Wednesday, 11th December 2024

ಬಿಸಿಲು ನಾಡು ಬಳ್ಳಾರಿಗೆ ಕಾಲಿಟ್ಟ ಕರೋನಾ

ವಿಶ್ವ ವಾಣಿ ಸುದ್ದಿಮನೆ.

ಬಳ್ಳಾರಿ:

ಜಿಲ್ಲೆಯ ಹೊಸಪೇಟೆ ನಗರದಲ್ಲಿ 3ನಿವಾಸಿಗಳಿಗೆ ಕರೊನಾ ಸೊಂಕು ಪಾಸಿಟಿವ್ ಇರುವುದು ದೃಢಪಟ್ಟಿದೆ. ಸೋಮವಾರ ಸಂಜೆ 7:30ಕ್ಕೆ ವರದಿ ಬಂದಿದ್ದು, ಮೂರು ಜನರಿಗೆ ಸೊಂಕು ಇರುವುದು ಖಚಿತವಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಸ್ಪಷ್ಟಪಡಿಸಿದ್ದಾರೆ.
ಈ‌ ಕುರಿತು ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಮೂರು ಜನರಿಗೆ ಸೊಂಕಿನ‌ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಅವರನ್ನು ಬಳ್ಳಾರಿ ‌ಜಿಲ್ಲಾಸ್ಪತ್ರೆಗೆ ರವಾನಿಸಿ ಗಂಟಲು ದ್ರವ್ಯವನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು. ಈಗ ವರದಿ ಪಾಸಿಟಿವ್ ಅಂತ ಬಂದಿದ್ದು, ಅವರಿಗೆ ಮುಂದಿನ ಚಿಕಿತ್ಸೆಯನ್ನು ಜಿಲ್ಲಾಸ್ಪತ್ರೆಯಲ್ಲಿ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಹೊಸಪೇಟೆ ಕಂಟೋನ್ಮೆಂಟ್ ಝೋನ್: ಯಾವುದೇ ಸ್ಥಳದಲ್ಲಿ ಪಾಸಿಟಿವ್ ಕೇಸ್ ಬಂದಾಗ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯದ ಗೈಡ್ ಲೈನ್ಸ್ ಅನುಸಾರ ಮಾಡಬೇಕಾಗುತ್ತದೆ. ಹೊಸಪೇಟೆ ನಗರಸಭೆ ವ್ಯಾಪ್ತಿಯನ್ನು ಕಂಟೋನ್ಮೆಂಟ್ ಝೋನ್ ಆಗಿ ಕೈಗೆತ್ತಿಕೊಳ್ಳಲಾಗುವುದು. ಇಂದಿನಿಂದ ಯಾವುದೇ ರೀತಿಯ ವಾಹನ ಸಂಚಾರ ಆಗಲಿ ಅಥವಾ ಜನರ ಓಡಾಟವಾಗಲಿ ಅಥವಾ ಹೊರಗಡೆಯಿಂದ ಒಳಗಡೆ ಬರುವುದಕ್ಕೆ ಅವಕಾಶವಿರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಮಾ.31ರಿಂದ ಬೆಳಗ್ಗೆ 9ರಿಂದ 10ರವರೆಗೆ ಮಾತ್ರ ಜನರಿಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಮಾಡಿಕೊಡಲಾಗಿದ್ದು, ಎಲ್ಲ ರಸ್ತೆಗಳಲ್ಲಿ ಪಹಬಂಧಿ ಹಾಕಲಾಗಿರುವುದರಿಂದ ಮನೆಗೊಬ್ಬರು ಮಾತ್ರ ಹೊರಬಂದು ತಮ್ಮ ಏರಿಯಾದಲ್ಲಿನ ಅಂಗಡಿಗಳಲ್ಲಿಯೇ ಖರೀದಿ ಮಾಡಬೇಕು ಎಂದು ಅವರು ತಿಳಿಸಿದ್ದಾರೆ.
ಮನೆ-ಮನೆ ಸಮೀಕ್ಷೆ ನಾಳೆಯಿಂದ:
ನಾಳೆಯಿಂದಲೇ(ಮಾ.31) ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಯಾರಿಗಾದರೂ ಕೆಮ್ಮು,ನಗಡಿ, ಜ್ವರ ಇತ್ಯಾದಿ ಲಕ್ಷಣಗಳಿದ್ದಲ್ಲಿ ಸಮೀಕ್ಷೆ ಮಾಡಲಾಗುತ್ತಿದ್ದು, ಜನರು ಇಂತಹ ಸಂದರ್ಭದಲ್ಲಿ ಸಹಕರಿಸಬೇಕು ಎಂದು ಡಿಸಿ ನಕುಲ್ ಮನವಿ ಮಾಡಿದ್ದಾರೆ.
ಯಾರಿಗಾದರೂ ಕೆಮ್ಮು,ನೆಗಡಿ,ಜ್ವರದ ಲಕ್ಷಣಗಳು ಇದ್ದಲ್ಲಿ ಅವರಿಗಾಗಿಯೇ ಕ್ಲಿನಿಕ್ ಆರಂಭಿಸಲಾಗಿದ್ದು, ಆಕಾಶವಾಣಿ ಹತ್ತಿರ, ಟಿಬಿ ಡ್ಯಾಂ ಹೆಲ್ತ್ ಸೆಂಟರ್, ಹೊಸ ಎಂಸಿಎಚ್ ಆಸ್ಪತ್ರೆಯಲ್ಲಿ ವಿಶೇಷ ತಪಾಸಣೆ ನಡೆಯುತ್ತಿದ್ದು, ಲಕ್ಷಣಗಳು ಇದ್ದವರು ಬಂದು ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಅವರು ಕೋರಿಕೊಂಡಿದ್ದಾರೆ.
ಇಂತಹ ತುರ್ತು ಸಂದರ್ಭದಲ್ಲಿ ಹೊಸಪೇಟೆಯ ನಗರದ ಜನರು ಸಹಕರಿಸಬೇಕು ಎಂದು ಅವರು ತಿಳಿಸಿದ್ದಾರೆ.