Thursday, 12th December 2024

ಪಾದರಾಯನಪುರದ ಘಟನೆ ಹೇಯ ಕೃತ್ಯ: ಡಿಸಿಎಂ ಅಶ್ವತ್ಥನಾರಾಯಣ

ಬೆಂಗಳೂರು:

ಕರೊನಾ ವಿರುದ್ಧ ಹೋರಾಡುತ್ತಿರುವ ಬಿಬಿಎಂಪಿ ಅಧಿಕಾರಿಗಳು, ಆಶಾಕಾರ್ಯಕರ್ತರು ಹಾಗೂ ಪೊಲೀಸರ ಮೇಲೆ ಪಾದರಾಯನಪುರದಲ್ಲಿ ನಡೆಸಿರುವ ಹಲ್ಲೆ ಅತ್ಯಂತ ಹೇಯ ಮತ್ತು ಖಂಡನೀಯ ಎಂದಿರುವ ಉಪಮುಖ್ಯಮಂತ್ರಿ ಡಾ. ಸಿ.ಎನ್‌ ಅಶ್ವತ್ಥನಾರಾಯಣ, ಇದು ಪೂರ್ವಯೋಜಿತ ಕೃತ್ಯ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಪಾದರಾಯನಪುರದಲ್ಲಿ ಪುಂಡಾಟ ನಡೆಸಿರುವ 54ಕ್ಕೂ ಹೆಚ್ಚು ಜನರನ್ನು ಈಗಾಗಲೇ ಬಂಧಿಸಲಾಗಿದೆ. ಈ ಗಲಾಟೆ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆ ಹಚ್ಚಲಾಗುವುದು. ತಪ್ಪಿತಸ್ಥರ ವಿರುದ್ಧ ಅತ್ಯಂತ ಕಠಿಣ ಕ್ರಮ ಕೈಗೊಳ್ಳಲಾಗುವುದು. ಕಾನೂನು ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ಸುಗ್ರೀವಾಜ್ಞೆ ಕರಡು ಸಿದ್ಧವಾಗಿದ್ದು, ತಪ್ಪಿತಸ್ಥರಿಗೆ 2 ವರ್ಷ ಶಿಕ್ಷೆ ದಂಡ ವಿಧಿಸುವ ಸಾಧ್ಯತೆ ಇದೆ,” ಎಂದು ಹೇಳಿದರು.

ಪೊಲೀಸರು, ವೈದ್ಯರು ಹಾಗೂ ಆಶಾ ಕಾರ್ಯಕರ್ತೆಯರು ತಮ್ಮ ಜೀವದ ಹಂಗು ತೊರೆದು ಕೊರೊನಾ ವಿರುದ್ಧ ಹೋರಾಟ ನಡೆಸುತ್ತಿದ್ದರೆ ಅಂಥವರ ಮೇಲೆ ದುಷ್ಕರ್ಮಿಗಳು ನಡೆಸಿರುವ ಹಲ್ಲೆಯನ್ನು ಕ್ಷಮಿಸಲು ಸಾಧ್ಯವೇ ಇಲ್ಲ. ಗುಂಡಾವರ್ತನೆ ತೋರಿದವರ ವಿಷಯದಲ್ಲಿ ಮೃದು ಧೋರಣೆಯ ಪ್ರಶ್ನೆಯೇ ಇಲ್ಲ, ಎಂದು ಸ್ಪಷ್ಟವಾಗಿ ಹೇಳಿರುವ ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ, “ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರು ಸ್ವತಂತ್ರರು. ಆರೋಗ್ಯ ಸಿಬ್ಬಂದಿ ಮತ್ತು ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸುವವರಿಂದ ಪ್ರಾಣ ರಕ್ಷಣೆ ಮಾಡಿಕೊಳ್ಳಲು ಲಭ್ಯವಿರುವ ಎಲ್ಲ ರೀತಿಯ ಬಲಪ್ರಯೋಗ ಮಾಡಲು ಪೊಲೀಸರಿಗೆ ಮುಕ್ತ ಅವಕಾಶ ಇದೆ ಎಂದು ಮುಖ್ಯಮಂತ್ರಿಯವರೇ ಹೇಳಿದ್ದಾರೆ. ಅದರಂತೆ ಮುಂದಿನ ದಿನಗಳಲ್ಲಿ ಪೊಲೀಸರು ಕಠಿಣ ಕ್ರಮ ಕೈಗೊಳ್ಳಲಿದ್ದಾರೆ” ಎಂದರು.