Wednesday, 11th December 2024

ಬೆಂಗಳೂರಿನಲ್ಲಿ 10 ಸಾವಿರ ಹಾಸಿಗೆ ಸೌಲಭ್ಯಕ್ಕೆ ಕ್ರಮ: ಸುಧಾಕರ್

ವಿಶ್ವವಾಣಿ‌ ಸುದ್ದಿಮನೆ
ಬೆಂಗಳೂರು: ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಸಂಜೆಯೊಳಗಾಗಿ ಕರೋನಾ ಸೋಂಕಿತರ ಚಿಕಿತ್ಸೆಗಾಗಿ ಕನಿಷ್ಠ ಹತ್ತು ಸಾವಿರ ಹಾಸಿಗೆಗಳ ವ್ಯವಸ್ಥೆ ಮಾಡುವ ಕಾರ್ಯ ಪ್ರಗತಿಯಲ್ಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ಹೇಳಿದ್ದಾರೆ.
ಬೆಂಗಳೂರು ನಗರದಾದ್ಯಂತ ಚಿಕಿತ್ಸೆಗೆ ಅಗತ್ಯವಿರುವ ಸಕಾ೯ರಿ ಮತ್ತು ಖಾಸಗಿ ಪ್ರದೇಶಗಳನ್ನು ಗುರುತಿಸುವ ಕಾರ್ಯ ಪ್ರಗತಿಯಲ್ಲಿದ್ದು, ಸೋಮವಾರ ಸಂಜೆ ವೇಳೆಗೆ ಖಚಿತ ಮಾಹಿತಿ ಲಭ್ಯವಾಗಲಿದೆ. ಅಧಿಕಾರಿಗಳು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ನಿಖರ ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎಂದು ನಾನಾ ಇಲಾಖೆಗಳ ಹಿರಿಯ ಅಧಿಕಾರಿಗಳ ಜತೆ ಶನಿವಾರ ವಿಡಿಯೊ ಸಂವಾದ ನಡೆಸಿದ ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡಿದರು.
ಸರಕಾರಿ ಮತ್ತು ಖಾಸಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳು, ಖಾಸಗಿ ಆಸ್ಪತ್ರೆಗಳಲ್ಲದೆ, ಬಿಡಿಎ, ವಸತಿ ಇಲಾಖೆ ಮತ್ತು ಖಾಸಗಿ ನಿಮಾ೯ಣ ಸಂಸ್ಥೆಗಳು ನಿಮಿ೯ಸಿರುವ ವಸತಿ ಸಮುಚ್ಚಯಗಳು, ಸರಕಾರಿ ಮತ್ತು ಖಾಸಗಿ ಕ್ರೀಡಾ ಸಂಕೀರ್ಣಗಳು, ಕ್ರೀಡಾಂಗಣಗಳು, ಹಾಸ್ಟೆಲ್‌ಗಳು ಮತ್ತು ಬೃಹತ್‌ ವಾಣಿಜ್ಯ ಸಮುಚ್ಛಯಗಳನ್ನು ಕೋವಿಡ್‌ ಚಿಕಿತ್ಸೆ ಉದ್ದೇಶಕ್ಕೆ ಬಳಸಿಕೊಳ್ಳಲು ನಿಧ೯ರಿಸಲಾಗಿದೆ. ಇವುಗಳನ್ನು ಸೌಲಭ್ಯಗಳ ಆಧಾರದ ಮೇಲೆ ಕೋವಿಡ್‌ ಚಿಕಿತ್ಸಾ ಆಸ್ಪತ್ರೆ ಮತ್ತು ಕೋವಿಡ್‌ ಕೇರ್‌ ಸೆಂಟರ್‌ಗಳಾಗಿ ಪರಿವತಿ೯ಸಲಾಗುವುದು ಎಂದರು.
ವಿಂಗಡಣೆ: ವೆಂಟಿಲೇಟರ್‌, ಹೈ ಪ್ಲೊ ಆಕ್ಸಿಜನ್‌ ಮತ್ತು ಇತರೆ ಅಗತ್ಯ ಸೌಲಭ್ಯಗಳಿರುವ ಕಡೆ ಕೋವಿಡ್‌ ಆಸ್ಪತ್ರೆಗಳನ್ನಾಗಿ ಪರಿವತಿ೯ಸಲಾಗುವುದು. ನಗರದಲ್ಲಿ ಕಳೆದ ಒಂದು ವಾರದಿಂದ ಈಚೆಗೆ ಕರೋನಾ ಸೋಂಕಿತರ ಪೈಕಿ ಶೇ ಮೂವತ್ತರಿಂದ ಐವತ್ತರವರೆಗೆ ರೋಗದ ಲಕ್ಷಣ ಕಾಣಿಸಿಕೊಳ್ಳುತ್ತಿವೆ. ಹೀಗಾಗಿ ಸೋಂಕಿತರ ಲಕ್ಷಣ ಆಧರಿಸಿ ಲಘು ಮಧ್ಯಮ ಮತ್ತು ತೀವ್ರ ಸ್ವರೂಪ ಎಂದು ವಿಂಗಡಿಸಿ ಚಿಕಿತ್ಸೆ ನೀಡಲು ನಿಧ೯ರಿಸಲಾಗಿದೆ. ಇದಕ್ಕಾಗಿ ಚಿಕಿತ್ಸಾ ವಿಧಾನದ ವಿಧಿ -ವಿಧಾನಗಳನ್ನು ಅಂತಿಮಗೊಳಿಸಲು ತಜ್ಞರಿಗೆ ಸೂಚನೆ ನೀಡಲಾಗಿದೆ ಎಂದು ವಿವರಿಸಿದರು.
