ವಿಶ್ವವಾಣಿ ಸುದ್ದಿಮನೆ ಬೆಂಗಳೂರು
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಬಸ್ ಸಂಚಾರ ಮರು ಆರಂಭಿಸಲು ಸಿದ್ಧತೆ ನಡೆಸಿದ್ದು, ಸೋಮವಾರ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿ ಕರ್ತವ್ಯಕ್ಕೆೆ ಹಾಜರಾಗುವಂತೆ ಸೂಚಿಸಿದೆ.
ಕರೋನಾ ವೈರಸ್ ಹರಡುವಿಕೆ ತಡೆಗಟ್ಟಲು ಜಾರಿಗೊಳಿಸಿರುವ ಲಾಕ್ಡೌನ್ ಹಂತ 3 ಅವಧಿ ಭಾನುವಾರಕ್ಕೆ ಮುಕ್ತಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮೇ 18ರಿಂದ ಬಸ್ ಸಂಚಾರ ಆರಂಭಿಸಲು ಬೇಕಾದ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಲಾಕ್ಡೌನ್ ಸಡಿಲಿಕೆಯಾಗಿ ನಗರ ಬಸ್ ಸಂಚಾರಕ್ಕೆ ಅವಕಾಶ ನೀಡಿದರೆ, ಬಸ್ ಸಂಚಾರ ಎಂದಿನಂತೆ ಆರಂಭಿಸಲು ಉದ್ದೇಶಿಸಲಾಗಿದೆ. ಈಗಾಗಲೇ ಅಗತ್ಯ ಸೇವೆಯ ಸಿಬ್ಬಂದಿಗೆ ಬಸ್ ಸೇವೆ ಒದಗಿಸಲಾಗಿದೆ.
ಶುಕ್ರವಾರದಿಂದ ಭಾನುವಾರದವರೆಗೆ ಸಿಬ್ಬಂದಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ಅವಕಾಶ ನೀಡಿದೆ. ಕರ್ತವ್ಯಕ್ಕೆ ಹಾಜರಾಗುವ ಮುನ್ನ ಆರೋಗ್ಯ ತಪಾಸಣೆ ಅವಶ್ಯಕವಾಗಿ ಮಾಡಿಸಿಕೊಳ್ಳುವಂತೆ ಈಗಾಗಲೇ ಸೂಚನೆ ನೀಡಲಾಗಿದ್ದು, ಸಿಬ್ಬಂದಿಯೂ ಆರೋಗ್ಯ ತಪಾಸಣೆಗೆ ಮುಗಿಬಿದ್ದಿದ್ದಾರೆ.
ಕರೋನಾ ವೈರಸ್ ಸಾಂಕ್ರಾಮಿಕವಾಗಿ ಹರಡುವುದನ್ನು ತಡೆಯಲು ಸಂಸ್ಥೆಯ ಎಲ್ಲ ಘಟಕ, ಕಾರ್ಯಗಾರ ಮತ್ತು ಕಚೇರಿಗಳಲ್ಲಿ ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಬಿಎಂಟಿಸಿ ಸ್ಪಷ್ಟ ಸೂಚನೆ ನೀಡಿದೆ. ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿಗೆ ಘಟಕ, ಕಾರ್ಯಗಾರ, ಕಚೇರಿಗಳ ಮುಖ್ಯದ್ವಾರಗಳಲ್ಲಿ ಥರ್ಮಲ್ ಸ್ಕ್ಯಾನರ್ ವ್ಯವಸ್ಥೆ ಮಾಡಿ ಎಲ್ಲರನ್ನು ಸ್ಕ್ಯಾನಿಂಗಿಗೆ ಒಳಪಡಿಸಬೇಕು. ಜ್ವರವಿದ್ದರೆ ಹತ್ತಿರದ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಲಾಗಿದೆ.
ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಸ್ಯಾನಿಟೈಸರ್ ಬಳಸಬೇಕು. ಹಾಜರಾತಿಗೆ ಬಯೋ ಮೆಟ್ರಿಕ್ ಪದ್ಧತಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದು, ಕಾರ್ಯಸ್ಥಳದಲ್ಲಿ ಸದಾ ಕಾಲ ಐದು ಅಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು. ಕರೋನಾ ಬಗ್ಗೆ ಸುರಕ್ಷಾ ಭಿತ್ತಿ ಪತ್ರಗಳ ಪ್ರದರ್ಶನ ಮಾಡಬೇಕು. ಸಾರ್ವಜನಿಕ ಶೌಚಾಲಯ ಶುಚಿಯಾಗಿಡಬೇಕು. ಸಿಬ್ಬಂದಿಗೆ ಬಿಸಿ ನೀರು ಒದಗಿಸಬೇಕು. ಮನೆಯಿಂದ ಕುಡಿಯುವ ನೀರು ಹಾಗೂ ಊಟ ತರಬೇಕು.
ಸಿಬ್ಬಂದಿಗೆ ಕೆಮ್ಮು, ನೆಗಡಿ, ಜ್ವರ ಕಂಡುಬಂದರೆ ಆರೋಗ್ಯ ತಪಾಸಣೆ ನಡೆಸಬೇಕು. ಬಸ್ ನಿಲ್ದಾಣ, ಕಾರ್ಯಗಾರಗಳಲ್ಲಿ ನೌಕರರು ಗುಂಪುಗೂಡುವುದು, ಆಂತರಿಕ ಸಭೆ ಸಮಾರಂಭ, ತರಬೇತಿ ಕಾರ್ಯಕ್ರಮ ಮಾಡಬಾರದು ಎಂದು ಸೂಚನೆ ನೀಡಲಾಗಿದೆ. ಬಸ್ಸಿನಲ್ಲಿ ನಿರ್ವಾಹಕರು ಪ್ರಯಾಣಿಕರಿಗೆ ಟಿಕೇಟ್ ನೀಡುವಾಗ ಹಾಗೂ ಹಣ ಪಡೆಯುವಾಗ ಎಂಜಲನ್ನು ಉಪಯೋಗಿಸದಂತೆ ಮುನ್ನೆಚ್ಚರಿಕೆ ವಹಿಸುವುದು ಸೇರಿದಂತೆ ಹಲವು ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ನಿರ್ದೇಶನ ನೀಡಲಾಗಿದೆ.