Thursday, 12th December 2024

ನಿಖಿಲ್ ಮದುವೆ: ಶುಭ ಹಾರೈಸಿದವರಿಗೆ ಎಚ್‌ಡಿಕೆ ಧನ್ಯವಾದ

ಬೆಂಗಳೂರು:
ಲಾಕ್‌ಡೌನ್‌ ನಡುವೆಯೇ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್‌ ಅವರ ವಿವಾಹ ಬಿಡದಿಯ ಕೇತಗಾನಹಳ್ಳಿಯ ಫಾರ್ಮ್ ಹೌಸ್‌ನಲ್ಲಿ ಶುಕ್ರವಾರ ನೆರವೇರಿದೆ. ಅಂತರ ಕಾಯ್ದುಕೊಳ್ಳದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದೆ. ಈ ಮಧ್ಯೆ ಎಚ್.ಡಿ. ಕುಮಾರಸ್ವಾಮಿ ಅವರು ಟ್ವೀಟ್ ಮಾಡಿ ಕೃತಜ್ಞತೆ ಸಲ್ಲಿಸಿದ್ದಾರೆ.
ನನ್ನ ಪುತ್ರ ನಿಖಿಲ್ ಮತ್ತು ರೇವತಿ ಅವರ ವಿವಾಹ ಇಂದು ಅತ್ಯಂತ ಸರಳ ರೀತಿಯಲ್ಲಿ ನಡೆಯಲು ಸಹಕರಿಸಿದ ಲಕ್ಷಾಂತರ ಕಾರ್ಯಕರ್ತರು ಮತ್ತು ಕುಟುಂಬದ ಹಿತೈಷಿಗಳಿಗೆ ಹೃದಯಾಂತರಾಳದ ಕೃತಜ್ಞತೆಗಳು ಎಂದಿದ್ದಾರೆ.
ಶಾಸಕರು, ಕಾರ್ಯಕರ್ತರು, ಮುಖಂಡರು, ಕುಟುಂಬದ ಹಿತೈಷಿಗಳು ಸೇರಿದಂತೆ ನಾಡಿನ ಲಕ್ಷಾಂತರ ಜನರು ನನ್ನ ಕುಟುಂಬದ ಕುಡಿಯ ವಿವಾಹಕ್ಕೆ ಮನೆಯಿಂದಲೇ ಹರಸಿದ್ದೀರಿ. ನಾನು ಮತ್ತು ನನ್ನ ಕುಟುಂಬ ವರ್ಗ ಮಾಡಿದ ಮನವಿಗೆ ನೀವುಗಳು ಸ್ಪಂದಿಸಿದ ರೀತಿ ಅನುಕರಣೀಯ ಮತ್ತು ಮಾದರಿಯಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಜಗತ್ತು ಸದ್ಯ ಎದುರಿಸುತ್ತಿರುವ ಈ ಗಂಡಾಂತರ ಕಳೆದು ಪರಿಸ್ಥಿತಿ ಸಹಜವಾದಾಗ ನಾವು ಮತ್ತು ನೀವುಗಳು ಜತೆ ಸೇರಿ ಒಟ್ಟಿಗೆ ಕುಳಿತು ಊಟ ಮಾಡೋಣ. ನಿಮ್ಮ ಹೃದಯ ವೈಶಾಲ್ಯ ಮತ್ತು ಪ್ರೀತಿಗೆ ನಾವುಗಳು ಸದಾ ಋಣಿ. ನವದಂಪತಿಗೆ ಹರಸಿದ ಪ್ರತಿಯೊಬ್ಬರಿಗೂ ಮತ್ತೊಮ್ಮೆ ಹೃದಯ ತುಂಬಿದ ಕೃತಜ್ಞತೆಗಳು ಎಂದು ಹೇಳಿದ್ದಾರೆ.