Sunday, 15th December 2024

ಪೊಲೀಸರಿಗೆ ನಿತ್ಯ ಉಚಿತ ಊಟದ ವ್ಯವಸ್ಥೆ

ಬೆಂಗಳೂರು:
ಬೆಂಗಳೂರು ಉತ್ತರ ಭಾಗದಲ್ಲಿ ಕರ್ತವ್ಯನಿರತ ಪೊಲೀಸ್‌ ಸಿಬ್ಬಂದಿಗಳು ಮತ್ತು ಕಷ್ಟದಲ್ಲಿ ಸಿಲುಕಿಕೊಂಡಿರುವ ಸುಮಾರು 250 ಕ್ಕೂ ಹೆಚ್ಚು ಮಂದಿಗೆ ಪ್ರತಿದಿನ ಬೆಳಗ್ಗಿನ ತಿಂಡಿ ಮತ್ತು ಊಟವನ್ನು ಒದಗಿಸಲು ಟ್ರಿಯೋ ವರ್ಲ್ಡ್‌ ಅಕಾಡೆಮಿಯ ಆಡಳಿತ ಮಂಡಳಿ ಮುಂದಾಗಿದೆ.
ಪ್ರಾಧಿಕಾರ ಕಳೆದ ಕೆಲವು ದಿನಗಳಿಂದ ಶಾಲೆಯ ಅಡುಗೆ ಮನೆಯಲ್ಲಿ ಅಡುಗೆ ತಯಾರಿಸುತ್ತಿದ್ದು, ಈ ವೇಳೆ ಸುರಕ್ಷತೆ ಮತ್ತು ನೈರ್ಮಲ್ಯದ ಮಟ್ಟವನ್ನು ಕಾಪಾಡಿಕೊಳ್ಳಲು ಕಠಿಣ ಗುಣಮಟ್ಟ ತಪಾಸಣೆ ನಡೆಸಲಾಗುತ್ತಿದೆ.
ಟ್ರಿಯೋದ ಆಡಳಿತ ಮಂಡಳಿ, ಈ ಸಾಂಕ್ರಾಮಿಕದ ಸಮಯದಲ್ಲಿ, ವೈರಾಣುವಿಗೆ ತುತ್ತಾಗುವ ಹೆಚ್ಚಿನ ಸಾಧ್ಯತೆಗಳಿದ್ದರೂ ಯಾವುದೇ ಭಯವಿಲ್ಲದೆ ನಮ್ಮ ರಕ್ಷಣೆಗಾಗಿ ದುಡಿಯುತ್ತಿರುವ ಪೊಲೀಸ್‌ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸುವ ಸಂಕೇತವಾಗಿ ಪ್ರತಿದಿನ ತಿಂಡಿ ಮತ್ತು ಊಟದ ಪ್ಯಾಕೆಟ್‌ಗಳನ್ನು ವಿತರಿಸುವ ಕೆಲಸವನ್ನು ಆರಂಭಿಸಿದೆ. ಜತೆಗೆ, ಪ್ರಸ್ತುತ ಸಾಂಕ್ರಾಮಿಕದಿಂದ ಅತೀ ಹೆಚ್ಚು ಬಾಧೆಗೆ ಒಳಗಾಗಿರುವ ಸಮುದಾಯಗಳಲ್ಲಿ ಒಂದಾಗಿರುವ ದಿನಗೂಲಿ ನೌಕರರಿಗೆ ಆರೋಗ್ಯಕರ ಆಹಾರ ಸಿದ್ಧಪಡಿಸಲಾಗುತ್ತಿದೆ.
ಇದರೊಂದಿಗೆ, ಯಾವುದೇ ಸವಲತ್ತಿಲ್ಲದ ಮತ್ತು ದಿನಗೂಲಿ ನೌಕರರ ಕುಟುಂಬಗಳು ಅಸಹಾಯಕರಾಗಿರುವುದನ್ನು ಮತ್ತು ದಿನದ ಕೂಳು ಸಂಪಾದಿಸುವುದು ಕಷ್ಟ ಎಂಬ ಸತ್ಯಾಂಶವನ್ನು ಅರ್ಥಮಾಡಿಕೊಂಡು ಅವರಿಗೆ ಆಹಾರ ವಿತರಿಸಲಾಗುತ್ತಿದೆ. ಈ ಅಗತ್ಯಕಾಲದಲ್ಲಿ ಅವರಿಗೆ ಸಹಾಯಮಾಡಲು, ಶಾಲೆಯ ಆಡಳಿತ ಮಂಡಳಿ ಕಳೆದ ಒಂದು ವಾರದಿಂದ ಪ್ರತಿದಿನ ಅವರಿಗೆ ಆಹಾರ ಒದಗಿಸುತ್ತಿದೆ ಮತ್ತು ಮುಂದಿನ 10 ದಿನಗಳ ಕಾಲ ಇದನ್ನು ಮುಂದುವರಿಸಲಿದೆ  ಎಂದು ಟ್ರಿಯೋ ವರ್ಲ್ಡ್‌ ಅಕಾಡೆಮಿಯ ನಿರ್ವಾಹಕ ನಿರ್ದೇಶಕ ನವೀನ್‌ ಮಾಹಿತಿ ನೀಡಿದ್ದಾರೆ.