ಖಾಸಗಿ ಆಸ್ಪತ್ರೆಗಳಲ್ಲಿ ಶೇ 50ರಷ್ಟು ಹಾಸಿಗೆಗಳನ್ನು ಕೋವಿಡ್‌ ಚಿಕಿತ್ಸೆಗೆ ಬಿಟ್ಟುಕೊಡಲು ಸೂಚನೆ ನೀಡಲಾಗಿದೆ. ಮಾಲೀಕರ ಜತೆ ಸೋಮವಾರ ಮಾತುಕತೆ ನಡೆಸಲಾಗುವುದು. ಅವರಿಗೆ ನಿಗದಿತ ದರ ನೀಡಲಾಗುವುದು. ಆ ಕುರಿತು ಅವರೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳಲಾಗುವುದು. ಹಾಗೆಯೇ ಖಾಸಗಿ ಮೆಡಿಕಲ್‌ ಕಾಲೇಜು ಆಸ್ಪತ್ರೆಗಳನ್ನು ಬಹುತೇಕ ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳುವ ಸಾಧ್ಯತೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದರು.
ಪರಿಶೀಲನೆ: ಕೋವಿಡ್‌ ಕೇರ್‌ ಸೆಂಟರ್‌ಗಳಿಗೆ ಹೆಚ್ಚಿನ ಸೌಲಭ್ಯ ಅಗತ್ಯವಿಲ್ಲ. ಹೀಗಾಗಿ ಬಿಡಿಎ, ವಸತಿ ಇಲಾಖೆ ನಿಮಿ೯ಸಿ ಸಿದ್ಧಗೊಂಡಿರುವ ಬಹುಮಹಡಿ ವಸತಿ ಸಮುಚ್ಛಯಗಳನ್ನು ಬಳಸಲಾಗುವುದು. ಬಿಡಿಎ ಬಳಿ 1,700 ಫ್ಲಾಟ್‌ಗಳಿವೆ. ಅವುಗಳಲ್ಲಿ ಬಳಕೆಗೆ ಲಭ್ಯವಿರುವ ನಿಖರ ಸಂಖ್ಯೆಯನ್ನು ಸೋಮವಾರ ತಿಳಿಸುವುದಾಗಿ ಆಯುಕ್ತ ಮಹದೇವ್‌ ತಿಳಿಸಿದ್ದಾರೆ. ಅದರ ಜತೆ ವಸತಿ ಇಲಾಖೆ, ರೇರಾದಲ್ಲಿ ನೋಂದಣಿಯಾಗಿರುವ ಖಾಸಗಿ ವಲಯದ ಮೂರು ಸಾವಿರ ಪ್ರಾಜೆಕ್ಟ್‌ಗಳಲ್ಲಿ ಲಭ್ಯವಾಗುವ ವಸತಿ ಸಮುಚ್ಛಯದ ವಿವರಗಳು ಲಭ್ಯವಾಗಲಿವೆ. ಎಲ್ಲವನ್ನೂ ಅಧಿಕಾರಿಗಳು ಖುದ್ದು ಪರಿಶೀಲಿಸಿ ಅಂತಿಮ ನಿಧಾ೯ರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇದರ ಜತೆಗೆ ಕ್ರೀಡಾ ಇಲಾಖೆ ಮತ್ತು ಖಾಸಗಿ ಅವರ ಒಡೆತನದಲ್ಲಿರುವ ಕ್ರೀಡಾಂಗಣ, ಕ್ರೀಡಾ ಸಮುಚ್ಛಯಗಳು, ಹಾಸ್ಟೆಲ್‌ಗಳು ಮತ್ತು ಬೃಹತ್‌ ವಾಣಿಜ್ಯ ಸಮುಚ್ಛಯಗಳ ಮಾಹಿತಿ ಕೂಡ ಕಲೆ ಹಾಕಲಾಗುತ್ತಿದೆ. ಒಟ್ಟಾರೆ ಕನಿಷ್ಠ ಹತ್ತು ಸಾವಿರ ಹಾಸಿಗೆಗಳ ಸೌಲಭ್ಯವನ್ನು ಸಿದ್ಧಗೊಳಿಸಲು ಅಧಿಕಾರಿಗಳು ಸಮರೋಪಾದಿಯಲ್ಲಿ ಕಾರ್ಯ ನಿವ೯ಹಿಸುತ್ತಿದ್ದಾರೆ. ತಾವು ಕೂಡ ಅದನ್ನು ಉಸ್ತುವಾರಿ ನೋಡುತ್ತಿರುವುದಾಗಿ ಹೇಳಿದರು.
