Thursday, 12th December 2024

ಭಾರತೀಯ ಆಹಾರ ನಿಗಮದಿಂದ ಕರ್ನಾಟಕಕ್ಕೆ 11.80 ಲಕ್ಷ ಟನ್ ಆಹಾರಧಾನ್ಯ ಪೂರೈಕೆ

ಬೆಂಗಳೂರು:

ಲಾಕ್ ಡೌನ್ ಅವಧಿಯಲ್ಲಿ ಭಾರತೀಯ ಆಹಾರ ನಿಗಮದಿಂದ ಕರ್ನಾಟಕಕ್ಕೆ 2507 ಕೋಟಿ ರೂ. ಮೌಲ್ಯದ 11.80 ಲಕ್ಷ ಟನ್ ಆಹಾರಧಾನ್ಯ ಪೂರೈಕೆ

ಕೋವಿಡ್-19 ಅವಧಿಯಲ್ಲಿ ಕರ್ನಾಟಕ ರಾಜ್ಯಕ್ಕೆ ಭಾರತೀಯ ಆಹಾರ ನಿಗಮವು ವಿವಿಧ ಯೋಜನೆಗಳ ಅಡಿಯಲ್ಲಿ 2507 ಕೋಟಿ ರೂ. ಮೌಲ್ಯದ 11.80 ಲಕ್ಷ ಟನ್ ಆಹಾರಧಾನ್ಯವನ್ನು 405 ರೈಲು ಲೋಡ್ ಮೂಲಕ ವಿತರಿಸಿದೆ ಎಂದು ಭಾರತೀಯ ಆಹಾರ ನಿಗಮದ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಶ್ರೀ ಡಿ.ವಿ. ಪ್ರಸಾದ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಲಾಕ್ ಡೌನ್ ಅವಧಿಯಲ್ಲಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ (ಪಿಎಂಜಿಕೆಎವೈ) ಅಡಿಯಲ್ಲಿ ಪೂರೈಸಲಾದ 2340 ಕೋಟಿ ರೂಪಾಯಿ ಮೌಲ್ಯದ 6 ಲಕ್ಷ ಟನ್ ಉಚಿತ ಆಹಾರ ಧಾನ್ಯವನ್ನೂ ಒಳಗೊಂಡಿದೆ. ಇದರ ಜೊತೆಗೆ ಭಾರತ ಸರ್ಕಾರ ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ವಲಸೆ ಕಾರ್ಮಿಕರಿಗೆ ವಿತರಿಸುವ ಸಲುವಾಗಿ 156 ಕೋಟಿ ರೂಪಾಯಿ ಮೌಲ್ಯದ (40,000 ಮೆಟ್ರಿಕ್ ಟನ್) ಆಹಾರ ಧಾನ್ಯವನ್ನೂ ಒದಗಿಸುತ್ತಿದೆ. ರಾಜ್ಯ ಸರ್ಕಾರ ಈವರೆಗೆ ರಾಜ್ಯದಾದ್ಯಂತ 2373 ಕೋಟಿ ರೂಪಾಯಿ ಮೌಲ್ಯದ ಆಹಾರ ಧಾನ್ಯವನ್ನು ಭಾರತೀಯ ಆಹಾರ ನಿಗಮದಿಂದ ಎತ್ತುವಳಿ ಮಾಡಿದೆ. ಇದರ ಜೊತೆಗೆ ಭಾರತೀಯ ಆಹಾರ ನಿಗಮ ರಾಷ್ಟ್ರೀಯ ಆಹಾರ ಭದ್ರತೆ ಕಾಯಿದೆ (ಎನ್.ಎಫ್.ಎಸ್.ಎ.) ಅಡಿಯಲ್ಲಿ 3.83 ಲಕ್ಷ ಟನ್, ಮುಕ್ತ ಮಾರಾಟದಲ್ಲಿ 1.20 ಲಕ್ಷ ಟನ್ ಮತ್ತು 41 ಸಾವಿರ ಟನ್ ಆಹಾರ ಧಾನ್ಯವನ್ನು ರಾಜ್ಯದ ಹೆಚ್ಚುವರಿ ಫಲಾನುಭವಿಗಳಿಗಾಗಿ ಪೂರೈಕೆ ಮಾಡಿದೆ.
