ವಿಶ್ವವಾಣಿ ಸುದ್ದಿಮನೆ
ಬೆಂಗಳೂರು:
ಬೆಳಗಾವಿ ಜಿಲ್ಲೆಯಲ್ಲಿ ಗುರುವಾರ ಒಂದೇ ದಿನ ಹೊಸದಾಗಿ 17 ಮಂದಿಗೆ ಕೋವಿಡ್-19 ರೋಗ ದೃಢಪಟ್ಟಿದೆ. ಇದರೊಂದಿಗೆ ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 36ಕ್ಕೆ ಏರಿದೆ.
ಕಲಬುರಗಿಯಲ್ಲಿ ಗುರುವಾರ ಒಂದೇ ದಿನ ಮೂವರಲ್ಲಿ ಸೋಂಕು ದೃಢಪಟ್ಟಿದ್ದು, ಅದರಲ್ಲಿ ಐದು ವರ್ಷದ ಗಂಡು ಮಗು ಸೇರಿದೆ. ಕಲಬುರ್ಗಿ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 20ಕ್ಕೇರಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ತಾಲ್ಲೂಕಿನ ಹಿರೇಬಾಗೇವಾಡಿಯ 8 (ಇವರಲ್ಲಿ ಐವರು ಮಹಿಳೆಯರು, ಇನ್ನೊಬ್ಬರು 16ರ ಬಾಲಕಿ), ರಾಯಬಾಗ ತಾಲ್ಲೂಕಿನ ಕುಡಚಿಯ 7, ಹುಕ್ಕೇರಿ ತಾಲ್ಲೂಕಿನ ಸಂಕೇಶ್ವರ ಹಾಗೂ ಬೆಳಗಾವಿ ತಾಲ್ಲೂಕಿನ ಯಳ್ಳೂರದ ಒಬ್ಬರು ಸೋಂಕಿಗೆ ಒಳಗಾಗಿದ್ದಾರೆ.
ಹಿರೇಬಾಗೇವಾಡಿಯವರು ದೆಹಲಿಯ ನಿಜಾಮುದ್ದೀನ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ ರೋಗಿ ಸಂಖ್ಯೆ 224 ಹಾಗೂ 225 ಜತೆ ಸಂಪರ್ಕಕ್ಕೆ ಬಂದಿದ್ದವರಾಗಿದ್ದಾರೆ. ಇವರು, 51, 42, 33, 16, 65, 30, 54, 58 ವರ್ಷ ವಯಸ್ಸಿನವರಾಗಿದ್ದಾರೆ.
ತಿಂಗಳಿಂದ ತಂಗಿದ್ದರು: ರಾಯಬಾಗದಲ್ಲಿ ಒಂದು ತಿಂಗಳಿಂದ ತಂಗಿದ್ದ ವಿಜಯಪುರ, ಗೋವಾ ಹಾಗೂ ಮಹಾರಾಷ್ಟ್ರದ ತಲಾ ಒಬ್ಬರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇವರು ರೋಗಿ ಸಂಖ್ಯೆ 245ರ ಸಂಪರ್ಕಕ್ಕೆ ಬಂದಿದ್ದವರಾಗಿದ್ದಾರೆ. ಇವರು 50, 35 ಹಾಗೂ 25 ವರ್ಷ ವಯಸ್ಸಿನವರಾಗಿದ್ದಾರೆ.
ಜಿಲ್ಲೆಯಲ್ಲಿ ಈಗಾಗಲೇ ಸೋಂಕಿತರಾಗಿರುವುದರಿಂದಲೆ ಸೋಂಕು ವ್ಯಾಪಿಸುತ್ತಿರುವುದು ಹೆಚ್ಚಿನ ಆತಂಕಕ್ಕೆ ಕಾರಣವಾಗಿದೆ. ಅವರ ಸಂಪರ್ಕಕ್ಕೆ ಬಂದಿದ್ದವರನ್ನು ಕ್ವಾರಂಟೈನ್ ಮಾಡಿ, ಗಂಟಲು ದ್ರವದ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲು ಸಿದ್ಧತೆ ನಡೆದಿದೆ. ಸೋಂಕಿತರೆಲ್ಲರಿಗೂ ಇಲ್ಲಿನ ಬಿಮ್ಸ್ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕಂಟೈನ್ಮೆಂಟ್ ಝೋನ್: ಮಧ್ಯಾಹ್ನ ಬಿಡುಗಡೆ ಮಾಡಿದ ರಾಜ್ಯಮಟ್ಟದ ಪಟ್ಟಿ ಪ್ರಕಾರ, ಚಿಕ್ಕೋಡಿಯ ವ್ಯಕ್ತಿಗೆ ಸೋಂಕು ತಗುಲಿದ ಬಗ್ಗೆ ಮಾಹಿತಿ ಇತ್ತು. ‘ಆದರೆ, ಈ ರೋಗಿ ಸಂಖ್ಯೆ 293 ಚಿಕ್ಕೋಡಿಯವರಲ್ಲ. ಸಂಕೇಶ್ವರ ಪಟ್ಟಣಕ್ಕೆ (47 ವರ್ಷ ವಯಸ್ಸು) ಸಂಬಂಧಿಸಿದವರಾಗಿದ್ದಾರೆ’ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಮಾಹಿತಿ ನೀಡಿದ್ದರು. ಸಂಜೆ ಬಿಡುಗಡೆಯಾದ ಬುಲೆಟಿನ್ನಲ್ಲಿ ಮಾಹಿತಿ ಪರಿಷ್ಕರಿಸಲಾಗಿದೆ.