ಊಟ – ಶುಚಿತ್ವ: ಹೀಗೆ ಗುರುತಿಸಿದ ಪ್ರದೇಶಗಳಲ್ಲಿ ಚಿಕಿತ್ಸೆಗೆ ಅಗತ್ಯವಿರುವ ಸೌಲಭ್ಯಗಳನ್ನು ಖಾಸಗಿ ನೆರವಿನಲ್ಲಿ ಅಭಿವೃದ್ಧಿಪಡಿಸಲಾಗುವುದು. ಉಳಿದಂತೆ ಸ್ವಚ್ಛತೆಗೆ ನಗರದಲ್ಲಿರುವ ನೂರಾರು ಖಾಸಗಿ ಕಂಪನಿಗಳ ನೆರವನ್ನೂ ಪಡೆಯಲಾಗುವುದು. ಸುರಕ್ಷತೆಗೆ ರಾಜ್ಯ ಮೀಸಲು ಪೋಲೀಸ್‌, ನಗರ ಸಶಸ್ತ್ರ ಮೀಸಲು ಪಡೆಗಳಲ್ಲದೆ, ಗೃಹ ರಕ್ಷಕ ದಳ, ಎನ್‌ಸಿಸಿ ಕೆಡೆಟ್‌ಗಳಲ್ಲದೆ, ನಗರದಲ್ಲಿ ಕೇಂದ್ರ ಹೊಂದಿರುವ ಅರೆ ಮಿಲಿಟರಿ ಪಡೆಗಳ ನೆರವು ಪಡೆಯಲಾಗುವುದು ಎಂದು ಸ್ಪಷ್ಟಪಡಿಸಿದರು.
ಭಯ ಬೇಡ, ಮುನ್ನೆಚ್ಚರಿಕೆ ಅಗತ್ಯ
ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 11,005 ಇದ್ದರೆ ಗುಣಮುಖರಾಗುತ್ತಿರುವ ಸಂಖ್ಯೆ 6,916ರಷ್ಟಿದೆ. ಸಕ್ರಿಯ ಪ್ರಕರಣಗಳು 3,905ಇವೆ. ಇದುವರೆಗೆ 180  ಮಂದಿ ಕೋವಿಡ್‌ ಸಂಬಂಧ ಸಾವಿಗೀಡಾಗಿದ್ದಾರೆ. ರಾಷ್ಟ್ರೀಯ ಮರಣ ಪ್ರಮಾಣಕ್ಕೆ ಹೋಲಿಕೆ ಮಾಡಿದರೆ ರಾಜ್ಯದ ಮರಣ ಪ್ರಮಾಣ ಶೇ 5ರಷ್ಟು ಕಡಿಮೆಯಿದೆ. ಕಳೆದ ಒಂದು ವಾರದಿಂದ ನಗರದಲ್ಲಿ ಸೋಂಕಿತರಾಗುವವರಲ್ಲಿ ಅಧ೯ದಷ್ಟು ಮಂದಿಗೆ ರೋಗ ಲಕ್ಷಣ ಕಾಣಿಸುತ್ತಿದೆ. ಹವಾಮಾನ ಬದಲಾವಣೆ ಇದಕ್ಕೆ ಕಾರಣವಿರಬಹುದು. ರೋಗದಿಂದ ಸಾವಿಗೀಡಾಗುವ ಪ್ರಮಾಣ ಇತರೆ ಸೋಂಕುಗಳಿಗೆ ಹೋಲಿಸಿದರೆ ಕಡಿಮೆ. ಹೀಗಾಗಿ ಜನತೆ ಭಯ ಪಡುವ ಅಗತ್ಯವಿಲ್ಲ. ಆದರೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವ ಅವಶ್ಯವಿದೆ. ಸರಕಾರ ಪ್ರಮಾಣಿಕವಾಗಿ ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಈ ಹಂತದಲ್ಲಿ ಜನರ ಸಹಕಾರ ಅಗತ್ಯವಿದೆ ಎಂದು ಸಚಿವರು ಮನವಿ ಮಾಡಿದರು.