ಹಾಗೂ ಇಲಾಖೆಯ ಅಧಿಕಾರಿಗಳು ನಿರಂತರವಾಗಿ ಉದ್ಯಮದವರ ಸಂಪರ್ಕದಲ್ಲಿದ್ದು ನೈತಿಕ ಬೆಂಬಲ ಸೂಚಿಸಿದ್ದಾರೆ. ಹಲವು ಸ್ಟಾರ್ಟಪ್ ಗಳು ಕೋವಿಡ್ ಲಾಕ್ ಡೌನ್ ಸಂದರ್ಭಗಳಲ್ಲಿ ಜನರಿಗೆ ನೆರವಾಗಲು ಹಾಗೂ ಕೋವಿಡ್ ನಿರ್ವಹಣೆಗೆ ಮಹತ್ತರ ಕೊಡುಗೆ ನೀಡಿರುವುದನ್ನು ಮುಖ್ಯಮಂತ್ರಿಗಳು ಶ್ಲಾಘಿಸಿದರು.
ಮುಂದಿನ ದಿನಗಳಲ್ಲಿ ವೈದ್ಯಕೀಯ ಉಪಕರಣ ಹಾಗೂ ತಂತ್ರಜ್ಞಾನ ವಲಯ ಸ್ಥಾಪಿಸುವ ವಿಷಯ ಸರ್ಕಾರದ ಪರಿಶೀಲನೆಯಲ್ಲಿದೆ. ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.. ವಿಜಯಭಾಸ್ಕರ್, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ. ಇ.ವಿ.. ರಮಣರೆಡ್ಡಿ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.