ಬೆಂಗಳೂರು:
ನಾಗರೀಕರಿಗೆ ಅಗತ್ಯ ಸೇವೆ ಕಲ್ಪಿಸುವ ನಿಟ್ಟಿನಲ್ಲಿ ಈ ಸೇವೆಯನ್ನು ಜಾರಿಗೊಳಿಸಲಾಗಿದ್ದು, ಅದಕ್ಕಾಗಿ ಪಾಲಿಕೆ 42 ವೈದ್ಯರು ನಾಗರೀಕರಿಗೆ ಅಗತ್ಯ ಮಾಹಿತಿ ನೀಡಿಲಿದ್ದಾರೆ. ಹೆಲ್ತ್ ಲೈನ್ ಸಂಖ್ಯೆ 07447118949ಗೆ ಕರೆ ಮಾಡಿ, ಆರೋಗ್ಯ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ. ಇಂದಿನಿAದಲೇ ಈ ಸೇವೆ ಆರಂಭವಾಗಲಿದ್ದು, ನಾಲ್ಕು ಪಾಳಿಯಲ್ಲಿ ವೈದ್ಯರು ಕಾರ್ಯನಿರ್ವಹಿಸಲಿದ್ದಾರೆ. ಬೆಳಗ್ಗೆ 8 ರಿಂದ 11, ಬೆಳಗ್ಗೆ 11 ರಿಂದ ಮಧ್ಯಾಹ್ನ 2, ಮಧ್ಯಾಹ್ನ 2 ರಿಂದ ಸಂಜೆ 5, ಸಂಜೆ 5 ರಿಂದ ರಾತ್ರಿ 8 ಗಂಟೆಯವರೆಗೆ ವೈದ್ಯರು ಕಾರ್ಯನಿರ್ವಹಿಸಲಿದ್ದಾರೆ. ಬೆಳಗ್ಗೆ 8 ರಿಂದ ರಾತ್ರಿ 8 ಗಂಟೆಯವರೆಗೆ ಈ ಸೇವೆ ಲಭ್ಯವಿರಲಿದೆ.
ಮೇಯರ್ ಗೌತಮ್ ಕುಮಾರ್ ಮಾತನಾಡಿ, ಹೆಲ್ತ್ ಲೈನ್‌ಗೆ ಕರೆಮಾಡಿದ ತಕ್ಷಣ ಕಾಲ್ ಸೆಂಟರ್‌ಗೆ ಮಾಹತಿ ತಲುಪಿ, ಬಂದಂತಹ ಕರೆಗಳನ್ನು ವೈದ್ಯರಿಗೆ ವರ್ಗಾಯಿಸಲಾಗುತ್ತದೆ. ಕರೆ ಮಾಡಿದ ಪ್ರತಿಯೊಬ್ಬರಿಗೂ ಪ್ರತ್ಯೇಕ ಗುರುತಿನ ಸಂಖ್ಯೆ ನೀಡಲಾಗುತ್ತದೆ. ಹೆಚ್ಚಿನ ಅವಶ್ಯಕತೆ ಇದ್ದಲ್ಲಿ ವೈದ್ಯರು ರೋಗಿಗಳ ಜೊತೆ ಸಮಾಲೋಚನೆ ನಡೆಸಲು ವೀಡಿಯೋ ಕಾನ್ಫರೆನ್ಸ್ ವ್ಯವಸ್ಥೆ ಕೂಡ ಮಾಡಲಾಗಿದೆ. ಕೊರೋನಾ ವೈರಸ್ ಸೋಂಕು ಸಂಕಷ್ಟದ ಸಮಯದಲ್ಲಿ ಜನರು ವೈದ್ಯರ ಬಳಿ ಹೋಗಲು ಹಿಂಜರಿಯುತ್ತಿದ್ದಾರೆ. ಇದರ ಪ್ರಯೋಗವನ್ನು ಈಗಾಗಲೇ ಮಾಡಲಾಗಿದೆ. ಸಾರ್ವಜನಿಕರು ಈ ಹೆಲ್ಪ್ ಲೈನ್ ಬಳಸಿಕೊಳ್ಳಬಹುದು. ಮುಂಬರುವ ದಿನಗಳಲ್ಲಿ ಖಾಸಗಿ ವೈದ್ಯರು ಕೂಡಾ ಇದರ ಜೊತೆ ಕೈಜೋಡಿಸಬಹುದು. ಮುಂಬರುವ ದಿನದಲ್ಲಿ ಇದನ್ನು ಇನ್ನಷ್ಟು ಅಭಿವೃದ್ಧಿ ಪಡಿಸಲಾಗುವುದು ಎಂದರು.
