Saturday, 14th December 2024

ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷನಿಗೆ ಕಂಡಲ್ಲಿ ಕಲ್ಲು ಹೊಡೆಯುವಂತೆ ಫತ್ವಾ ಜಾರಿ

ಕೋಲ್ಕತಾ:

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಕೀಳು ಮಟ್ಟದ ಹೇಳಿಕೆ ನೀಡಿದ್ದಕ್ಕಾಗಿ ರಾಜ್ಯ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ವಿರುದ್ಧ ಟಿಪ್ಪು ಸುಲ್ತಾನ್ ಮಸೀದಿಯ ಇಮಾಮ್ ಮೌಲಾನಾ ನೂರ್-ಉಲ್ ರಹಮಾನ್ ಬರ್ಕಾತಿ ಫತ್ವಾ ಹೊರಡಿಸಿದ್ದಾರೆ.

ಬಿಜೆಪಿ ಅಧ್ಯಕ್ಷರನ್ನು ಸಾರ್ವಜನಿಕವಾಗಿ ಕಲ್ಲುಗಳಿಂದ ಹೊಡೆದು ಬಂಗಾಳದಿಂದ ಹೊರದಬ್ಬಲು ಈ ಫತ್ವಾದಲ್ಲಿ ತಿಳಿಸಲಾಗಿದೆ.  ನಮ್ಮ ದೇಶದ ಅತ್ಯಂತ ಜಾತ್ಯತೀತ ನಾಯಕಿಯಾಗಿರುವ ಮಮತಾ ಬ್ಯಾನರ್ಜಿ ವಿರುದ್ಧ ಅಪಮಾನಕರ ಹೇಳಿಕೆ ನೀಡಿರುವುದು ಅಕ್ಷಮ್ಯ ಅಪರಾಧ ಎಂದು ಬರ್ಕಾತಿ ಹೊರಡಿಸಿರುವ ಫತ್ವಾದಲ್ಲಿ ಹೇಳಲಾಗಿದೆ.

ಫತ್ವಾ ಕುರಿತು ಪ್ರತಿಕ್ರಿಯಿಸಿರುವ ಘೋಷ್, ಫತ್ವಾ ಹೊರಡಿಸಲು ಇದೇನು ಪಾಕಿಸ್ತಾನವೂ ಅಲ್ಲ, ಬಾಂಗ್ಲಾದೇಶವೂ ಅಲ್ಲ. ಬೇಕಾದರೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಿರುದ್ಧ ಫತ್ವಾ ಹೊರಡಿಲಿ. ಆ ಪಕ್ಷ ಅದನ್ನು ಒಪ್ಪಬಹುದು. ಬಹುಶಃ ಮೌಲಾನಾರಿಗೆ ಭಾರತದಲ್ಲಿ ಉಳಿಯಲು ಮನಸ್ಸಿಲ್ಲ. ಅವರು ಶೀಘ್ರ ಪಾಕ್ ಅಥವಾ ಬಾಂಗ್ಲಾಗೆ ವಲಸೆ ಹೋಗಲಿದ್ದಾರೆ ಎಂದು ತಿರುಗೇಟು ನೀಡಿದಾರೆ. ನೋಟು ರದ್ದತಿ ಕ್ರಮ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಮಮತಾ ಬ್ಯಾನರ್ಜಿ ಅವರನ್ನು ನಾವು ಮನಸ್ಸು ಮಾಡಿದ್ದರೆ ಆಕೆಯ ತಲೆಗೂದಲನ್ನು ಹಿಡಿದೆಳೆದು ದೆಹಲಿಯಿಂದ ಹೊರಗಟ್ಟಬಹುದಿತ್ತು ಎಂದು ಬಿಜೆಪಿ ಅಧ್ಯಕ್ಷ ಘೋಷ್ ಟೀಕಿಸಿದ್ದರು.