Thursday, 12th December 2024

ಮಹಿಳೆ ಹತ್ಯೆಗೆ ಯತ್ನ; ಪ್ರಿಯಕರನ ಬಂಧನ

ವಿಶ್ವವಾಣಿ ಸುದ್ದಿ ಮನೆ

ಬೆಂಗಳೂರು:

ಮಹಿಳೆಯರನ್ನು ಉಸಿರುಗಟ್ಟಿಸಿ ಹತ್ಯೆ ಮಾಡಲು ಯತ್ನಿಸಿದ
ಪ್ರಿಯಕರನನ್ನು ರಾಜರಾಜೇಶ್ವರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಿಇಎಂಎಲ್ ನಿವಾಸಿ 34 ವರ್ಷದ ಮಹಿಳೆಯ ಮುಖಕ್ಕೆ ದಿಂಬುವಿನಿಂದ ಉಸಿರುಗಟ್ಟಿಸಿ ಹತ್ಯೆ
ಮಾಡಲು ಯತ್ನಿಸಿದ್ದ. ಅಸ್ವಸ್ಥಗೊಂಡಿದ್ದ ಆಕೆಯನ್ನು ಕುಟುಂಬಸ್ಥರು ಸ್ಥಳೀಯ
ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೃತ್ಯ ಎಸಗಿದ ಉತ್ತರಹಳ್ಳಿ ನಿವಾಸಿ ಶಿವಕುಮಾರ್ (40)
ಬಂಧಿಸಲಾಗಿದೆ ಎಂದು ರಾಜರಾಜೇಶ್ವರಿನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.
ಉತ್ತರಹಳ್ಳಿ ನಿವಾಸಿಯಾಗಿರುವ ಶಿವಕುಮಾರ್‌ಗೆ ಮದುವೆಯಾಗಿದ್ದು, ಒಬ್ಬ
ಪುತ್ರನಿದ್ದಾನೆ. ಚನ್ನಸಂದ್ರ ಮುಖ್ಯರಸ್ತೆಯಲ್ಲಿ ಗ್ರಾೃನೆಟ್ ವ್ಯವಹಾರ
ನಡೆಸುತ್ತಿದ್ದ. ಟೇಲರಿಂಗ್ ಕೆಲಸ ಮಾಡಿಕೊಂಡಿದ್ದ ಸಂತ್ರಸ್ತೆ ಮಹಿಳೆಗೆ ಪುತ್ರಿ
ಇದ್ದಾರೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ 3 ವರ್ಷದ ಹಿಂದೆ ಪತಿ ತೊರೆದಿದ್ದ.
ಬಿಇಎಂಎಲ್‌ನಲ್ಲಿ ಪುತ್ರಿ ಜತೆ ನೆಲೆಸಿದ್ದರು. ಇದೇ ವೇಳೆ ಶಿವಕುಮಾರ್ ಜತೆ ಸಲುಗೆ
ಬೆಳೆದಿತ್ತು. ಈ ವಿಚಾರ ಶಿವಕುಮಾರ್ ಪತ್ನಿಗೆ ಗೊತ್ತಾಗಿತ್ತು. ಈ ಹಿನ್ನೆಲೆಯಲ್ಲಿ
ಆಕೆಯ ಜತೆಗಿನ ಸ್ನೇಹ ತೊರೆಯುವಂತೆ ಶಿವಕುಮಾರ್‌ಗೆ ಒತ್ತಾಯಿಸಿದ್ದರು.
ಇದೇ ವಿಚಾರಕ್ಕೆ ದಂಪತಿ ನಡುವೆ ಗಲಾಟೆಯಾಗಿತ್ತು. ಶಿವಕುಮಾರ್ ಏ.1ರಂದು ಸ್ನೇಹಿತೆ
ಮನೆಗೆ ಹೋಗಿದ್ದ. ಆಗ ಪತ್ನಿಯ ಜತೆಗಿನ ವಿಚಾರವನ್ನು ಸ್ನೇಹಿತೆ ಮುಂದೆ
ಹೇಳಿಕೊಂಡಿದ್ದ. ನಮ್ಮಿಬ್ಬರ ಸ್ನೇಹ ಇಲ್ಲಿಗೆ ನಿಲ್ಲಿಸೋಣ. ಮುಂದುವರಿಸುವುದು ಬೇಡ
ಎಂದಿದ್ದ. ಇದೇ ವಿಚಾರಕ್ಕೆ ಇಬ್ಬರ ನಡುವೆ ಮಾತಿಗೆಮಾತು ಬೆಳೆದಿದೆ. ಜಗಳ ವಿಕೋಪಕ್ಕೆ
ತಿರುಗಿದ್ದು, ಶಿವಕುಮಾರ್ ದಿಂಬುನಿಂದ ಸ್ನೇಹಿತೆಯ ಮುಖಕ್ಕೆ ಉಸಿರುಗಟ್ಟಿಸಿದ್ದಾನೆ.
ಈ ವೇಳೆ ಆಕೆ ತೀರ ಅಸ್ವಸ್ಥಗೊಂಡಿದ್ದು, ಅದನ್ನು ಕಂಡು ಹೆದರಿ ಪರಾರಿಯಾಗಿದ್ದ.
ಕುಟುಂಬಸ್ಥರು ಆಕೆಗೆ ಫೋನ್ ಮಾಡಿದಾಗ ಆಕೆ ಕರೆ ಸ್ವೀಕರಿಸಿಲ್ಲ. ಅನುಮಾನಗೊಂಡು ಮನೆಗೆ ಬಂದು
ನೋಡಿದಾಗ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.