ತದನಂತರ ಆಯುಕ್ತರು ಮಾತನಾಡಿ, ಕೊರೋನಾ ವೈರೆಸ್ ಸೋಂಕು ಆರಂಭವಾದ ಬಳಿಕ ಸಾಕಷ್ಟು ಖಾಸಗಿ ಆಸ್ಪತ್ರೆಗಳು ಸೇವೆ ನೀಡುವುದನ್ನು ನಿಲ್ಲಿಸಿಬಿಟ್ಟಿವೆ. ಈ ಪೈಕಿ ಎಲ್ಲಾ ಖಾಸಗಿ ನರ್ಸಿಂಗ್ ಹೋಂಗಳಿಗೆ ಕೊರೋನಾ ಹೊರತುಪಡಿಸಿ, ಡಯಾಬಿಟಿಸ್, ಹೃದಯ, ಕಿಡ್ನಿ ಸಂಬಂಧಿತ ಖಾಯಿಲೆಗಳಿಗೆ ಚಿಕಿತ್ಸೆ ನೀಡುವಂತೆ ಸೂಚಿಸಲಾಗಿತ್ತು. ಆದರೂ ಅನೇಕ ಕಡೆ ಸಾರ್ವಜನಿಕರು ಫೀವರ್ ಕ್ಲಿನಿಕ್‌ಗಳಿಗೆ ತೆರಳಲು ಕೂಡಾ ಹಿಂಜರಿಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ “ಬಿಬಿಎಂಪಿ ಟೆಲಿ ಹೆಲ್ತ್ ಲೈನ್” ಮೂಲಕ ವೈದ್ಯರನ್ನು ನೇರವಾಗಿ ಸಂಪರ್ಕಿಸಿ, ರೋಗದ ಲಕ್ಷಣಗಳನ್ನು ತಿಳಿಸಿ ಅದಕ್ಕೆ ಸೂಕ್ತ ಔಷಧ ಪಡೆಯಬಹುದು. ಇ-ಮೇಲ್ ಅಥವಾ ವಾಟ್ಸಾಪ್ ಮೂಲಕ ವೈದ್ಯರು ಔಷಧದ ವಿವರಗಳನ್ನು ನೀಡಲಾಗುತ್ತದೆ ಎಂದು ಹೇಳಿದರು.
ಕೋವಿಡ್-19 ಹಿನ್ನೆಲೆ ಬಿಬಿಎಂಪಿ ವ್ಯಾಪ್ತಿಯ ನಾಗರೀಕರು ವೈದ್ಯರೊಂದಿಗೆ ನಿಖರ ಮಾಹಿತಿ ಮತ್ತು ಸಲಹೆ ಪಡೆಯುವ ಉದ್ದೇಶದಿಂದ ಪಾಲಿಕೆಯು ಬ್ಲೂಮ್ ಬರ್ಗ್ ಫಿಲಾಂಥ್ರಪಿಸ್ ಹಾಗೂ ವೈಟಲ್ ಸ್ಟ್ರಾಟಜೀಸ್ ಸಹಯೋಗದಲ್ಲಿ “ಬಿಬಿಎಂಪಿ ಟೆಲಿ ಹೆಲ್ತ್ ಲೈನ್” ಸೇವೆಗೆ ಪೂಜ್ಯ ಮಹಾಪೌರರು ಹಾಗೂ ಮಾನ್ಯ ಆಯುಕ್ತರು ರವರು ಅಧಿಕೃತ ಚಾಲನೆ ನೀಡಿದರು. ಈ ವೇಳೆ ಉಪಮಹಾಪೌರರು ಶ್ರೀ ರಾಮಮೋಹನ ರಾಜು, ಆಡಳಿತ ಪಕ್ಷದ ನಾಯಕರು ಶ್ರೀ ಮುನೀಂದ್ರ ಕುಮಾರ್, ವಿರೋಧ ಪಕ್ಷದ ನಾಯಕರು ಶ್ರೀ ಅಬ್ದುಲ್ ವಾಜೀದ್, ಜೆ.ಡಿ.ಎಸ್ ಪಕ್ಷದ ನಾಯಕರು ಶ್ರೀಮತಿ ನೇತ್ರಾನಾರಾಯಣ್, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರು ಶ್ರೀ ಮಂಜುನಾಥ್ ರಾಜು.ಜಿ, ಆಯುಕ್ತರು ಶ್ರೀ ಬಿ.ಹೆಚ್.ಅನಿಲ್ ಕುಮಾರ್, ವಿಶೇಷ ಆಯುಕ್ತರು ಡಾ. ರವಿಕುಮಾರ್ ಸುರಪುರ, ಮುಖ್ಯ ಆರೋಗ್ಯಾಧಿಕಾರಿ ಡಾ. ವಿಜೇಂದ್ರ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.