ವಿಶ್ವವಾಣಿ ಸುದ್ದಿಮನೆ
ಬೆಂಗಳೂರು:
ಪಾದರಾಯನಪುರ ಗಲಭೆ ಪ್ರಕರಣ ಆರೋಪಿಗಳನ್ನು ಬಂಧಿಸಿದ್ದ ಪೊಲೀಸರಿಗೆ ಕರೋನಾ ಭೀತಿ ಎದುರಾಗಿದ್ದು, ಆರೋಪಿಗಳ ಪತ್ತೆ ಕಾರ್ಯದಲ್ಲಿ ತೊಡಗಿದ್ದ 186 ಪೊಲೀಸ್ ಸಿಬ್ಬಂದಿಯನ್ನು ಹೋಂ ಕ್ವಾರಂಟೈನ್ಗೆ ಒಳಪಡಿಸಲಾಗಿದೆ.
ಪಾದರಾಯನಪುರ ಪುಂಡರನ್ನು ಬಂಧಿಸಿದ್ದ ಪೊಲೀಸ್ ಸಿಬ್ಬಂದಿ ಮೈಸೂರು ರಸ್ತೆಯ ಸಿಎಆರ್ ಮೈದಾನದಲ್ಲಿ ಪಶ್ಚಿಮ, ಕೇಂದ್ರ, ಉತ್ತರ ವಿಭಾಗ ಹಾಗೂ ಸಿಸಿಬಿ ಸಿಬ್ಬಂದಿ ಸೇರಿ ಒಟ್ಟು 186 ಮಂದಿ ಪೊಲೀಸರನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಗಿತ್ತು.
150ಕ್ಕೂ ಹೆಚ್ಚು ಸಿಬ್ಬಂದಿಯ ಗಂಟಲು ದ್ರವ ಮಾದರಿ ಸಂಗ್ರಹಿಸಲಾಗಿದ್ದು, ಎಲ್ಲ 186 ಪೊಲೀಸರನ್ನು ಹೋಂ ಕ್ವಾರಂಟೈನ್ಗೆ ವರ್ಗಾವಣೆ ಮಾಡಲಾಗಿದೆ. ಅವಶ್ಯಕತೆ ಇದ್ದಲ್ಲಿ ಕೆಲ ಪೊಲೀಸ್ ಸಿಬ್ಬಂದಿಯ ಕುಟುಂಬಸ್ಥರಿಗೂ ಕೋವಿಡ್-19 ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ.
ಇನ್ನು ಸರಕಾರ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳ ವಿರುದ್ಧ ಪೊಲೀಸ್ ಸಿಬ್ಬಂದಿ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಪಾದರಾಯನಪುರ ಕಿಡಿಗೇಡಿಗಳ ಪತ್ತೆ ಕಾರ್ಯದ ವೇಳೆ ನಿಯೋಜನೆಗೊಂಡಿದ್ದ ಸಿಬ್ಬಂದಿಗೆ ಕೋವಿಡ್-19 ವೈದ್ಯರಿಂದ ಯಾವುದೇ ಅರಿವು ಮೂಡಿಸಿಲ್ಲ. ಬರೀ ಸ್ಯಾನಿಟೈಸರ್, ಮಾಸ್ಕ್, ಗ್ಲೌಸ್ ಕೊಟ್ಟು ತಮ್ಮನ್ನು ಫೀಲ್ಡ್ಗೆ ಇಳಿಸಿದ್ದರು ಎಂದು ತಮ್ಮ ಆಪ್ತರ ಬಳಿ ಬೇಸರ ತೋಡಿಕೊಂಡಿದ್ದಾರೆ.
ಅಲ್ಲದೇ, 83 ಆರೋಪಿಗಳನ್ನು ಚಾಮರಾಜಪೇಟೆಯ ಸಿಸಿಬಿ ಕಚೇರಿಯಲ್ಲಿ 2 ಗಂಟೆಗಳ ಕಾಲ ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದರು. ಬಳಿಕ ಆಡುಗೋಡಿಯ ಮಂಗಳ ಕಲ್ಯಾಣ ಮಂಟಪದಲ್ಲಿ ಆರೋಪಿಗಳನ್ನು ಇರಿಸಲಾಗಿತ್ತು. ಹೀಗಾಗಿ ಹಗಲು-ರಾತ್ರಿ ದುಡಿದ ನಮ್ಮ ಹಾಗೂ ನಮ್ಮ ಕುಟುಂಬಸ್ಥರು ಪರಿಸ್ಥಿತಿ ಏನು ಎಂದು ಪೊಲೀಸ್ ಸಿಬ್ಬಂದಿ ಅಸಮಾಧಾನ ಹೊರ ಹಾಕಿದ್ದಾರೆ.