ಲಾಕ್ ಡೌನ್ ಅವಧಿ ದಾಖಲೆಯ ಸೇರ್ಪಡೆ, ಆಹಾರ ಧಾನ್ಯ ಪೂರೈಕೆಯನ್ನು, ಎಲ್ಲಾ ದಿನಗಳಲ್ಲೂ ನಿರಂತರವಾಗಿ ಕಾರ್ಯ ನಿರ್ವಹಿಸಿ, ಕೆಲಸದ ಸಮಯವನ್ನು ವಿಸ್ತರಿಸಿ, ಡಿಪೋಗಳು/ ಕಚೇರಿಗಳಿಗೆ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಿ ಮತ್ತು ನಿಯಮಿತವಾಗಿ ನೈರ್ಮಲ್ಯೀಕರಣ ಮತ್ತು ಸುರಕ್ಷತಾ ಕ್ರಮಗಳನ್ನು ಕೈಗೊಂಡು ವ್ಯಾಗನ್‌ ಗಳ ಮೂಲಕ ನೇರ ಆಹಾರ ಧಾನ್ಯ ವಿತರಣೆ ಮಾಡಲಾಗಿದೆ.
ರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕ ಅತಿ ಹೆಚ್ಚು ಅಕ್ಕಿ ಪಡೆದುಕೊಳ್ಳುವ ರಾಜ್ಯವಾಗಿದ್ದು, ಪಂಜಾಬ್, ಹರಿಯಾಣ ಮತ್ತು ಆಂಧ್ರಪ್ರದೇಶದಿಂದ ಅಕ್ಕಿಯನ್ನು ಪಡೆದುಕೊಳ್ಳುತ್ತಿದೆ.
ರಾಜ್ಯಗಳ ಅಗತ್ಯವನ್ನು ಪೂರೈಸಲು ಭಾರತೀಯ ಆಹಾರ ನಿಗಮ ಸಂಪೂರ್ಣ ಸಜ್ಜಾಗಿದ್ದು, ಅಭೂತಪೂರ್ವ ಲಾಕ್ ಡೌನ್ ಆರಂಭವಾದಾಗಿನಿಂದ ಕರ್ನಾಟಕ ಒಂದರಲ್ಲೇ ನಿಗಮ 4.54 ಕೋಟಿ ಚೀಲಗಳಷ್ಟು ಆಹಾರ ಧಾನ್ಯ ನಿರ್ವಹಣೆ ಮಾಡಿದೆ, ಇದು ಸಾಮಾನ್ಯ ಕಾರ್ಯಾಚರಣೆಗಿಂತ ದುಪ್ಪಟ್ಟಾಗಿದೆ ಎಂದು ಭಾರತೀಯ ಆಹಾರ ನಿಗಮದ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಶ್ರೀ ಡಿ.ವಿ. ಪ್ರಸಾದ್ ತಿಳಿಸಿದ್ದಾರೆ.
ರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಆಹಾರ ನಿಗಮ 2020ರ ಮೇ 25 ವರೆಗೆ 271.12 ಲಕ್ಷ ಟನ್ ಅಕ್ಕಿ ಮತ್ತು 463.59 ಲಕ್ಷ ಟನ್ ಗೋಧಿ ಸೇರಿದಂತೆ ಒಟ್ಟು 734.71 ಲಕ್ಷ ಟನ್ ಆಹಾರ ಧಾನ್ಯವನ್ನು ನಿರ್ವಹಿಸಿದೆ. ಲಾಕ್ ಡೌನ್, ಕೋವಿಡ್ ಭೀತಿ ಮತ್ತು ಕೊರೊನಾ ವೈರಾಣುವಿನ ಪ್ರಸರಣದಿಂದ ಉದ್ಭವಿಸಿರುವ ಇತರ ಅಡೆತಡೆಗಳ ನಡುವೆಯೂ ಸರ್ಕಾರಿ ಸಂಸ್ಥೆಗಳಿಂದ ಈ ಹಿಂಗಾರು ಹಂಗಾಮಿನ (ರಬಿ) ಅವಧಿಯಲ್ಲಿ ಗೋಧಿಯ ದಾಸ್ತಾನು ಕಳೆದ ವರ್ಷಕ್ಕಿಂತ ಅಧಿಕವಾಗಿದ್ದು, 2020ರ ಮೇ 25ರಲ್ಲಿದ್ದಂತೆ 341.56 ಲಕ್ಷ ಟನ್ ತಲುಪಿದೆ. ಅದೇ ರೀತಿ ಭಾರತೀಯ ಆಹಾರ ನಿಗಮ ಯಾವುದೇ ದೂರುಗಳು ಬಾರದ ರೀತಿಯಲ್ಲಿ ಸಾಕಷ್ಟು ಪ್ರಮಾಣದ ಆಹಾರ ಧಾನ್ಯಗಳು ಎಲ್ಲ ರಾಜ್ಯಗಳಿಗೆ ಲಭ್ಯವಾಗುವಂತೆ ಮಾಡುವ ಮೂಲಕ ಅನುಗಳ ಅಗತ್ಯವನ್ನು ಪೂರೈಸಿದೆ.