Monday, 25th November 2024

ಬೆಂವಿವಿಯಿಂದ ಒಂದು ವಾರಗಳ ಕಾಲ ಆನ್‌ಲೈನ್ ಕಾರ್ಯಗಾರ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು

ಕರೋನಾ ಲಾಕ್‌ಡೌನ್‌ನಿಂದಾಗಿ ವಿದ್ಯಾಾರ್ಥಿಗಳಿಗೆ ಆನ್‌ಲೈನ್ ತರಗತಿಗಳನ್ನು ನಡೆಸಲಾಗುತ್ತಿದೆ. ಈ ಕುರಿತು  ಮೇ.18 ರಂದು
ಬೆಂಗಳೂರು ವಿಶ್ವವಿದ್ಯಾಲಯದ  ವಿದ್ಯುನ್ಮಾನ ಮಾಧ್ಯಮ ವಿಭಾಗ ಒಂದು ವಾರದ ಮಾಧ್ಯಮ ಕೌಶಲ್ಯ ಅಭಿವೃದ್ದಿ
ಕಾರ್ಯಗಾರವನ್ನು ಬೆಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ  ಪ್ರೊ.ಕೆ.ಆರ್. ವೇಣುಗೋಪಾಲ್ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಆನ್‌ಲೈನ್ ಶಿಕ್ಷಣ ಇಂದು ಅಂತರರಾಷ್ಟ್ರೀಯ ಮಟ್ಟದಿಂದ ತಜ್ಞರನ್ನು ಆಮಂತ್ರಿಸಿ ಅವರ ಅನುಭವಗಳನ್ನು ಹಂಚಿಕೊಳ್ಳಲು ವೇದಿಕೆಯನ್ನು ಒದಗಿಸಿದೆ. ಪಾರಂಪರಿಕ ಶಿಕ್ಷಣಕ್ಕೆ ಆನ್ ಲೈನ್ ಶಿಕ್ಷಣ ಪರ್ಯಾಯವಲ್ಲ. ಆದರೆ ಸಾಮಾನ್ಯ ಸಂದರ್ಭಗಳಲ್ಲಿ ತರಗತಿಗಳಿಗೆ ಕರೆತರಲಾರದ ತಜ್ಞರನ್ನು ಆನ್ ಲೈನ್ ಮೂಲಕ ತರಲು ಸಾಧ್ಯವಾಗಿದೆ. ಹಾಗಾಗಿ ವಿಶ್ವವಿದ್ಯಾಲಯದಲ್ಲಿ ಆನ್ ಲೈನ್ ಶಿಕ್ಷಣಕ್ಕೆ ನನ್ನ ಬೆಂಬಲ ಸದಾ ಇರುತ್ತದೆ.  ಕರೋನಾದಂತಹ  ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಪರ್ಯಾಯ ಮಾರ್ಗಗಳನ್ನು ಹುಡುಕಿ ತರಗತಿಗಳು  ಹಾಗೂ
ಕಾರ್ಯಾಗಾರಗಳನ್ನು ನಡೆಸುವ ಅನಿವಾರ್ಯತೆ ಸೃಷ್ಟಿಯಾಗಿದ್ದು, ವಿಶ್ವವಿದ್ಯಾಲಯದ ಬೋಧಕರು ಹಾಗೂ ವಿದ್ಯಾರ್ಥಿಗಳು
ಸೂಕ್ತವಾಗಿ ಬಳಕೆ ಮಾಡಿಕೊಳ್ಳುತ್ತಿರುವುದು ಸಂತೋಷದ ವಿಷಯ ಎಂದರು.

ಮುಖ್ಯ ಅತಿಥಿಯಾಗಿದ್ದ ನಿವೃತ್ತ ಪ್ರಾಧ್ಯಾಪಕ ಪ್ರೊ. ಎ.ಎಸ್. ಬಾಲಸುಬ್ರಹ್ಮಣ್ಯ ಅವರು ಮಾತನಾಡಿ, ಆನ್ ಲೈನ್ ಮಾಧ್ಯಮಗಳು ಅನೇಕ ಅವಕಾಶಗಳನ್ನು ಕಲ್ಪಿಸಿಕೊಟ್ಟಿವೆ. ಮಾಹಿತಿ ಮತ್ತು, ಸಂವಹನ ತಂತ್ರಜ್ಞಾನ ಶಿಕ್ಷಣ ಕ್ರಾಾಂತಿಗೆ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಇರಬಹುದಾದ ಅನೇಕ ಸಮಸ್ಯೆಗಳಿಗೆ ಉತ್ತರವಾಗಿ ಬೆಳೆದು ನಿಂತಿದೆ. ಒಬ್ಬ ಉತ್ತಮ ಶಿಕ್ಷಕ ಭೌಗೋಳಿಕ ವ್ಯಾಪ್ತಿಯನ್ನು ಮೀರಿ ಅಸಕ್ತರನ್ನು ತಲುಪುವುದಕ್ಕೆ ಸಾಧ್ಯವಾಗಿದೆ. ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಜ್ಞಾನದೊಂದಿಗೆ ಕಲೆ ಕೂಡ ಮುಖ್ಯ. ಅದನ್ನು ಇಂತಹ ಕಾರ್ಯಾಗಾರಗಳ ಮೂಲಕ ಒದಗಿಸಿ ಕೊಡಬಹುದಾಗಿದೆ ಎಂದರು.

ಕಾರ್ಯಾಗಾರದ ಮೊದಲ ದಿನದ ಆಮಂತ್ರಿತ ಭಾಷಣಕಾರರಾಗಿದ್ದ ಖಾಸಗಿ ವಾಹಿನಿಯ ಹಿರಿಯ ಸುದ್ದಿನಿರ್ಮಾಪಕ  ಹರಿಪ್ರಸಾದ್ ಅವರು, ಟೆಲಿವಿಷನ್ ಸುದ್ದಿ ಮಾದರಿಗಳು, ಸುದ್ದಿ ಪ್ರಸ್ತುತ ಪಡಿಸುವಿಕೆ, ವರದಿಗಾರಿಕೆ ಸೇರಿದಂತೆ ಹಲವಾರು  ವಿಷಯಗಳನ್ನು ಕುರಿತು ವಿವರಿಸಿದರು. ಪತ್ರಕರ್ತರಿಗೆ ಯಾವುದೇ ಇಸಮ್‌ಗಳು ಇರಬಾರದು ಜರ್ನಲಿಸಂನ ಇಸಮ್ ಇರಬೇಕು.  ಪತ್ರಿಕೋದ್ಯಮದ ಎಲ್ಲಾ ನೀತಿ ನಿರೂಪಣೆಗಳನ್ನು ಪಾಲಿಸಿಕೊಂಡು ವೃತ್ತಿ ನಿರ್ವಹಿಸಬೇಕು ಎಂದರು.  ನಂತರ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಅವರ ಜತೆ ಮಾತುಕತೆ ನಡೆಸಿ ತಮ್ಮ ಸಂಶಯಗಳನ್ನು ಬಗೆಹರಿಸಿಕೊಂಡರು.