Sunday, 27th October 2024

ಮದ್ಯ ಸಾಗಾಟ ಪ್ರಕರಣ : ಡಿಜಿಪಿಗೆ ದೂರು

ವಿಶ್ವವಾಣಿ ಸುದ್ದಿಮನೆ
ಬೆಂಗಳೂರು:
ಸರಕಾರಿ ವಾಹನವೊಂದರಲ್ಲಿ ಮದ್ಯ ಸಾಗಾಟ ಮಾಡಿದ ಪ್ರಕರಣ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿ  ಸರಕಾರಕ್ಕೆ ಮುಜುಗರವನ್ನೂ ತಂದಿತು.
ಈ ಪ್ರಕರಣದಲ್ಲಿ ಎಸಿಪಿ ವಾಸು ಅವರನ್ನು ಸರಕಾರವು ಈಗಾಗಲೇ ಕರ್ತವ್ಯಲೋಪ ಆರೋಪದಲ್ಲಿ ಅಮಾನತು ಮಾಡಿದೆ. ಇದರಿಂದ ರೊಚ್ಚಿಗೆದ್ದ ಎಸಿಪಿ ವಾಸು ತನ್ನನ್ನು ಅಮಾನತು ಮಾಡಿದ ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್ ವಿರುದ್ಧ ಮಾಧ್ಯಮಗಳಲ್ಲಿ ಹೇಳಿಕೆ ಕೊಟ್ಟಿದ್ದರು. ಅವರು ಹಣ ಪಡೆದುಕೊಂಡು ಆರೋಪಿಯನ್ನ ಬಿಡಲು ಹೇಳಿದರು. ಬಿಡದಿದ್ದಕ್ಕೆ ಈ ರೀತಿ ನನ್ನನ್ನು ಅಮಾನತು ಮಾಡಿದ್ದಾರೆ ಅಂತಾ ಪ್ರಕರಣಕ್ಕೆ ಬೇರೆ ದಿಕ್ಕನ್ನೇ ನೀಡಿದ್ದರು.
ಎಸಿಪಿ ಅಮಾನತು ಮಾಡುವ ಮುನ್ನ ತನಿಖೆ
ಬೆಂಗಳೂರಿನ ಪೂರ್ವ ಮತ್ತು ಈಶಾನ್ಯ ವಿಭಾಗದ ಇಬ್ಬರು ಡಿಸಿಪಿಗಳ ವರದಿ ಪ್ರಕಾರ ಈ ಘಟನೆ ನಡೆದಿರುವುದು 2020 ರ ಏಪ್ರಿಲ್ 11 ರಂದು ವಿಶೇಷ್ ಗುಪ್ತಾ ಎಂಬಾತ ತನ್ನ ಸ್ನೇಹಿತ ಕಮರ್ಷಿಯಲ್ ಟ್ಯಾಕ್ಸ್ ಕಚೇರಿಯಲ್ಲಿ ಗುತ್ತಿಗೆ ಡ್ರೈವರ್ ಆಗಿರುವ ಗೋಪಿಯ ಜತೆ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಮದ್ಯ ತರಲು ಹೋಗಿ ಸಿಕ್ಕಿ ಹಾಕಿಕೊಂಡಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಟಿವಿಎಸ್ ಶೋಂ ರೂಂ ಬಳಿ ಎಸಿಪಿ ವಾಸು ಮತ್ತು ಅವರ ಟೀಂ ಇವರ ಕಮರ್ಷಿಯಲ್ ಟ್ಯಾಕ್ಸ್ ಕಚೇರಿಯ ಸರಕಾರಿ ವಾಹನ ಸಂಖ್ಯೆ ಕೆಎ 01, ಜಿ -5956 ಅಡ್ಡಗಟ್ಟಿ ವಶಕ್ಕೆ ಪಡೆದಿದ್ದರಂತೆ. ಅನಂತರ ಠಾಣೆಗೆ ಕರೆದೊಯ್ದು ಒಂದಿಡೀ ರಾತ್ರಿ ಸೆಲ್ ನಲ್ಲಿ ಇಟ್ಟಿದ್ದಾರೆ.
ಅವರನ್ನು ಬಿಟ್ಟು ಕಳುಹಿಸಲು ಠಾಣೆ ಸಿಬ್ಬಂದಿಯನ್ನು ಬಳಸಿಕೊಂಡು ಬರೋಬ್ಬರಿ 50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾರೆ. ಠಾಣೆಯ ಸಿಬ್ಬಂದಿ, ಇನ್ಸ್​ಪೆಕ್ಟರ್, ಎಸಿಪಿ, ಡಿಸಿಪಿ ಮತ್ತು ಕಮೀಷನರ್​ಗೆ ಇದರಲ್ಲಿ ಹಣ ಹೋಗಬೇಕು ಅಂತಾ ಲಂಚಕ್ಕೆ ಬೇಡಿಕೆ ಇಟ್ಟಿದ್ದರಂತೆ. ಆನಂತರ ಕೊನೆಗೆ 5 ಲಕ್ಷ ನೀಡಲು ಆರೋಪಿಗಳು ಒಪ್ಪಿಕೊಂಡಿದ್ದರಂತೆ. ಡಿಸಿಪಿಗಳ ಮುಂದೆ ಹೇಳಿಕೆ ನೀಡುವ ವೇಳೆ ಆರೋಪಿಗಳು ಈ ಅಂಶ ಬಾಯಿಬಿಟ್ಟಿದ್ದಾರೆ.
ಈ ಡೀಲ್ ಓಕೆ ಆದ ತಕ್ಷಣ ಒಂದಿಡೀ ರಾತ್ರಿ ಠಾಣೆಯಲ್ಲಿ ಇಟ್ಟುಕೊಂಡಿದ್ದರೂ, ತಾವೇ ವಿಡಿಯೊ ಮಾಡಿ ರೆಡ್ ಹ್ಯಾಂಡ್ ಆಗಿ ಎಣ್ಣೆ ಸಮೇತ ಇಬ್ಬರನ್ನೂ ವಶಕ್ಕೆ ಪಡೆದರೂ ಅವರ ಹೆಸರು ಮಾತ್ರ ಎಫ್ಐಆರ್ ನಲ್ಲಿ ಇಲ್ಲ. ಈ ನಡುವೆ 5 ಲಕ್ಷ ಹಣ ಹೊಂದಿಸಲು ತಮ್ಮ ಕುಟುಂಬಕ್ಕೆ ಹೇಳುವಂತೆ ಎಸಿಪಿ, ಆರೋಪಿ ಗುಪ್ತಾಗೆ ಹೇಳಿದ್ದರಂತೆ. ಅದರಂತೆ ತಾಯಿಗೆ ಕರೆ ಮಾಡಿ ಗುಪ್ತಾ ಹಣ ಅರೆಂಜ್ ಮಾಡಲು ಹೇಳಿದ್ದರಂತೆ. ಅಲ್ಲದೇ ನಡೆದ ಘಟನೆ ಬಗ್ಗೆಯೂ ತಾಯಿ ಬಳಿ ಆರೋಪಿ ವಿಶೇಶ್ ಗುಪ್ತಾ ಹೇಳಿದ್ದಾನೆ.
ಆಮೇಲೆ ಎಸಿಪಿ ವಾಸು ಓರ್ವ ಪೊಲೀಸ್ ಪೇದೆ ಜನಾರ್ಧನನನ್ನು ಮಾತನಾಡಲು ಹೇಳಿ, ನೀನು ಖುಷಿಯಾಗಿ ಆಚೆ ಹೋಗಲು 50 ಲಕ್ಷ ಕೊಡು ಎಂದು ಹೇಳಿಸಿದ್ದರಂತೆ. ಅದರಲ್ಲಿ ಎಸಿಪಿ, ಡಿಸಿಪಿ, ಕಮೀಷನರ್​ಗೆ ಕೊಡಬೇಕು ಅಂತಾ ಹೇಳಿದ್ದನಂತೆ. ಅಲ್ಲದೇ ಆರೋಪಿಯ ಜಮೀನನ್ನು ತಾವು ಹೇಳಿದವರಿಗೆ ಬರೆಯಬೇಕು. 25 ಲಕ್ಷ ಹಣ ಕೊಟ್ಟು ವಾಪಸ್ಸು ಟ್ರಾನ್ಸ್​ಫರ್ ಮಾಡಿಕೋ ಎಂದು ದುರ್ನಡತೆ ತೋರಿದ್ದಾರೆ. ಬಳಿಕ ಗುಪ್ತಾ ಜತೆ ತನ್ನ ಸ್ನೇಹಿತರು ಮತ್ತು ಕುಟುಂಬದವರಿಗೆ ಹೇಳಿ ಗುಪ್ತಾ ತಾಯಿ ಬಳಿ ಇದ್ದ ಆಭರಣಗಳನ್ನು ಅಡಮಾನ ಇರಿಸಿ ಹಣ ಪಡೆದುಕೊಂಡಿದ್ದಾರೆ. ಬಳಿಕ ಆ ಹಣವನ್ನು ಪಿಸಿ ಜನಾರ್ಧನ ಪಡೆದುಕೊಂಡಿದ್ದಾಗಿ ತನಿಖೆಯಲ್ಲಿ ಪತ್ತೆಯಾಗಿದೆ.
ಡಿಜಿಪಿಗೆ ದೂರು
ಇನ್ನು ಈ ಬೆಳವಣಿಗೆ ನಡುವೆ ವಿಶೇಶ್ ಗುಪ್ತಾ ತಾಯಿ ಈ ಬಗ್ಗೆ ಸಂಬಂಧಿಕರು ಮತ್ತು ಸ್ನೇಹಿತರ ಬಳಿ ಹೇಳಿದ್ದಾರೆ. ಅವರೆಲ್ಲಾ ನೇರವಾಗಿ ಡಿಜಿಪಿ ಪ್ರವೀಣ್ ಸೂದ್ ರವರ ಭೇಟಿ ಮಾಡಿ ಈ ಬಗ್ಗೆ ಹೇಳಿದ್ದಾರೆ. ಈ ವಿಷಯ ಹೇಗೋ ಎಸಿಪಿ ವಾಸುಗೆ ಗೊತ್ತಾಗುತ್ತೆ. ತಕ್ಷಣ ವಾಸು ಮತ್ತೊಂದು ಮಾಸ್ಟರ್ ಪ್ಲಾನ್ ಮಾಡುತ್ತಾರೆ. ತಕ್ಷಣ ಎಸಿಪಿ ವಾಸು ಅಂದು ರಜೆಯಲ್ಲಿದ್ದ ಇನ್ಸ್​ಪೆಕ್ಟರ್ ಬಿ.ಕೆ. ಕಿಶೋರ್ ಕುಮಾರ್ ಅವರನ್ನು ಠಾಣೆಗೆ ಕರೆಯಿಸಿ, ಅವರ ಮೂಲಕ ವಾಹನ ಜಪ್ತಿ ಮಾಡಿ, ಮದ್ಯವನ್ನು ಸೀಜ್ ಮಾಡಿಕೊಂಡು ಹೆಸರಿಲ್ಲದ ಆರೋಪಿಗಳ ಮೇಲೆ ಎಫ್ಐಆರ್ ಮಾಡಿಸುತ್ತಾರೆ. ಆನಂತರ ಅವರನ್ನು ಸಂಜೆ ವೇಳೆಗೆ ಅರೆಸ್ಟ್ ಮಾಡಿರುವುದನ್ನು ತೋರಿಸಿ ಏ.೧೨ ರ ಸಂಜೆ 5:30 ಸ್ಟೇಷನ್ ಬೇಲ್ ನೀಡಿ ಬಿಡುಗಡೆ ಮಾಡಿ ಕಳುಹಿಸಿದ್ದಾರೆ.
 ಘಟನೆ ಬಗ್ಗೆ ಲಿಖಿತ ದೂರು ನೀಡಿದ ಆರೋಪಿ ವಿಶೇಷ್
ಇನ್ನು ಈ ಬಗ್ಗೆ ಗರಂ ಆದ ಡಿಜಿಪಿ ಪ್ರವೀಣ್ ಸೂದ್, ಆರೋಪಿಯಿಂದ ಲಿಖಿತ ದೂರು ನೀಡಲು ಸೂಚಿಸಿದ್ದರಂತೆ. ದೂರು ಪಡೆದುಕೊಂಡು ಅದನ್ನು ತನಿಖೆ ಮಾಡಲು ಪೂರ್ವ ವಿಭಾಗದ ಡಿಸಿಪಿ ಹಾಗೂ ಆಗ್ನೇಯ ವಿಭಾಗದ ಡಿಸಿಪಿಗೆ ಸೂಚಿಸಿದ್ದಾರೆ. ಇತ್ತ ಈ ಬಗ್ಗೆ ಡಿಸಿಪಿಗಳು ತನಿಖೆ ಮಾಡಿದಾಗ ಎಸಿಪಿ ವಾಸು ಮತ್ತು ಪೇದೆ ಜನಾರ್ಧನ ಮಾಡಿರುವ ಹಗರಣಗಳು ಬಹಿರಂಗವಾಗಿದೆ.