Thursday, 12th December 2024

ಬೆಳೆ ನಾಶ: ಎಕ್ಟೇರ್ ಗೆ 40 ಸಾವಿರ ಪರಿಹಾರಕ್ಕೆ ಆಗ್ರಹ

ವಿಶ್ವವಾಣಿ ಸುದ್ದಿಮನೆ, ಬಾಗಲಕೋಟೆ

ಜಿಲ್ಲೆಯ ಗಂಗಾವತಿ, ಕನಕಗಿರಿ, ಕಾರಟಗಿ ಭಾಗದಲ್ಲಿ ಸುರಿದ ಅಕಾಲಿಕ ಆಲಿಕಲ್ಲು ಮಳೆಗೆ ಕಟಾವಿಗೆ ಬಂದಿದ್ದ ಭತ್ತದ ಬೆಳೆ ಸಾವಿರಾರೂ ಹೆಕ್ಟರ್ ನಲ್ಲಿ ನಷ್ಟವಾಗಿದ್ದು, ಇದಕ್ಕೆ ಸೂಕ್ತ ಪರಿಹಾರ ಒದಗಿಸುವಂತೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ ತಂಗಡಗಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಶುಕ್ರವಾರ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಕಾಂಗ್ರೆಸ್ ಮುಖಂಡರು, ಏಪ್ರಿಲ್ 7ರಂದು ಸಂಜೆ ಅಕಾಲಿಕ ಗಾಳಿ ಸಮೇತ ಮಳೆ ಸುರಿದ ಹಿನ್ನೆಲೆ ಅಪಾರ ಪ್ರಮಾಣ ಬೆಳೆ ನಷ್ಟವಾಗಿದೆ. ಸಾವಿರ ಎಕರೆಯಲ್ಲಿ ಕೃಷಿ ಹಾಗೂ ತೋಟಗಾರಿಕೆ ಬೆಳೆ ನಾಶವಾಗಿದೆ. ಇದರಿಂದ ರೈತರು ಸಂಕಷ್ಟಕ್ಕೊಳಗಾಗಿದೆ.
ಕಳೆದ ಸಾರಿ ಬೆಳೆ ನಷ್ಟವಾದಾಗ ವಿಶೇಷ ಪ್ಯಾಕೇಜ್ ಅಡಿ ಹೆಕ್ಟರ್ ಗೆ 25 ಸಾವಿರ ನೀಡಲಾಗಿತ್ತು. ಕಳೆದ ಬಾರಿಗಿಂತ ಈ ಸಲ ಹೆಚ್ಚು ನಷ್ಟವಾಗಿದೆ. ಹೇಕ್ಟರ್ ಗೆ 40 ಸಾವಿರ ನೀಡಬೇಕು ಹಾಗೂ ಕಟಾವು ಯಂತ್ರ ಒದಗಿಸುವುಂತೆ ಜಿಲ್ಲಾಧಿಕಾರಿ ಸುನೀಲ್ ಕುಮಾರ್ ಅವರಿಗೆ ಕಾಂಗ್ರೆಸ್ ನಿಯೋಗವು ಒತ್ತಾಯ ಪಡಿಸಿತು.
ಪ್ರಸ್ತುತ ಹಾನಿಯಾಗಿರುವ ಭತ್ತದ ಬೆಳೆಯ ಪ್ರಮಾಣ ಕಳೆದ ಬಾರಿಗಿಂತ ಹೆಚ್ಚಿದ್ದು, ಬೆಳೆಗೆ ಮಾಡಿದ ಖರ್ಚಿನ ಪ್ರಮಾಣವು ಅಧಿಕವಾಗಿದೆ. ಇದರಿಂದ ಹೆಕ್ಟೇರಿಗೆ 40 ಸಾವಿರ ಪರಿಹಾರ ಒದಗಿಸಲು ಸರ್ಕಾರಕ್ಕೆ ಮಾಹಿತಿ ಹಾಗೂ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಾಸಕ ಅಮರೇಗೌಡ ಬಯ್ಯಪುರ, ರಾಘವೆಂದ್ರ ಹಿಟ್ನಾಳ, ಜಿ.ಪಂ. ಸದಸ್ಯ ರಾಜಶೇಖರ ಹಿಟ್ನಾಳ, ಮುಖಂಡ ಶ್ರೀನಿವಾಸ ರಡ್ಡಿ, ಕುರಗೋಡ ರವಿ, ಎಂ. ಕಾಟಾನ್ ಪಾಶಾ, ನವೋದಯ ವಿರುಪಾಕ್ಷಪ್ಪ, ಸೇರಿದಂತೆ ಇತರರು ಇದ್ದರು.

ಕೋಟ್..
ಅಕಾಲಿಕವಾಗಿ ಸುರಿದ ಆಲಿಕಲ್ಲು ಮಳೆಯಿಂದ, ಕನಕಗಿರಿ ವಿಧಾನಸಭಾ ಕ್ಷೇತ್ರ ಸೇರಿದಂತೆ ಗಂಗಾವತಿ ತಾಲೂಕು ಇತರಡೆಯಲ್ಲಿ ಬೆಳೆದ ಭತ್ತದ ಬೆಳೆಯಲ್ಲಿ ಪ್ರತಿಶತ ಶೇ.90ಕ್ಕಿಂತ ಹೆಚ್ಚು ಕಟಾವಿಗೆ ಬಂದಿದ್ದ ಭತ್ತದ ಬೆಳೆ ಹಾಗೂ ತೋಟಗಾರಿಕೆ ಬೆಳೆ ಹಾನಿಯಾಗಿದೆ, ಈಗಾಗಲೇ ಕೊರೊನಾದಿಂದ ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದಾರೆ, ವಿಶೇಷ ಪ್ಯಾಕೇಜ್ ರೂಪದಲ್ಲಿ ಪ್ರತಿ ಹೆಕ್ಟೇರಿಗೆ 40 ಸಾವಿರ ಹಣವನ್ನು ಪರಿಹಾರ ನೀಡಬೇಕು.
ಶಿವರಾಜ ತಂಗಡಗಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