ಚಿತ್ರದುರ್ಗ:
ರಾಷ್ಟ್ರಾದ್ಯಂತ ಕೊರೋನ ವೈರಸ್ ಭೀತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತೆ ಕ್ರಮವಾಗಿ ರೋಗಿಗಳಿಗೆ ಚಿಕಿತ್ಸೆ ನೀಡಲು ಹೊಳಲ್ಕೆರೆ ತಾಲ್ಲೂಕು ಬಿ. ದುರ್ಗದಲ್ಲಿ 30 ಹಾಸಿಗೆಯುಳ್ಳ ಸುಸಜ್ಜಿತ ಕಟ್ಟಡ, ಪ್ರತ್ಯೇಕ ಶೌಚಾಲಯ ವ್ಯವಸ್ಥೆ, ಕುಡಿಯುವ ನೀರು, ಅಗತ್ಯ ಔಷಧೋಪಚಾರದ ಸೌಲಭ್ಯ ಹೊಂದಿರುವ ಸಮುದಾಯ ಆರೋಗ್ಯ ಕೇಂದ್ರ ಸಜ್ಜುಗೊಳಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಫಾಲಾಕ್ಷ ಹೇಳಿದರು.
ಹೊಳಲ್ಕೆರೆ ತಾಲ್ಲೂಕಿನ ಬಿ.ದುರ್ಗ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮಂಗಳವಾರ ಭೇಟಿ ನೀಡಿ, ಮಹಿಳೆಯರ ಮತ್ತು ಪುರುಷರ ಪ್ರತ್ಯೇಕ ವಾರ್ಡ್ಗಳ ಸ್ಥಳ ಪರಿಶೀಲನೆ ಮಾಡಿ ಅವರು ಮಾತನಾಡಿದರು.
ಹೊಳಲ್ಕೆರೆ ತಾಲ್ಲೂಕಿನಲ್ಲಿ ಮೊರಾರ್ಜಿ ದೇಸಾಯಿ ಬಾಲಕಿಯರ ವಸತಿ ಶಾಲೆ ಕಣಿವೆ ಇಲ್ಲಿ ಎರಡು ಕಡೆ 21 ಹಾಸಿಗೆ ಮತ್ತು ಎಸ್ಟಿ ಹಾಸ್ಟೆಲ್ ಚನ್ನಗಿರಿ ರಸ್ತೆಯಲ್ಲಿ ಹತ್ತು ಹಾಸಿಗೆಯುಳ್ಳ ಕೋವಿಡ್ ಕೇರ್ ಸೆಂಟರ್ ಗಳನ್ನು ತೆರೆದಿದ್ದು ತಾಲೂಕಿನ ಸಾರ್ವಜನಿಕ ಆಸ್ಪತ್ರೆ ಕಟ್ಟಡ ನಿರ್ಮಾಣ ಹಂತದಲ್ಲಿರುವ ಕಾರಣ, ಸಮೀಪದ ಬಿ.ದುರ್ಗ ಸಮುದಾಯ ಆರೋಗ್ಯ ಕೇಂದ್ರದಲ್ಲಿ 30 ಹಾಸಿಗೆಯುಳ್ಳ ಕೋವಿಡ್ 19 ಆಸ್ಪತ್ರೆಯನ್ನು ತೆರೆಯಲಾಗಿದೆ. ಶಿವಮೊಗ್ಗ ರಸ್ತೆಯಲ್ಲಿನ ಬಾಲಕರ ಮೆಟ್ರಿಕ್ ಪೂರ್ವ ಹಾಸ್ಟೆಲ್ನಲ್ಲಿ ಫೆಸಿಲಿಟಿ ಕ್ವಾರೆಂಟೈನ್ ವ್ಯವಸ್ಥೆ ಮಾಡಲಾಗಿದೆ ಎಂದು ಡಾ. ಪಾಲಾಕ್ಷ ಹೇಳಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಜಯಸಿಂಹ, ತಹಸಿಲ್ದಾರ್ ನಾಗರಾಜ್ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ ಮೂಗಪ್ಪ ಮತ್ತು ಜಾನಕಿ ಜಿಲ್ಲಾ ಹಿರಿಯ ಆರೋಗ್ಯ ನಿರೀಕ್ಷಕರು ಹನುಮಂತಪ್ಪ ಮತ್ತು ಸಮುದಾಯ ಆರೋಗ್ಯ ಕೇಂದ್ರದ ವೈದ್ಯ ಡಾ. ಶಶಿಕಿರಣ್ ದಿವ್ಯ ಶ್ವೇತಾ ಚೈತ್ರ ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು.