ಲಂಡನ್:
ಪಂಜಾಬ್ ನ್ಯಾಷನಲ್ ಬ್ಯಾಾಂಕ್‌ಗೆ ಕೋಟ್ಯಂತರ ರು.ಗಳನ್ನು ವಂಚಿಸಿ ದೇಶಭ್ರಷ್ಟ ಆರ್ಥಿಕ ಅಪರಾಧಿಯಾಗಿರುವ ವಜ್ರೋದ್ಯಮಿ ನೀರವ್ ಮೋದಿ ಭಾರತಕ್ಕೆ ಗಡಿಪಾರಾಗುವ ಕಾಲ ಸನ್ನಿಹಿತವಾಗುತ್ತಿದೆ.
ಅಕ್ರಮ ಹಣ ವರ್ಗಾವಣೆ ಸೇರಿದಂತೆ ಹಲವು ಆರ್ಥಿಕ ಅಪರಾಧಗಳಲ್ಲಿ ಶಾಮೀಲಾಗಿರುವ ಕಳಂಕಿತ ವಜ್ರ ವ್ಯಾಪಾರಿ ನೀರವ್ ಮೋದಿಯನ್ನು ಭಾರತಕ್ಕೆ ಹಸ್ತಾಾಂತರ ಮಾಡುವ ಪ್ರಕರಣ ಕುರಿತು ಬ್ರಿಟನ್ ನ್ಯಾಯಾಲಯವೊಂದರಲ್ಲಿ ಸೋಮವಾರದಿಂದ ನಡೆಯಲಿದ್ದು, ಮಹತ್ವದ ತೀರ್ಪು ಹೊರಬೀಳುವ ಸಾಧ್ಯತೆ ಇದೆ.
ಕರೋನಾ ವೈರಸ್ ಹಾವಳಿಯಿಂದಾಗಿ ಲಂಡನ್‌ನಲ್ಲಿ ಲಾಕ್‌ಡೌನ್ ಜಾರಿಯಲ್ಲಿದ್ದು, ಸೋಮವಾರ ನೀರವ್‌ರನ್ನು ಅಜ್ಞಾತ ಸ್ಥಳದಲ್ಲಿ ತಾತ್ಕಾಲಿಕವಾಗಿ ರೂಪಿಸಲಾಗಿರುವ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗುತ್ತದೆ. ಕಳೆದ ವರ್ಷ ಮಾರ್ಚ್‌ನಲ್ಲಿ ಬಂಧಿತನಾದ 49 ವರ್ಷದ ನೀರವ್ ಈಗ ವಾಯುವ್ಯ ಲಂಡನ್‌ನ ವ್ಯಾಾಂಡ್‌ಸ್ ಜೈಲಿನಲ್ಲಿದ್ದು, ಸೋಮವಾರ ವಿಶೇಷ ಭದ್ರತೆಯೊಂದಿಗೆ ಗೋಪ್ಯ ನ್ಯಾಯಾಲಯದ ಮುಂದೆ ವಿಚಾರಣೆಗೆ ಹಾಜರು ಮಾಡಲಾಗುತ್ತದೆ.
ಸೆರೆಮನೆಗಳು ಮತ್ತು ನ್ಯಾಯಾಲಯಗಳಲ್ಲಿ ಸಾಮಾಜಿಕ ಅಂತರ ನಿಯಮ ಅನುಸರಿಸಬೇಕಾದ ಅಗತ್ಯವಿದ್ದು, ಜಿಲ್ಲಾ ನ್ಯಾಯಾಧೀಶ ಸಾಮ್ಯುಯೆಲ್ ಗೂಜೀ ವಿಡಿಯೋ ಲಿಂಕ್ ಮೂಲಕ ನೀರವ್‌ರನ್ನು ಹಾಜರುಪಡಿಸುವುದಕ್ಕೆ ಬದಲಾಗಿ ಪರ್ಯಾಯ ವ್ಯವಸ್ಥೆಗೆ ಸೂಚಿಸಿದ್ದರು. ಇದಕ್ಕಾಗಿ ಪ್ರತ್ಯೇಕ ನ್ಯಾಯಾಲಯವೊಂದನ್ನು ರಚಿಸಲಾಗಿದ್ದು, ಸೀಮಿತ ಸಂಖ್ಯೆ ಕಾನೂನು ಪ್ರತಿನಿಧಿಗಳು ಮಾತ್ರ ಉಪಸ್ಥಿತರಿರುವರು. ಸೋಮವಾರ ಆರಂಭವಾಗುವ ವಿಚಾರಣೆ ಐದು ದಿನಗಳ ಕಾಲ ನಡೆಯಲಿದ್ದು, ಮಹಾವಂಚಕನನ್ನು ಭಾರತಕ್ಕೆ ಗಡಿಪಾರು ಮಾಡುವ ಬಗ್ಗೆ ಮಹತ್ವದ ತೀರ್ಪು ಪ್ರಕಟವಾಗುವ ಸಾಧ್ಯತೆ ಇದೆ.
ನೀರವ್‌ರನ್ನು ಭಾರತಕ್ಕೆ ಹಸ್ತಾಾಂತರಿಸಬೇಕೆಂಬ ಕೇಂದ್ರ ಸರಕಾರದ ಮನವಿಗೆ ಬ್ರಿಟನ್ ಸರಕಾರ ಸಮ್ಮತಿಸಿತ್ತಾದರೂ, ವಜ್ರೋದ್ಯಮಿ ಕಾನೂನು ಸಮರ ಹೂಡಿರುವುದರಿಂದ ಗಡಿಪಾರು ಪ್ರಕ್ರಿಯೆ ವಿಳಂಬವಾಗುತ್ತಿದೆ.