ಸಂಕೇಶ್ವರ, ರಾಯಬಾಗದ ತಾಲ್ಲೂಕಿನ ಕುಡಚಿಯ ಇಬ್ಬರು 30 ಮತ್ತು 40 ವರ್ಷ ವಯಸ್ಸಿನವರಾಗಿದ್ದಾರೆ. ಯಳ್ಳೂರದ (45 ವರ್ಷ ವಯಸ್ಸು) ರೋಗಿಗಳು ದೆಹಲಿಗೆ ಪ್ರಯಾಣಿಸಿದ್ದರು.
ತಾಲ್ಲೂಕಿನ ಯಳ್ಳೂರ ಹಾಗೂ ಹುಕ್ಕೇರಿ ತಾಲ್ಲೂಕಿನ ಸಂಕೇಶ್ವರ ಪಟ್ಟಣದಲ್ಲಿ ಕರೊನಾ ವೈರಸ್ ಸೋಂಕು ದೃಢಪಟ್ಟಿರುವುದರಿಂದ (ಪಾಸಿಟಿವ್) ಈ ಭೌಗೋಳಿಕ ಪ್ರದೇಶವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನಿಷೇಧಿತ (ಕಂಟೈನ್ಮೆಂಟ್ ಝೋನ್) ಎಂದು ಘೋಷಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ನಿಷೇಧಿತ ಪ್ರದೇಶದ ಹೊರಗಿನ 2 ಕಿ.ಮೀ. ವ್ಯಾಪ್ತಿಯನ್ನು ಬಫರ್ ಝೋನ್ ಎಂದು ಘೋಷಿಸಲಾಗಿದೆ. 3 ಕಿ.ಮೀ. ವ್ಯಾಪ್ತಿಯಲ್ಲಿ ಜನರು ಓಡಾಡುವುದು, ವಾಹನಗಳಲ್ಲಿ ಪ್ರವೇಶಿಸುವುದು ಹಾಗೂ ನಿರ್ಗಮಿಸುವುದನ್ನು ನಿರ್ಬಂಧಿಸಲಾಗಿದೆ. ನಿವಾಸಿಗಳು ಮನೆಯಿಂದ ಹೊರಗೆ ಬರುವಂತಿಲ್ಲ.
ಈ ಪ್ರದೇಶದಲ್ಲಿನ ಕಚೇರಿಗಳು (ಸರ್ಕಾರಿ ಕಚೇರಿಗಳನ್ನು ಹೊರತುಪಡಿಸಿ), ಅಂಗಡಿ, ಮಳಿಗೆ, ದಾಸ್ತಾನು ಕೇಂದ್ರಗಳನ್ನು (ದಿನಸಿ, ಹಾಲು, ಹಣ್ಣು, ತರಕಾರಿ ಮತ್ತು ಔಷಧಿ ಅಂಗಡಿಗಳು ಹೊರತುಪಡಿಸಿ) ಮುಚ್ಚಬೇಕು. ಅಗತ್ಯ ವಸ್ತುಗಳಾದ ದಿನಸಿ, ಹಾಲು, ಹಣ್ಣು ಮತ್ತು ತರಕಾರಿಗಳ ಖರೀದಿಗೆ ಬೆಳಿಗ್ಗೆ 8ರಿಂದ 10ರವರೆಗೆ ಮಾತ್ರ ಅವಕಾಶವಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
23 ವರ್ಷದ ಮಹಿಳೆ, 32 ವರ್ಷದ ಪುರುಷ ಹಾಗೂ ಐದು ವರ್ಷದ ಮಗುವಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಮಹಿಳೆಯು ಬುಧವಾರ ಸೋಂಕಿಗೆ ಒಳಗಾದ 14 ತಿಂಗಳ ಮಗುವಿನ ಸಂಪರ್ಕಕ್ಕೆ (ಪ್ರೈಮರಿ ಕಾಂಟ್ಯಾಕ್ಟ್) ಬಂದಿದ್ದರು. ಪುರುಷ ಬೆಂಗಳೂರಿನಿಂದ ಈಚೆಗೆ ವಾಪಸಾಗಿದ್ದು, ಇನ್ಫ್ಲುಯೆಂಜಾ ಮಾದರಿಯ ಸೋಂಕು ತಗುಲಿದೆ. ಮಗುವಿಗೆ ಕೋವಿಡ್ ತಗುಲಲು ಕಾರಣ ಇನ್ನಷ್ಟೇ ಗೊತ್ತಾಗಬೇಕಿದೆ.
ಮೂವರನ್ನೂ ನಗರದ ಇಎಸ್ಐಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರೊಂದಿಗೆ ಕಲಬುರಗಿ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 20ಕ್ಕೆ ಏರಿದಂತಾಗಿದೆ. ಅವುಗಳ ಪೈಕಿ ಮೂವರು ಗುಣಮುಖರಾಗಿ ಮನೆಗೆ ತೆರಳಿದ್ದು, ಇನ್ನು ಮೂವರು ಸೋಂಕಿನಿಂದ ಮೃತಪಟ್ಟಿದ್ದಾರೆ.